ತುಮಕೂರು

ಸಿದ್ದರಾಮ ಲೋಕೋದ್ಧಾರದ ದಿವ್ಯ ಚೇತನ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜ.9
ಸಿದ್ದರಾಮ ಮಾನವನಾಗಿ ಜನಿಸಿ ದೈವತ್ವಕ್ಕೇರಿದ ವಿಭೂತಿ ಪುರುಷ, ವ್ಯಕ್ತಿಯಾಗಿ ಜನಿಸಿ ದಿವ್ಯತ್ವದ ಸಾಧನೆಯಿಂದ ಲೋಕೋದ್ಧಾರ ಮಾಡಿದ ಮಹಾ ಚೇತನ ಕಲ್ಯಾಣದ ಶರಣರ ಪ್ರಭಾವದಿಂದ ಕರ್ಮಯೋಗದಿಂದ ಶಿವಯೋಗ ಮಾರ್ಗದತ್ತ ಹೊರಳಿ ಮಹಾಯೋಗಿ ಎನಿಸಿಕೊಂಡವನು ಸಿದ್ದರಾಮ ಎಂದು ಡಾಬಸ್‌ಪೇಟೆ ಬಳಿಯ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಬಣ್ಣಿಸಿದರು.
ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಬಸವಕೇಂದ್ರದ ಸಹಯೋಗದಲ್ಲಿ ಜಯದೇವ ಹಾಸ್ಟಲ್‌ನ ಬಸವ ಮಂಟಪದಲ್ಲಿ ಏರ್ಪಡಿಸಿದ್ದ ಗಂಗಮ್ಮ ಮಧೂಡಯ್ಯ ದತ್ತಿ ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ಧರಾಮರನ್ನು ಕುರಿತು ಉಪನ್ಯಾಸ ನೀಡಿದರು.  ಎಲ್ಲ ಶರಣರಿಗಿಂತ ಹೆಚ್ಚು ವಚನಗಳನ್ನು ರಚಿಸಿರುವ ಸಿದ್ದರಾಮ ಶೈವನಾಗಿದ್ದ ಸಂದರ್ಭದಲ್ಲಿಯೇ ಸಾಧಕನಾಗಿ ತನ್ನ ಅನುಭವಗಳನ್ನು ವಚನರೂಪದಲ್ಲಿ ವ್ಯಕ್ತಪಡಿಸಿದ್ದಾನೆ.  ಆರಂಭದಲ್ಲಿ ಆತನು ದೀನದಲಿತರಿಗಾಗಿ ಕೈಗೊಂಡಿದ್ದ ಸಮಾಜ ಕಲ್ಯಾಣ ಕಾರ್ಯಗಳು ಎಲ್ಲರ ಗಮನ ಸೆಳೆದಿದ್ದವು.  ಆದ್ದರಿಂದಲೇ ಅಲ್ಲಮನಂತಹ ಜ್ಞಾನ ಸದೃಶ ವ್ಯಕ್ತಿಯೇ ಸ್ವತಃ ಅವನನ್ನು ಭೇಟಿಯಾದುದು ಎಂದು ಅಭಿಪ್ರಾಯಪಟ್ಟರು.
ಶರಣ ಶ್ರೇಷ್ಠರಲ್ಲಿ ಒಬ್ಬನಾದ ಈತನು ಕರ್ಮಯೋಗಿಯಾಗಿ, ಜ್ಞಾನದ ಗಣಿಯಾಗಿ ವೈರಾಗ್ಯ ನಿಧಿಯಾಗಿ, ಸರ್ವರ ಏಳಿಗೆಗೆ ಶ್ರಮಿಸಿದ ಸಾಧಕನಾಗಿ ಮೆರೆದವನು ಇಹದ ಬದುಕನ್ನು ಕಡೆಗಣಿಸದೆ ಕಾಲಿಟ್ಟು ನಿಂತವನು ಹುಟ್ಟಿನಿಂದ ಪರಿಪೂರ್ಣನಾಗದ ಈತ ಪ್ರಜ್ಞಾಪೂರ್ವಕ ಪ್ರಯತ್ನದಿಂದ ಪರಿಪೂರ್ಣನಾದ ಈತ ಶರಣಕುಲದ ಮೇರುಶಿಖರ ಎಂದರು.
ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ  ಡಾ.ಡಿ.ಎನ್. ಯೋಗೀಶ್, ಸಿದ್ದರಾಮರು ಹಲವು ವಿಶೇಷಗಳ ವಿಶೇಷ ವ್ಯಕ್ತಿಯಾಗಿದ್ದು ಅತಿ ಹೆಚ್ಚಿನ 27 ಶಾಸನಗಳಲ್ಲಿ ಉಲ್ಲೇಖಿತವಾಗಿರುವುದು ಎಲ್ಲ ಶರಣರಿಗಿಂತ ಹೆಚ್ಚು ವಚನಗಳನ್ನು ರಚಿಸಿರುವುದು, ಅತಿ ಹೆಚ್ಚು ತೋರುಗದ್ದುಗೆಗಳಿರುವುದು ದೈವೀ ಸ್ವರೂಪದಲ್ಲಿ ಪೂಜೆಗೊಳ್ಳುತ್ತಿರುವುದು ಮತ್ತು ಅತಿ ಹೆಚ್ಚು ಭಕ್ತ ಸಮುದಾಯ ಪಡೆದಿರುವ ಏಕೈಕ ಶರಣ ಎಂದು ಬಣ್ಣಿಸಿದರು.
ನಾಡಿನ ಚರಿತ್ರೆಯಲ್ಲೇ ನಿರ್ವಿಕಲ್ಪ ಸಮಾಧಿ ಮಾಡಿಕೊಂಡ ಮೊಟ್ಟ ಮೊದಲ ವ್ಯಕ್ತಿ ಸಿದ್ದರಾಮನಾಗಿದ್ದು, ಅವನ ಬಹುಪಾಲು ವಚನಗಳು ಗುರು ಲಿಂಗ ಜಂಗಮದ ಆವರಣದಲ್ಲಿಯೇ ಚಲಿಸಿ ಅಲ್ಲಿಯೇ ತಮ್ಮ ಸತ್ವವನ್ನು ಮೆರೆಯುತ್ತವೆ.  ರಾಜರಿಂದ ದಂಡನಾಯಕರಿಂದ ಪ್ರಜೆಗಳಿಂದ ಪೂಜೆಗೊಂಡು ಗುರು ಸ್ಥಾನದಲ್ಲಿಟ್ಟುಕೊಂಡು ನಂತರದ ಕಾಲದಲ್ಲಿ ದೇವಮಾನವನಾಗಿ ಕಾಣಿಸಿಕೊಂಡ ಏಕೈಕ ವ್ಯಕ್ತಿ ಸಿದ್ದರಾಮ ಎಂದರು. ಇದೇ ಸಂದರ್ಭದಲ್ಲಿ ವನಕಲ್ಲು ಮಠ ಹೊರತಂದಿರುವ ಕ್ಯಾಲೆಂಡರ್‌ಅನ್ನು ಡಾ.ಡಿ.ಎನ್. ಯೋಗೀಶ್ ಬಿಡುಗಡೆ ಮಾಡಿದರು.
ಬಸವಕೇಂದ್ರ ಅಧ್ಯಕ್ಷೆ ಸಿದ್ದಗಂಗಮ್ಮ, ಹುಬ್ಬಳಿ ಮಠದ ಶರಣೆ ಅಕ್ಕನಾಗಮ್ಮ  ದತ್ತಿ ದಾನಿಗಳಾದ ಜಿ.ಎಸ್. ಮಧೂಡಯ್ಯ, ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು. ಬಸವಕೇಂದ್ರ ಕಾರ್ಯದರ್ಶಿ ಸ್ವಾಗತಿಸಿದರು.  ಪುಷ್ಪಾವತಿ ಪ್ರಾರ್ಥಿಸಿದರು.  ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಿಕ್ಕ ಬೆಳ್ಳಾವಿ ಶಿವಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.