'ತಿಪಟೂರು ತಾಲೂಕು ಪೊಲೀಸ್ ವ್ಯವಸ್ಥೆ ಕುಸಿದಿದೆ'
ತಿಪಟೂರು: ತಾಲೂಕಿನಲ್ಲಿ ಪೊಲೀಸ್ ಸೇರಿದಂತೆ ಇಡೀ ಆಡಳಿತ ವ್ಯವಸ್ಥೆಯೇ ಕುಸಿದು ಹೋಗಿದ್ದು, ರೈತರು ಮತ್ತು ಸಾರ್ವಜನಿಕರು ಪರಿತಪಿಸುವಂತಾಗಿದೆ ಎಂದು ತಾಲೂಕು ಬಿಜೆಪಿ ಮುಖಂಡ ಲೋಕೇಶ್ವರ ತಾಲ್ಲೂಕು ಆಡಳಿತದ ವಿರುದ್ಧ ಹರಿಹಾಯ್ದರು.
ಪಟ್ಟಣದಲ್ಲಿ ನಡೆದ ಕೊನೆಯ ಕೆಜೆಪಿ ಸಮಾವೇಶದ ನಂತರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರ ಪೊಲೀಸ್ ಠಾಣೆಯಲ್ಲಿ ನೊಂದವರು, ಸಂಕಷ್ಟಕ್ಕೀಡಾದವರು ಮತ್ತು ಕಳ್ಳತನಗಳ ವಿರುದ್ಧ ದೂರು ನೀಡಲು ಹೋದರೆ ದೂರು ತೆಗೆದುಕೊಂಡು ಕಾನೂನು ಜರುಗಿಸಬೇಕಾದ ಪೊಲೀಸ್ ವ್ಯವಸ್ಥೆ ದೂರು ನೀಡಲು ಬಂದವರನ್ನೇ ಹೆದರಿಸಿ ಕಳುಹಿಸುವಂತ ಕಾನೂನು ಬಾಹಿರ ವ್ಯವಸ್ಥೆ ನಿರ್ಮಿಸಿಕೊಂಡಿದ್ದಾರೆ. ಕಳೆದ ವಾರ ತಾಲೂಕಿನ ಸುಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಯಲ್ಲಿನ ಕೆಲ ಕೊಬ್ಬರಿ ಅಂಗಡಿಗಳಲ್ಲಿ ಸರಣಿ ಕಳ್ಳತನಗಳು ನಡೆದಿದ್ದು, ದೂರು ನೀಡಲು ಹೋದ ಅಂಗಡಿ ಮಾಲೀಕರುಗಳ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳದೆ ಇಲ್ಲಸಲ್ಲದ ಪ್ರಶ್ನೆಗಳಿಗೆ ಕೇಳಿ ವಾಪಸ್ ಕಳುಹಿಸಲಾಗಿದೆ. ಹಾಗೆಯೇ ಮೀಟರ್ ಬಡ್ಡಿ ವ್ಯವಹಾರದ ವಿರುದ್ಧ ದೂರು ನೀಡಲು ಹೋದವರಿಗೆ ರಾಜಿ ಮಾಡಿಕೊಳ್ಳಿ, ಇಲ್ಲವಾದಲ್ಲಿ ಎದುರಾಳಿ ನಿಮ್ಮ ಮೇಲೆ ಜಾತಿನಿಂದನೆ ಕೇಸು ದಾಖಲಿಸಲಿದ್ದಾರೆ ಎಂದು ಹೆದರಿಸಿ ಸಾಗಹಾಕುತ್ತಿರುವ ಘಟನೆ ನಡೆದಿವೆ. ಇದೇ ರೀತಿ ನಗರದಲ್ಲಿ ಹತ್ತಾರು ಕಳ್ಳತನಗಳು, ನಾನಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು, ಮಟ್ಕಾ ಮತ್ತು ಇಸ್ಪೀಟ್ ದಂದೆಗಳಲ್ಲದೆ ಮೀಟರ್ ಬಡ್ಡಿ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಪೊಲೀಸರು ಮಾತ್ರ ತಲೆ ಕೆಡಿಸಿಕೊಳ್ಳದೆ ಬರುವ ಕೇಸುಗಳನ್ನು ರಾಜಿ ಮಾಡಿಸಿಕೊಂಡು ಕಾಲ ತಳ್ಳಲಾಗುತ್ತಿದೆ. ಸಾಕಷ್ಟು ಕಳ್ಳತನಗಳು ಮತ್ತು ಕ್ರಿಮಿನಲ್ ದಂಧೆಗಳು ನಡೆಯುತ್ತಿದ್ದರೂ ಪತ್ತೆ ಕಾರ್ಯಗಳು ಮಾತ್ರ ನಡೆದೇ ಇಲ್ಲ. ಇದರಿಂದ ತಾಲೂಕಿನಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸಾರ್ವಜನಿಕವಾಗಿ ಜನತೆ ದೂರುವಂತಾಗಿರುವುದರ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ತುರ್ತುಗಮನ ಹರಿಸಬೇಕೆಂದು ಲೋಕೇಶ್ವರ ಒತ್ತಾಯಿಸಿದ್ದಾರೆ. ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಲಂಚದ ಭೂತ ಆವರಿಸಿದ್ದು, ಕೆಲ ಅಧಿಕಾರಿಗಳು ಬಹಿರಂಗವಾಗಿ ಲಂಚಕ್ಕಾಗಿ ಒತ್ತಾಯಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಇಲಾಖೆಗಳಲ್ಲಿ ಬ್ರೋಕರ್‌ಗಳ ಹಾವಳಿ ವಿಪರೀತವಾಗಿದ್ದು, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿರುವ ಪ್ರಮುಖ ಅಧಿಕಾರಿಗಳ ಕೈಚೆಲ್ಲಿ ಕೂತಿರುವುದರಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಜಿಲ್ಲಾಡಳಿತ ಈ ಬಗ್ಗೆ ಕ್ರಮ ಜರುಗಿಸಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

