ತುಮಕೂರು

ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನೆ

Published On :

ತುಮಕೂರು: ರಾಜ್ಯ ಸರ್ಕಾರ ಪದವಿ ಪೂರ್ವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಏರಿಸಿರುವುದನ್ನು ವಿರೋಧಿಸಿ ತುಮಕೂರಿನಲ್ಲಿ ಎಬಿವಿಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ನಂತರ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಂದಿಲ್ಲೊಂದು ತೊಂದರೆ ನೀಡುತ್ತಿದೆ. ಇದೀಗ ರಾಜ್ಯಾದ್ಯಂತ ಪದವಿ ಪೂರ್ವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರಿ ಕಾಲೇಜುಗಳಲ್ಲಿ ಕಾಲೇಜು ಶುಲ್ಕ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ರು. 173, ವಿಜ್ಞಾನ ವಿಭಾಗಗಳಿಗೆ ರು. 243 ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ರು. 341 ವಿಜ್ಞಾನ ವಿಭಾಗಗಳಿಗೆ ರು. 411ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಪರೀಕ್ಷಾ ಶುಲ್ಕ ರು. 50  ಹೆಚ್ಚುಗೊಳಿಸಿದೆ. ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ವಿಳಂಬ ದಾಖಲಾತಿ ಶುಲ್ಕ, ರಿಪಿಟರ್ ಪರೀಕ್ಷಾ ಶುಲ್ಕ, ತಡವಾಗಿ ಶುಲ್ಕ ತುಂಬಿಸುವ ವಿದ್ಯಾರ್ಥಿಗಳಿಗೆ ದಂಡ ಶುಲ್ಕ, ವಿಶೇಷ ದಂಡ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ಶಿಕ್ಷಣ ಹೊರೆಯಾಗಿದೆ: ಖಾಸಗಿ ಕಾಲೇಜುಗಳಿಗೆ ವಿದಿಸುವ ಕಾಲೇಜು ಪ್ರಾಂಭಿಸುವ ಶುಲ್ಕ, ನೋಂದಣಿ ಶುಲ್ಕ, ಹೊಸ ವಿಷಯಗಳ ಪ್ರಾಂಭಿಸುವ ಶುಲ್ಕ, ವಾರ್ಷಿಕ ನವೀಕರಣ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಶುಲ್ಕವನ್ನು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದಲೇ ಸಂಗ್ರಹಿಸಿಕೊಡಬೇಕಾಗಿರುವುದರಿಂದ ಇದು ಕೂಡ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅನೇಕ ಕಷ್ಟಗಳೊಂದಿಗೆ ವಿದ್ಯಾಭ್ಯಾಸ ಮಾಡುತ್ತಾರೆ. ಆರ್ಥಿಕ ಸಮಸ್ಯೆಗಳ ಕಾರಣಕ್ಕಾಗಿಯೆ ವಿದ್ಯಾರ್ಥಿಗಳು ಇಂದಿಗೂ ಸರ್ಕಾರಿ ಕಾಲೇಜುಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ. ಬಡ ವಿದ್ಯಾರ್ಥಿಗಳಿಗೆ ಈ ಶುಲ್ಕ ತುಂಬಾ ಹೊರೆಯಾಗಿದೆ. ಅನೇಕ ಕಡು ಬಡತನದ ವಿದ್ಯಾರ್ಥಿಗಳು ಇದನ್ನು ತುಂಬಲಾಗದೆ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯು ಇದೆ. ಆದ್ದರಿಂದ ಈ ರೀತಿ ಏಕಾಏಕಿ ಏರಿಸಿರುವ ಶುಲ್ಕ  ಹಿಂತೆಗೆದುಕೊಳ್ಳಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ಚುಣಾವಣಾ ತಂತ್ರವಷ್ಟೆ: ಶಿಕ್ಷಣಕ್ಕೆ ಉತ್ತೇಜನ ನೀಡಲು ಸರ್ಕಾರ ಒಂದೆಡೆ ಅನೇಕ ಆಕರ್ಷಕ ಯೋಜನೆ ರೂಪಿಸುತ್ತಿದೆ. ಇವೆಲ್ಲವು ಚುಣಾವಣಾ ತಂತ್ರವಷ್ಟೆ ಎನ್ನುವುದು ಸರ್ಕಾರದ ನಡೆಯಿಂದ ಸ್ಪಷ್ಟವಾಗುತ್ತಿದೆ. ಬಡವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ನಿರಂತರವಾಗಿ ರಾಜ್ಯ ಸರ್ಕಾರ ನಡೆಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಸಿಗುವ ಕಾರಣಕ್ಕಾಗಿ ಕೂಲಿ ಕಾರ್ಮಿಕರ ಮಕ್ಕಳು, ಕಡುಬಡವರು, ಬಡತನ ರೇಖೆಗಿಂತ ಕೆಳಗಿನವರು ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಆದರೆ ಈ ರೀತಿ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುದರಿಂದ ಇಂತಹ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುವುದು ಸರ್ಕಾರಕ್ಕೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಡವರ ವಿರೋಧಿ ನೀತಿ ನಿಲ್ಲಿಸಿ: ಸರ್ಕಾರ ಬಡವರಿಗೆ ಆಕರ್ಷಕ ಯೋಜನೆ ರೂಪಿಸುವ ಸಲುವಾಗಿ ಬಡತನವನ್ನೇ ಪೋಷಿಸುತ್ತಿದೆಯೇ ಎಂಬಾ ಅನುಮಾನ ಉಂಟಾಗಿದೆ. ಆದ್ದರಿಂದ ಸರ್ಕಾರ ತನ್ನ ಶಿಕ್ಷಣ ವಿರೋಧಿ, ಬಡವರ ವಿರೋಧಿ ನೀತಿ ತಕ್ಷಣ ನಿಲ್ಲಿಸಬೇಕು. ಏರಿಸಿರುವ ಶುಲ್ಕವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.