ತುಮಕೂರು

ಪಡಿತರ ಕಾರ್ಡ್ ವಿತರಣೆ: ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

Published On :

ಕುಣಿಗಲ್: ಗ್ರಾಮ ಪಂಚಾಯಿತಿಯ ಪಡಿತರ ಕಾರ್ಡ್ ವಿತರಣೆ ಅವ್ಯವಸ್ಥೆಯಿಂದ ಬೇಸತ್ತ ಗ್ರಾಮಸ್ಥರು, ಭಾನುವಾರ ಕಾರ್ಡ್ ವಿತರಕರನ್ನು ಹೊರಗೆ ಕಳಿಸಿ, ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಾಗಸಂದ್ರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ನಾಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 9 ಪ್ರಮುಖ ಹಳ್ಳಿಗಳು ಮತ್ತು 32 ಸಣ್ಣಹಳ್ಳಿಗಳು ಇದ್ದು ಸಾವಿರದ ನೂರಕ್ಕೂ ಹೆಚ್ಚು ಪಡಿತರ ಕಾರ್ಡ್‌ದಾರರನ್ನು ಹೊಂದಿದೆ. ಸದರಿ ಕಾರ್ಡ್ ದಾರರಿಗೆ ಪರಿಷ್ಕೃತ ಪಡಿತರ ಕಾರ್ಡ್ ವಿತರಿಸಲು ಗ್ರಾಪಂನಲ್ಲಿ ಕಳೆದೊಂದು ವಾರದಿಂದ ವ್ಯವಸ್ಥೆ ಮಾಡಲಾಗಿದೆ. ಈ ರೀತಿ ಕಾರ್ಡ್ ಪಡೆಯಬೇಕಾದಲ್ಲಿ ಗ್ರಾಪಂಗೆ ಬಾಕಿ ಇರುವ ಕಂದಾಯ ಪಾವತಿ ಮಾಡಿ, ಟೋಕನ್ ಪಡೆದು ನೂರರಿಂದ ನೂರಾಐವತ್ತು ರು. ಪಾವತಿಸಿ ಪಡಿತರ ಕಾರ್ಡ್‌ಗೆ ಭಾವಚಿತ್ರ ತೆಗೆಸಿ ನಂತರ ಪಡೆಯಬೇಕಿದೆ.
ಆದರೆ ಸ್ಥಳೀಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ಭಾನುವಾರ ಮುಖಂಡ ಕುಮಾರ, ರಾಜಣ್ಣ ನೇತೃತ್ವದಲ್ಲಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದೇಶಿಸಿ ಮಾತನಾಡಿದ ಕುಮಾರ, ಗ್ರಾಮಪಂಚಾಯಿತಿ ಅಧ್ಯಕ್ಷರಾಗಲಿ, ಕಾರ್ಯದರ್ಶಿಯಾಗಲಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕರೆಂಟ್ ಇದ್ದರೆ ಸರ್ವರ್ ಇಲ್ಲ, ಸರ್ವರ್ ಇದ್ದರೆ ಕರೆಂಟ್ ಇಲ್ಲ. ದಿನಂಪ್ರತಿ ಗ್ರಾಮಾಂತರ ಪ್ರದೇಶದಿಂದ ಗ್ರಾಮಪಂಚಾಯಿತಿಗೆ ಕಾರ್ಡ್ ಪಡೆಯಲು ಕೆಲಸಕಾರ್ಯ ಬಿಟ್ಟು ಬಂದುಕಾಯಬೇಕಿದೆ. ಸತತ ಮೂರು ದಿನಗಳಿಂದಲೂ ಗ್ರಾಮಸ್ಥರು ಬಂದರೆ ಕಾರ್ಡ್‌ಗೆ ಫೋಟೋ ತೆಗೆದು ಪಡಿತರ ಕಾರ್ಡ್ ನೀಡುತ್ತಿಲ್ಲ. ಗ್ರಾಮಸ್ಥರಿಂದ ಕಂದಾಯ ವಸೂಲಿ ಮಾಡುವ ಗ್ರಾಪಂ ಜನರೇಟರ್ ವ್ಯವಸ್ಥೆ ಅಳವಡಿಸುವಂತೆ ಆಗ್ರಹಿಸಿ ಗ್ರಾಪಂ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪಡಿತರಕಾರ್ಡ್ ತೆಗೆಯಲು ನಿಯೋಜನೆಗೊಂಡಿದ್ದ ಸಿಬ್ಬಂದಿ ಗ್ರಾಪಂನಲ್ಲಿ ಹಳೇ ಕಾಲದ ಕಂಪ್ಯೂಟರ ವ್ಯವಸ್ಥೆ ಇದೆ. ಇದರಿಂದ ಕಾರ್ಡ್ ವಿತರಣೆಗೆ ತೊಂದರೆಯಾಗಿದೆ. ಹೊಸ ಕಂಪ್ಯೂಟರ್‌ಗಳನ್ನು ಬಾಡಿಗೆ ಆಧಾರದ ಮೇಲೆ ಹಾಕಿದ್ದು, ಇಲಾಖೆಯ ಪಂಚತಂತ್ರದ ಸರ್ವರ್ ಸರಿಯಾಗಿ ಕೆಲಸಮಾಡದ ಕಾರಣ ತೊಂದರೆಯಾಗಿದೆ. ಈ ಬಗ್ಗೆ ಸಹಕರಿಸುವಂತೆ ಮನವಿ ಮಾಡಿದ ಮೇರೆಗೆ, ಪ್ರತಿಭಟನಾಕಾರರು ಸೋಮವಾರದಿಂದ ಯಾವುದೇ ನೆಪಹೇಳದೆ ಸಮರ್ಪಕವಾಗಿ ಕಾರ್ಡ್ ವಿತರಿಸುವಂತೆ ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರೆಸುವ ಎಚ್ಚರಿಕೆನೀಡಿ ಪ್ರತಿಭಟನೆ ಹಿಂಪಡೆದರು. ಪ್ರಮುಖರಾದ ರಾಜಣ್ಣ, ಹುಚ್ಚಮ್ಮ, ವಸಂತಮ್ಮ, ಬೆಟ್ಟಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.