ಪಾಲಿಕೆ ಬಜೆಟ್ ಪೂರ್ವಭಾವಿ ಚರ್ಚೆ
ತುಮಕೂರು: ಮಹಾನಗರ ಪಾಲಿಕೆಯ ಮುಂದಿನ ಬಜೆಟ್ ಹೇಗಿರಬೇಕೆಂದು ಚರ್ಚಿಸಲು ಪೂರ್ವಭಾವಿಯಾಗಿ ವಿವಿಧ ಸಂಘ ಸಂಸ್ಥೆಗಳು, ನಾಗರಿಕರೊಂದಿಗೆ ಮೇಯರ್ ಹಾಗೂ ಆಯುಕ್ತರು ಚರ್ಚೆ ನಡೆಸಿದರು.
ಮೊದಲಿಗೆ ಮಾತನಾಡಿದ ನಗರ ಆಯುಕ್ತ ಅಶಾದ್ ಆರ್. ಷರೀಫ್, ನಗರಸಭೆ ಈಗ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದೆ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಸಂಬಂಧ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಆದ್ಯತೆಗಳೇನು ಎಂದು ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಮಾಹಿತಿ
ನೀಡಿದರು. ಅಲ್ಲದೆ, ಈ ಸಂಬಂಧ ಸಲಹೆಗಳನ್ನು ಪಡೆದರು.
ಈ ಹಿಂದೆ ಆಗಿರುವ ಲೋಪದೋಷಗಳ ಬಗ್ಗೆ ಚರ್ಚಿಸದೆ ಮುಂದಿನ ಬಜೆಟ್ನಲ್ಲಿ ತಾವು ಏನನ್ನು ನಿರೀಕ್ಷೆ ಮಾಡುತ್ತೀರಿ ಎಂಬ ಬಗ್ಗೆ ಸಲಹೆ ನೀಡುವಂತೆ ಮನವಿ ಮಾಡಿದರು.
ಸಮೀಕ್ಷೆ ಆಗಬೇಕು: ನಗರಸಭೆ ಮಾಜಿ ಸದಸ್ಯ ಕೆ.ಪಿ. ಮಹೇಶ್ ಮಾತನಾಡಿ, ಸಂಪನ್ಮೂಲ ಕ್ರೂಢೀಕರಣ ಮತ್ತು ಸರಕಾರಿ ಆಸಿ ರಕ್ಷಣೆ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಆಸ್ತಿಗಳ ಭೌಗೋಳಿಕ ಸಮೀಕ್ಷೆ ಆಗಬೇಕು,ಈ ಹಿಂದೆ ನಗರಪಾಲಿಕೆಯಾಗಿ ಘೋಷಣೆಯಾಗಿದ್ದ ಸಂದರ್ಭದಲ್ಲಿ ಸರಕಾರ ನೀಡಿದ್ದ 25 ಕೋಟಿ ಹಣ ಖರ್ಚು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಯ ಜೊತೆಗೆ ದಿನವಿಡೀ ಕುಡಿಯುವ ನೀರು ಒದಗಿಸಬೇಕು ಎಂದರು.
ಸುಲಭ ಶೌಚಾಲಯಕ್ಕೆ ಒತ್ತು ನೀಡಿ: ಮಾರುತಿ ನಗರ ಹಿತರಕ್ಷಣಾ ಸಮಿತಿಯ ಕುಮಾರಸ್ವಾಮಿ ಮಾತನಾಡಿ, ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಇದರಿಂದ ಹಂದಿ ಮತ್ತು ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಗರಪಾಲಿಕೆಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.ನಗರಕ್ಕೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಅಗತ್ಯವಿರುವ ಕಡೆ ಸುಲಭ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದರು.
ಪೌರ ಕಾರ್ಮಿಕರ ನೇಮಕವಾಗಲಿ: ದಸಂಸ ಜಿಲ್ಲಾ ಸಂಚಾಲಕ ಪಿ.ಎನ್. ರಾಮಯ್ಯ ಮಾತನಾಡಿ, ನಗರದ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ನೇಮಕವಾಗಿಲ್ಲ. ಬಹುತೇಕ ಪಿಕೆಎಸ್ಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು,ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಪಿಕೆಎಸ್ಗಳ ನೇಮಕವಾಗಬೇಕು. ಇಲ್ಲದಿದ್ದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಲಿದೆ. ಆದ್ದರಿಂದ ಈ ಸಾಲಿನ ಬಜೆಟ್ನಲ್ಲಿ ಪೌರಕಾರ್ಮಿಕರ ನೇಮಕಕ್ಕೆ ಅನುದಾನ ಮೀಸಲಿಡಬೇಕು. ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು, ವಾಹನಗಳ ಅಗತ್ಯಕ್ಕೆ ತಕ್ಕಂತೆ ನಗರದ ನಾಲ್ಕೈದು ಕಡೆ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಬೇಕು ಹಾಗೂ ನಗರದ 35 ವಾರ್ಡುಗಳಲ್ಲಿ ಇರುವ ಸ್ಮಶಾನಗಳ ಅಭಿವೃದ್ಧಿಗೆ ಅನುದಾನ ಮೀಡಲಿಸುವಂತೆ ಸಲಹೆ ನೀಡಿದರು.
ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು ಮಾತನಾಡಿ, ಪಾಲಿಕೆಯ ಈ ಸಾಲಿನ ಅದ್ಯತೆಗಳೇನು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗದ ಪರಿಣಾಮ ವಾಯುಮಾಲಿನ್ಯ ಹೆಚ್ಚಿ ಜನತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.ನಗರದಲ್ಲಿ ಹಾಲಿ ಇರುವ ಪಾರ್ಕುಗಳ ನೋಟಿಪಿಕೇಷನ್ ಮಾಡಿಸಿ ಸರಕಾರಿ ಆಸ್ತಿಯ ರಕ್ಷಣೆ ಮಾಡಬೇಕೆಂದರು.
ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸೈಯದ್ ಅಲ್ತಾಫ್ ಮಾತನಾಡಿ, ನಗರದ ಮರಳೂರು ದಿಣ್ಣೆಯಲ್ಲಿ ರಾಜೀವ್ ಅವಾಜ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಫಲಾನುಭವಿಗಳು ಐವತ್ತು ಸಾವಿರ ರು. ಗಳವರೆಗೆ ವಂತಿಗೆ ಭರಿಸಬೇಕೆಂಬ ನಿಯಮ ರೂಪಿಸಲಾಗಿದ್ದು, ಅತ್ಯಂತ ಕಡುಬಡವರಾಗಿರುವ ಜನತೆ ಅಷ್ಟು ಹಣ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ವರ್ಗದ ಫಲಾನುಭವಿಗಳಿಗೆ ಶೇ 22.75ರ ಅನುದಾನದಲ್ಲಿ ಮತ್ತು ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಶೇ 7.25 ರ ಅನುದಾನದಲ್ಲಿ ವಂತಿಗೆ ಭರಿಸಲು ನಗರಪಾಲಿಕೆ ನಿಯಮ ರೂಪಿಸುವಂತೆ ಸಲಹೆ ನೀಡಿದರು. ಕೊಳಗೇರಿ ನಿವಾಸಿಗಳ ಅರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲು ಬಜೆಟ್ನಲ್ಲಿ ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು.
ಶೆಟ್ಟಿಹಳ್ಳಿ ರೈಲ್ವೆ ಕೆಳಸೇತುವೆ ನಿರ್ಮಾಣ ಹೋರಾಟ ಸಮಿತಿ ಕಾರ್ಯದರ್ಶಿ ಟಿ. ಪುಶುಪತಿ ಮಾತನಾಡಿ, ಶೆಟ್ಟಿಹಳ್ಳಿ ಅಂಡರ್ ಪಾಸ್ ಸಂಪರ್ಕ ರಸ್ತೆ ಹಾಗೂ ಆಸ್ತಿದಾರರಿಗೆ ಪರಿಹಾರ ನೀಡಲು 4 ಕೋಟಿ ಮೀಸಲಿಡಿ, ನಗರದ ನಾಲ್ಕು ದಿಕ್ಕುಗಳಲ್ಲಿಯೂ ತರಕಾರಿ ಮಾರುಕಟ್ಟೆ ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸಿ ಎಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

