ಡಿಕೆಶಿ, ಬೇಗ್ ಸಂಪುಟ ಸೇರ್ಪಡೆ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ತುಮಕೂರು ಜ.6
ಭ್ರಷ್ಟಾಚಾರ ಆರೋಪ, ಕಳಂಕ ಎದುರಿಸುತ್ರಿರುವ ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ವಿರೋಧಿಸಿ ತುಮಕೂರು ಜಿಲ್ಲಾ ಭಾರತೀಯ ಜನತಾ ಪಕ್ಷ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಾನೇ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸಿ, ಮತ್ತೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ರಾಜ್ಯದ ಜನತೆಯನ್ನು ನಿರಂತರವಾಗಿ ವಂಚಿಸುತ್ತಿದೆ. ಆರೋಪ ಎದುರಿಸುತ್ತಿರುವ ಡಿಕೆಶಿ, ರೋಷನ್ ಬೇಗ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ತಾವೇ ನೀಡಿದ್ದ ಮಾತಿಗೆ ತಪ್ಪಿ ನಡೆದಿದ್ದಾರೆ. ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮೇಲಿನ ಇಬ್ಬರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ತಾವು ನಡೆಯುತ್ತಿರುವ ದಾರಿಯನ್ನು ಸ್ಪಷ್ಟವಾಗಿ ತೋರಿದ್ದಾರೆ ಎಂದು ಜಿಲ್ಲಾ ಬಿಜೆಪಿ ಲೇವಡಿ ಮಾಡಿದೆ.
ತಪ್ಪು ಸಂದೇಶ: ಬಿಜೆಪಿ ಸೇರಿದಂತೆ ಹಲವು ಕಡೆಯಿಂದ ಬಂದ ಒತ್ತಡದಿಂದ ಕಳಂಕಿತ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಟ್ಟ ಸಿಎಂ ಸಿದ್ದು, ಈಗ ಅದೇ ರೀತಿಯ ಕಳಂಕ ಹೊತ್ತಿರುವ ಇಬ್ಬರು ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಿದ್ದಾರೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ್ದ ಅಂದಿನ ವಿರೋಧ ಪಕ್ಷದ ನಾಯಕರೂ ಆಗಿದ್ದ ಇಂದಿನ ಸಿಎಂ ಸಿದ್ದರಾಮಯ್ಯ, ಅದಕ್ಕಿಂತಲೂ ಮಿಗಿಲಾಗಿ ಆರೋಪ, ಕಳಂಕ ಹೊತ್ತಿರುವ ಡಿಕೆಶಿ, ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ತಾವು ಯಾರ ಪರ ಎಂಬುದನ್ನು ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.
ಮಾತು-ಕೃತಿ ಭಿನ್ನತೆಯೇ ಕಾಂಗ್ರೆಸ್ ಸಂಸ್ಕೃತಿ: ಮಾತು - ಕೃತಿಗಳಲ್ಲಿ ಭಿನ್ನತೆ ಪ್ರತಿಪಾದಿಸುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ಲೇವಡಿ ಮಾಡಿರುವ ಭಾರತೀಯ ಜನತಾ ಪಕ್ಷ, ಸಿದ್ದರಾಮಯ್ಯ ಈಗಾಗಲೇ ಕಾಂಗ್ರೆಸ್ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ತಾವೇನು ಭಿನ್ನವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೊಟ್ಟ ಮಾತಿನಂತೆ, ಕಳಂಕಿತರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನವಿಲ್ಲ ಎಂಬ ಹಿಂದಿನ ಮಾತಿಗೆ ಬದ್ಧರಾಗಬೇಕು. ಈಗ ಮಂತ್ರಿಗಳಾಗಿ ನಿಯುಕ್ತಿಗೊಂಡಿರುವ ಡಿ.ಕೆ.ಶಿವಕುಮಾರ್, ರೋಷನ್ ಬೇಗ್ ಅವರನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದೆ.
ರಾಜ್ಯಪಾಲರ ಧನಿ ಎಲ್ಲಿ: ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದಾಗ, ಸಚಿವರ ವಿರುದ್ಧ ಸಣ ಆರೋಪ ಬಂದರೂ ಹರಿ ಹಾಯುತ್ತಿದ್ದ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರ ಧನಿ ಈಗ ಎಲ್ಲಿ ಹೋಗಿದೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿರುವ ತುಮಕೂರು ಜಿಲ್ಲಾ ಬಿಜೆಪಿ ಘಟಕ, ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ, ಕಳಂಕಿತ ಸಚಿವರನ್ನು ಕೂಡಲೇ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚಿಸುವಂತೆ ಒತ್ತಾಯಿಸಿದೆ.
ಹೋರಾಟ ನಿರಂತರ: ಕಳಂಕಿತರನ್ನು ಸಂಪುಟದಿಂದ ಕೈಬಿಡುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿರುವ ಬಿಜೆಪಿ, ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯ ನೇತೃತ್ತವನ್ನು ಮಾಜಿ ಸಚಿವ ಸೊಗಡು ಶಿವಣ , ನಗರಾಧ್ಯಕ್ಷ ಕೆ.ಪಿ. ಮಹೇಶ್, ಸ್ನೇಕ್ ನಂದೀಶ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್, ಮಹಿಳಾ ಮೋರ್ಚಾದ ಪ್ರೇಮಾ ಹೆಗಡೆ, ಭಾರತಿ ಇತರರು ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

