ಶೋಷಿತರು ಜಾತಿ ಕಸುಬನ್ನೇ ನಂಬಿ ಕೂರಬಾರದು
ಕ.ಪ್ರ.ವಾರ್ತೆ ತುಮಕೂರು ಜ.5
ಶೋಷಿತ ಸಮುದಾಯಗಳು ತಮ್ಮ ಜಾತಿ ಕಸುಬುಗಳನ್ನೇ ನಂಬಿಕೊಳ್ಳದೆ ಬದಲಾವಣೆಗೆ ತಕ್ಕಂತೆ ಅರ್ಥಿಕ
ಸದೃಢತೆಯನ್ನು ತಂದುಕೊಡುವ ವೃತ್ತಿಗಳನ್ನು ಕೈಗೊಳ್ಳಬೇಕೆಂದು ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಸಿದ್ದಗಂಗಾ ಬಡಾವಣೆಯಲ್ಲಿರುವ ಕುಂಬಾರರ ಸಂಘದ ಅವರಣದಲ್ಲಿ ಶ್ರೀ ಕುಂಭೇಶ್ವರಿ ಮಹಿಳಾ ಸಂಘದ ಐದನೇ ವಾರ್ಷಿಕೋತ್ಸವ, ಗಣ್ಯರಿಗೆ ಸನ್ಮಾನ ಹಾಗೂ ಪವಾಡ ರಸಹ್ಯ ಬಯಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ನ ಹಾವಳಿಯಿಂದಾಗಿ ಕುಂಬಾರಿಗೆ ಇಂದು ಅಂತಹ ಬೇಡಿಕೆಯಿಲ್ಲ. ವಾಸ್ತವವನ್ನು ಅರಿತುಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮೂಡುವ ಮೂಲಕ ಅವರು ಬೇರೆ ವೃತ್ತಿಯನ್ನು ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಸಲಹೆ ನೀಡಿದರು.
ಶೋಷಿತ ವರ್ಗಗಳಿಗೆ ವಿದ್ಯೆ ಎಂಬುದು ಸಂಜೀವಿನಿಯಿದ್ದಂತೆ. ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಡುತ್ತದೆ. ಹಿಂದಿನ ಕಾಲದಲ್ಲಿ ಶಾಲಾ ಕಾಲೇಜುಗಳು ಅಷ್ಟಾಗಿ ಇರಲಿಲ್ಲ. ಆದರೆ ಇಂದು ಕಾಲ ಬದಲಾಗಿದ್ದು, ಕೈ ಅಳತೆ ದೂರದಲ್ಲಿ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳು ಇರುವುದರಿಂದ ಮಕ್ಕಳು ತಮಗೆ ಇಷ್ಟ ಬಂದ ವಿಷಯಗಳಲ್ಲಿ ಉತ್ತಮವಾಗಿ ಓದಿ ಒಳ್ಳೆಯ ಹೆಸರು ಪಡೆಯುವ ಜೊತೆಗೆ ಒಳ್ಳೆಯ ಉದ್ಯೋಗ ಪಡೆಯುವಂತಾಗಬೇಕು. ಇದು ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಕೆ.ಎನ್.ಆರ್ ನುಡಿದರು.
ಒಳ್ಳೆಯ ಬೆಳವಣಿಗೆ: ಧ್ವನಿಯಿಲ್ಲದ ಸಮಾಜದ ಜನರು ಅದರಲ್ಲಿಯೂ ಮಹಿಳೆಯರು ಇಂದು ಒಗ್ಗೂಡಿ ಸಂಘ ಕಟ್ಟಿ ಅದರ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಒಳ್ಳೆಯ ಬೆಳೆವಣಿಗೆ. ಅರ್ಥಿಕ ಸದೃಢತೆಯ ಕೊರತೆಯಿಂದಾಗಿ ಮನೆಯಿಂದ ಹೊರಬರುವುದೇ ಕಷ್ಟವಾಗಿರುವ ಈ ಕಾಲದಲ್ಲಿ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬುದ್ಧಿವಂತರು ಒಂದೇ ವರ್ಗದಲ್ಲಿ ಇಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸೋಮಾರಿಗಳಿಗೆ ಬದುಕಲು ಅವಕಾಶವಿಲ್ಲ. ಆದ್ದರಿಂದ ಬೇರೆ ಸಮುದಾಯದ ಬೆಳವಣಿಗೆಯನ್ನು ನೋಡಿ ಅಸೂಯೆ ಪಡುವ ಬದಲು ಅದನ್ನೇ ಮಾದರಿಯಾಗಿಟ್ಟುಕೊಂಡು ನಾವು ಸಮಾಜದಲ್ಲಿ ಮೇಲೆ ಬರುವ ಯೋಜನೆ ರೂಪಿಸಬೇಕಾಗಿದೆ ಎಂದ ಅವರು, ಮೂಢನಂಬಿಕೆ, ಪವಾಡದ ಹೆಸರಿನಲ್ಲಿ ಇಂದು ಶೋಷಣೆಗೆ ಒಳಗಾಗುತ್ತಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿವೆ. ಇದನ್ನು ವಿರೋಧಿಸಬೇಕೆಂದರೆ ಮೊದಲು ನಾವು ಮೂಢನಂಬಿಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಕೆಲಸವನ್ನು ಹುಲಿಕಲ್ ನಟರಾಜ್ ಅವರ ಮೂಲಕ ಕುಂಭೇಶ್ವರಿ ಮಹಿಳಾ ಸಂಘ ಮಾಡುತ್ತಿದೆ ಎಂದರು.
ಕೆ.ಎನ್. ರಾಜಣ್ಣ, ಹುಲಿಕಲ್ ನಟರಾಜು, ಶಿವಕುಮಾರ್, ನಗರಸಭೆಯ ಅಧ್ಯಕ್ಷೆ ಗೀತಾ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕುಂಭೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಸೌಭಾಗ್ಯ ಅಂಪಣ್ಣ ವಹಿಸಿದ್ದರು. ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಜಿ. ಸಿದ್ದನಂಜಶೆಟ್ಟಿ, ಕುಂಭೇಶ್ವರಿ ಮಹಿಳಾ ಸಂಘದ ಪದಾಧಿಕಾರಿಗಳಾದ ಲಕ್ಷ್ಮಮ್ಮ, ರಾಧಾ, ಮಹಾಲಕ್ಷ್ಮಿ, ಜಯಸುಧಾ, ಕಮಲಾಕ್ಷಿ,ಪುಷ್ಪ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

