ತುಮಕೂರು

ಇದ್ದೂ ಇಲ್ಲದಂತಿರುವ ಪುರಭವನ

Published On :

ಚಾರಿತ್ರಿಕ ಮಹತ್ವವಿರುವ ತುಮಕೂರಿನ ಹೃದಯ ಭಾಗದಲ್ಲೇ ಇರುವ ಪುರಭವನ ತುಮಕೂರಿನ ಮಟ್ಟಿಗೆ ಇದ್ದು ಇಲ್ಲದಂತಾಗಿದೆ. ಮೊದಲು ಇಲ್ಲಿನ ನಗರಸಭೆಯ ಕಟ್ಟಡವಿತ್ತು. ನಗರಸಭೆಯ ಸಾಮಾನ್ಯ ಸಭೆಗಳು ಇದೇ ಪುರಭವನದಲ್ಲಿ ನಡೆಯುತ್ತಿತ್ತು. ಈ ಹಿಂದೆ ಈ ಪುರಭವನವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡಲಾಗುತ್ತಿತ್ತು.
ಈಗ ನಗರಸಭೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಈ ಪುರಭವನವನ್ನು ಯಾವುದಕ್ಕೂ ಬಳಸುತ್ತಿಲ್ಲ. ಈ ಹಿಂದೆ ಈ ಪುರಭವನಕ್ಕೆ ಸಣ್ಣಪುಟ್ಟ ದುರಸ್ತಿ ಮಾಡಲಾಗಿತ್ತು. ಆದರೆ ಇನ್ನು ಒಂದಷ್ಟು ದುರಸ್ತಿ ಮಾಡಬೇಕಾಗಿದೆ. ತುಮಕೂರಿನಲ್ಲಿ ಹಲವಾರು ಸಾಂಸ್ಕೃತಿಕ ತಂಡಗಳು ಸಕ್ರಿಯವಾಗಿದೆ. ಈ ತಂಡಗಳೆಲ್ಲಾ ಆಶ್ರಯಿಸಿರುವುದು ಗುಬ್ಬಿ ವೀರಣ್ಣ ಕಲಾಕ್ಷೇತ್ರ. ಆದರೆ ಕಾರ್ಯಕ್ರಮಗಳಿಗೆ ಕಲಾಕ್ಷೇತ್ರ ಸಿಗದಂತಾಗಿದೆ. ಇರುವ ಇನ್ನೆರೆಡು ಭವನಗಳು ಕೂಡ ದುರಸ್ತಿಯಲ್ಲಿವೆ. ಹೀಗಾಗಿ ಈ ಪುರಭವನವನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕೆಂಬುದು ಸಾಂಸ್ಕೃತಿಕ ಲೋಕದವರ ಅಭಿಪ್ರಾಯವಾಗಿದೆ. ಈಗಾಗಲೇ ಈ ಪುರಭವನ ದುರಸ್ತಿಗೊಳಿಸಿ ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಗತ ವೈಭವ ಮರುಕಳಿಸುವಂತೆ ಮಾಡಬೇಕೆಂದು ಪ್ರಗತಿ ಪರ ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳು ಮನವಿ ಮಾಡಿದ್ದಾರೆ. ಇನ್ನಾದರೂ ಪಾಲಿಕೆ ಈ ಪುರಭವನವನ್ನು ಸಾಂಸ್ಕೃತಿಕ ಸೌಧವನ್ನಾಗಿ ರೂಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
 ಬೆಳಗದ ಸಾಲು ದೀಪಗಳು...
ತುಮಕೂರಿನ ಕೋತಿ ತೋಪು ರಸ್ತೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿ ಹಾಕಿರುವ ಸೋಲಾರ್ ದೀಪಗಳು ಅಕ್ಷರಶಃ ಬೆಳಗುವುದೇ ಇಲ್ಲ. ಲಕ್ಷಾಂತರ ರು. ಖರ್ಚು ಮಾಡಿ ಹಾಕಿರುವ ಈ ದೀಪಗಳು ರಾತ್ರಿ ವೇಳೆ ಮೊಂಬತ್ತಿ ಬೆಳಕಿನ ರೀತಿ ಬೆಳಗುತ್ತದೆ. ಈ ಮಾರ್ಗದಲ್ಲಿ ರಾತ್ರಿ ವೇಳೆ ಅಪಘಾತಗಳು ಮಾಮೂಲಾಗಿದೆ. ಪ್ರತಿ ದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಚಲಿಸುತ್ತದೆ. ಈಗಾಗಲೇ ಅಮಾನಿಕೆರೆಯನ್ನು ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಟ್ಟಿರುವುದರಿಂದ ರಾತ್ರಿ ವೇಳೆ ಸಾಕಷ್ಟು ಜನ ಈ ರಸ್ತೆ ಮೂಲಕ ಅಮಾನಿಕೆರೆಗೆ ಹೋಗುತ್ತಾರೆ.
ಮಂದ ಬೆಳಕಿನ ಈ ಸಾಲು ಸೋಲಾರ್ ದೀಪಗಳಿಂದಾಗಿ ಜನ ಜೀವ ಬಿಗಿ ಹಿಡಿದುಕೊಂಡು ಓಡಾಡುವಂತಾಗಿದೆ. ಈ ಸಾಲು ಸೋಲಾರ್ ದೀಪಗಳನ್ನು ತೆಗೆಸಿ ಟ್ಯೂಬ್ ಲೈಟ್ ಹಾಕಿಸಿ ಎಂದು  ಹಲವಾರು ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಕ್ಯಾರೇ ಅನ್ನುತ್ತಿಲ್ಲ. ಇವಿಷ್ಟೆ ಅಲ್ಲದೇ ಶಿರಾ ರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲೂ ಕೂಡ ಇದೇ ಮಾದರಿಯ ದೀಪಗಳನ್ನು ಹಾಕಲಾಗಿದೆ. ಅಲ್ಲೂ ಕೂಡ ಅಪಘಾತಗಳು ಮಾಮೂಲಾಗಿದೆ. ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ, ಎಸ್ಪಿ ಮುಂತಾದ ಉನ್ನತ ಮಟ್ಟದ ಅಧಿಕಾರಿಗಳು ಓಡಾಡುವ ಮಾರ್ಗದಲ್ಲೇ ಸೋಲಾರ್ ದೀಪಗಳ ಸ್ಥಿತಿ ಹೇಳತೀರದಾಗಿದೆ. ಈಗಾಗಲೇ ಕೆಲ ಸಂಘಟನೆಗಳು ಸೋಲಾರ್ ದೀಪ ಬದಲಾಯಿಸದಿದ್ದರೆ ಹೋರಾಟ ಮಾಡುವ ಬೆದರಿಕೆ ಹಾಕಿದೆ. ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಎಂಬ ನಿರೀಕ್ಷೆ ಮಾತ್ರ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.