ತುಮಕೂರು

ಸಿದ್ಧಗಂಗಾ ಮಠದಲ್ಲಿ ದನಗಳ ಭಾರಿ ಜಾತ್ರೆ

Published On :

ತುಮಕೂರು: ನಗರದ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರೆ ಅಂಗವಾಗಿ ನಡೆದ ಉತ್ತಮ ರಾಸುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಜಾತ್ರೆ ಅಂಗವಾಗಿ ಕೆಲವು ಷರತ್ತುಗಳನ್ವಯ ಜಿಲ್ಲಾಡಳಿತದಿಂದ ಅನುಮತಿ ಪಡೆದು ನಡೆಸಿದ ರಾಸುಗಳ ಪ್ರದರ್ಶನದಲ್ಲಿ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ರಾಸುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ರಾಸುಗಳ ಪ್ರದರ್ಶನವನ್ನು ಡಾ. ಶಿವಕುಮಾರ ಮಹಾಸ್ವಾಮಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲುಬಾಯಿರೋಗ ಹಾಗೂ ಬರದ ನಡುವೆಯೂ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಜಾತ್ರೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಭಾಗವಹಿಸಿದ್ದವು. ಪ್ರದರ್ಶನದಲ್ಲಿ ಭಾಗವಹಿಸುವ ಸಲುವಾಗಿಯೇ ತುಮಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ರಾಸುಗಳು ಜಾತ್ರೆಗೆ ಬಂದಿವೆ.
ದನಗಳ ಜಾತ್ರೆಯಲ್ಲಿ ಹಳ್ಳಿಕಾರ್, ಕಿಲಾರಿ, ಅಮೃತಮಹಲ್ ಸೇರಿದಂತೆ ಕೆಲವು ಪ್ರಮುಖ ತಳಿಗಳ ರಾಸುಗಳು ಭಾಗವಹಿಸುವ ಮೂಲಕ ಜಾತ್ರೆಯ ಮೆರಗನ್ನು ಇಮ್ಮಡಿಗೊಳಿಸಿದ್ದವು. ಹಳ್ಳಿಕಾರ್ ತಳಿಯ ರಾಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದವು.
9 ಸಾವಿರ ರಾಸು:  ಪಶುವೈದ್ಯರಾದ ಡಾ.ಪ್ರಸನ್ನ ರೇಣುಕಾ ಅವರ ಪ್ರಕಾರ, ಈ ಸಾಲಿನ ಜಾತ್ರೆಯಲ್ಲಿ ಎಂಟರಿಂದ ಒಂಬತ್ತು ಸಾವಿರ ರಾಸುಗಳು ಭಾಗವಹಿಸಿದ್ದು, ಇಲ್ಲಿಗೆ ಬರುವ ಎಲ್ಲ ರಾಸುಗಳಿಗೆ ಕಾಲುಬಾಯಿ ರೋಗದ ಲಸಿಕೆ ಸೇರಿದಂತೆ ಕೆಲವು ಅಗತ್ಯ ರಾಸುಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ ಔಷಧಿಯನ್ನೂ ವಿತರಿಸಲಾಗಿದೆ. ಅಲ್ಲದೆ ಪ್ರತಿ ರಾಸುಗಳಿಗೆ ಸ್ವಚ್ಛವಾದ ವಾತಾವರಣ, ಪ್ರತ್ಯೇಕ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈ ಬಾರಿಯ ಜಾತ್ರೆಯಲ್ಲಿ ಅನುಸರಿಸಿದ್ದರಿಂದ ಯಾವುದೇ ತೊಂದರೆ ಆಗದ ರೀತಿಯಲ್ಲಿ ರಾಸುಗಳ ಪ್ರದರ್ಶನ ನಡೆಯುತ್ತಿದೆ ಎಂದು ತಿಳಿಸಿದರು.
ಬಹುಮಾನ: ಉತ್ತಮ ರಾಸುಗಳ ಪ್ರದರ್ಶನದಲ್ಲಿ ಹೋರಿಗಳ ಪೈಕಿ ಹಾಲುಹಲ್ಲು, ಎರಡುಹಲ್ಲು, ನಾಲ್ಕು ಹಲ್ಲು, ಆರು ಹಲ್ಲುಗಳ ಹೋರಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಪ್ರತಿ ಹಂತದ ಹೋರಿಗಳಿಗೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಅದೇ ರೀತಿ ಎತ್ತುಗಳ ಪೈಕಿಯೂ, ಹಾಲುಹಲ್ಲು, ಎರಡುಹಲ್ಲು, ನಾಲ್ಕುಹಲ್ಲು, ಆರು ಹಲ್ಲುಗಳ ಎತ್ತುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಅವುಗಳಿಗೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಅಲ್ಲದೆ ಉತ್ತಮ ಎತ್ತುಗಳ ಪೈಕಿ ಅತ್ಯುತ್ತಮ ಜೋಡಿ ಎತ್ತಿಗೆ ಚಾಂಪಿಯನ್ ಪಟ್ಟ ನೀಡಿ ಗೌರವಿಸಲಾಗುತ್ತದೆ.
6.25ಲಕ್ಷ ರು.ಗಳಿಗೆ ಮಾರಾಟ: ಪಶುವೈದ್ಯರು ಹಾಗೂ ಆಯ್ಕೆ ಸಮಿತಿಯ ತೀರ್ಪುಗಾರರು ಪ್ರತಿ ರಾಸುಗಳ, ಅಂದಚೆಂದ, ನಡಿಗೆ, ದೇಹದಾರ್ಢ್ಯತೆ ಮೊದಲಾದ ಮಾನದಂಡಗಳ ಮೇಲೆ ರಾಸುಗಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತದೆ.
ತುಮಕೂರು ತಾಲೂಕು ಚಿಕ್ಕಣ್ಣ ದೇವರಹಟ್ಟಿಯ ರೈತ ಪಾಪಣ್ಣ ಅವರು ಹೇಳುವ ಪ್ರಕಾರ, ಈ ಬಾರಿಯ ರಾಸುಗಳ ಪ್ರದರ್ಶನಕ್ಕೆ ಭಾಗವಹಿಸುವ ಅಂಗವಾಗಿ ತಮ್ಮ ರಾಸುಗಳಿಗೆ ಉತ್ತಮ ಆಹಾರ, ಮೊಟ್ಟೆ ಸೇರಿದಂತೆ ಇತರೆ ಅಗತ್ಯ ಪೌಷ್ಟಿಕ ಆಹಾರಗಳನ್ನು ನೀಡುವ ಮೂಲಕ ದಷ್ಟಪುಷ್ಟವಾಗಿ ಸಾಕಲಾಗಿದೆ. ಈ ಬಾರಿಯ ಪ್ರದರ್ಶನದಲ್ಲಿ ತಮ್ಮ ನಾಲ್ಕು ಜೊತೆ ರಾಸುಗಳು ಭಾಗವಹಿಸಿದ್ದು, ಈಗಾಗಲೇ ತಮ್ಮ ಆರುಹಲ್ಲು ರಾಸುಗಳು ಐದೂವರೆ ಲಕ್ಷಕ್ಕೆ ಮೈಸೂರಿನ ರೈತರಿಗೆ ಮಾರಾಟವಾಗಿದ್ದರೆ, ಹೊನ್ನೇನಹಳ್ಳಿಯ ಸುಧಾಕರ್ ಎಂಬುವವರ ಕಡೆಹಲ್ಲು ಜೋಡಿ ಎತ್ತು 6.25ಲಕ್ಷ ರು.ಗಳಿಗೆ ಮೈಸೂರಿನ ರೈತರಿಗೆ ಮಾರಾಟವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ರಾಸುಗಳ ಪ್ರದರ್ಶನಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಭಾಗವಹಿಸಿವೆ ಎಂದು ತಮ್ಮ ಅನುಭವ ಹಂಚಿಕೊಂಡರು.
ರೈತ ಹಾಗೂ ರಾಸುಗಳ ಆಯ್ಕೆ ಸಮಿತಿ ಸದಸ್ಯರಾದ ಕೋರಿ ಮಂಜುನಾಥ್ ಅವರು ಹೇಳುವಂತೆ, ಕಳೆದ 30 ವರ್ಷಗಳಿಂದ ತಾವು ರಾಸುಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದು, ಇಲ್ಲಿ ಈ ಬಾರಿ ನಡೆದ ಐದು ದಿನಗಳ ರಾಸುಗಳ ಪ್ರದರ್ಶನದಲ್ಲಿ ತಮ್ಮ ಒಂದು ಜೊತೆ ನಾಲ್ಕು ಹಲ್ಲಿನ ರಾಸುಗಳು ಭಾಗವಹಿಸಿದ್ದು ಮಂಡ್ಯದ ರೈತರಿಗೆ ನಾಲ್ಕು ಲಕ್ಷಕ್ಕೆ ಮಾರಾಟವಾಗಿದೆ ಎಂದರು. ಈ ಪ್ರದರ್ಶನದ ಜೊತೆಗೆ ರೈತರಿಗಾಗಿಯೇ ಆಯೋಜಿಸಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಿಂದಲೂ ರೈತರಿಗೆ ಸಾಕಷ್ಟು ಉಪಯೋಗವಾಗಿದ್ದು, ಪ್ರದರ್ಶನದಲ್ಲಿ ಆಧುನಿಕ ವ್ಯವಸಾಯ ಪದ್ಧತಿ ಬಗ್ಗೆಯೂ ತಮಗೆ ಮಾಹಿತಿ ಸಿಕ್ಕಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.