ತುಮಕೂರು

ಲೋಕಸಭಾ ಚುನಾವಣೆಯಲಿ ಸ್ಪರ್ಧಿಸಲ್ಲ

Published On :

ಕ.ಪ್ರ.ವಾರ್ತೆ ,  ತಿಪಟೂರು ,  ಜ. 14
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ತುಮಕೂರಿನಿಂದಾಗಲೀ ಅಥವಾ ಶಿವಮೊಗ್ಗದಿಂದಾಗಲೀ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ತಿಪಟೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇವೆರಡು ಕ್ಷೇತ್ರಗಳಲ್ಲಷ್ಟೇ ಅಲ್ಲ, ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದರು. ಲೋಕಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆಗಳು ಪ್ರಾರಂಭವಾಗಿದ್ದು. ಪಕ್ಷಕ್ಕೆ ನಿಷ್ಠೆಯಿಂದಿರುವ ಮತ್ತು ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಕರ್ನಾಟಕದಲ್ಲಿ  ಕನಿಷ್ಠ 20 ಸೀಟುಗಳನ್ನು ಗೆಲ್ಲಿಸುವುದು ನಮ್ಮ ಗುರಿ ಎಂದು ತಿಳಿಸಿದರು.
ನರೇಂದ್ರಮೋದಿಗೆ ಸರಿಸಮಾನರಾದ ಪ್ರಧಾನಿ ಅಭ್ಯರ್ಥಿ ಯಾವ ಪಕ್ಷದಲ್ಲೂ ಇಲ್ಲ. ಈಗಾಗಲೇ ನಡೆಸಿರುವ ಸರ್ವೆ ಪ್ರಕಾರ 100ಕ್ಕೆ 70 ಜನ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ಬಯಸಿದ್ದಾರೆ ಎಂದ ಬಿಎಸ್‌ವೈ ಈ ಚುನಾವಣೆಯಲ್ಲಿ ದೇಶದ ಅಭಿವೃದ್ಧಿಯ ಪ್ರಶ್ನೆ ಮುಖ್ಯವಾಗಿದೆ. ಪಾಕಿಸ್ತಾನ ಎಲ್ಲವನ್ನೂ ಮರೆತು ಮುಂದಿನ 15 ವರ್ಷ ದೇಶದ ಅಭಿವೃದ್ದಿಯ ಕಡೆ ಗಮನ ಹರಿಸಲಿ ಎಂದು ಹೇಳಿದ ಏಕೈಕ ವ್ಯಕ್ತಿ ನರೇಂದ್ರ ಮೋದಿ. ಆದ್ದರಿಂದ ಅವರು ಪ್ರಧಾನಿಯಾಗಲು ತಾವು ಸಂಪೂರ್ಣವಾಗಿ ಶ್ರಮಿಸುವುದಾಗಿ ತಿಳಿಸಿದರು.
ಸಂಪೂರ್ಣ ವಿಫಲ: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಶಾಸಕರು ತಲೆಎತ್ತಿ ಓಡಾಡಲು ಆಗದಂತಹ ಪರಿಸ್ಥಿತಿ ಇದೆ. ಈ ವರ್ಷ ಅಭಿವೃದ್ಧಿ ಶೂನ್ಯ ವರ್ಷ. ಹಿಂದಿನ ಸರ್ಕಾರ 9 ಸಾವಿರ ಕೋಟಿ ಸಾಲ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಯಾವುದೇ ಒಂದು ಸರ್ಕಾರ ಬದಲಾದಾಗ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುತ್ತದೆ. ಅದಕ್ಕೆ ಹೊಸ ಸರ್ಕಾರ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಅದನ್ನು ಮಾಡುವುದು ಬಿಟ್ಟು ಇಂಥ ಅರ್ಥಹೀನ ಹೇಳಿಕೆಗಳನ್ನು ಕೊಡುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಲಿ ಎಂದು ತಿಳಿಸಿದ ಅವರು ಒಂದು ಕಡೆ ಹೊಂದಾಣಿಕೆ ಮತ್ತು ಏಕ ನಾಯಕತ್ವ ಇಲ್ಲದ ಕಾಂಗ್ರೆಸ್ ಪಾರ್ಟಿಯಿಂದ ಅಭಿವೃದ್ದಿಯ ನಿರ್ಲಕ್ಷ, ಇನ್ನೊಂದೆಡೆ ಪ್ರತಿಪಕ್ಷವಾಗಿ ತನ್ನ ಕರ್ತವ್ಯ ನಿರ್ವಹಿಸದ ಜೆಡಿಎಸ್, ಇವೆಲ್ಲವೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಭವ್ಯ ಸ್ವಾಗತ: ಇದಕ್ಕೂ ಮುನ್ನ ಬಿಜೆಪಿ ಮುಖಂಡ ಲೋಕೇಶ್ವರ್ ಮನೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪರವರಿಗೆ ಲೋಕೇಶ್ವರ್ ಹಾಗೂ ಪಕ್ಷದ ಕಾರ್ಯಕರ್ತರಿಂದ ಭವ್ಯ ಸ್ವಾಗತ ದೊರೆಯಿತು. ಲೋಕೇಶ್ವರ್
ಮನೆಯಲ್ಲಿಯೇ ಉಪಹಾರ ಸ್ವೀಕರಿಸಿದ ಬಿಎಸ್‌ವೈರನ್ನು ಭೇಟಿ ಮಾಡಲು ಜಿಲ್ಲೆ ಹಾಗೂ ತಾಲೂಕಿನ ನಾಯಕರ ಮತ್ತು ಸಾವಿರಾರು ಅಭಿಮಾನಿ ಕಾರ್ಯಕರ್ತರು ದೊಡ್ಡ ದಂಡೇ ನೆರೆದಿತ್ತು. ಎಪಿಎಂಸಿ ಅಧ್ಯಕ್ಷ ಪ್ರಕಾಶ್, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಶಿವಸ್ವಾಮಿ ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್, ಹರಿಬಾಬು, ಗಂಗರಾಜು, ನಿಜಗುಣ, ಸುಧಾಕರ್, ಯದುನಂದನ, ನಗರಸಭಾ ಮಾಜಿ  ಸದಸ್ಯ ಜಿ.ಕೆ. ನಟರಾಜು, ಕರಡಿ ದೇವರಾಜು, ರಘುಪತಿ, ಸೇರಿದಂತೆ ಸಾಕಷ್ಟು ಪ್ರಮುಖ ನಾಯಕರು ಬಿಎಸ್‌ವೈರನ್ನು ಭೇಟಿ ಮಾಡಿದವರಲ್ಲಿ ಪ್ರಮುಖರು.
ನಂತರ ಮಾಜಿ ಶಾಸಕ ನಾಗೇಶ್ ಮನೆಗೂ ಬಿಎಸ್‌ವೈ ಭೇಟಿ ನೀಡಿದರು. ಅಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ್, ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಯುವ ಮೋರ್ಚಾ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್ ಮುಂತಾದವರು ಸ್ವಾಗತಿಸಿದರು. ಬಿಎಸ್‌ವೈ ಜೊತೆ ಬಿಜೆಪಿ ಮುಖಂಡ ಲೋಕೇಶ್ವರ್ ಕೂಡಾ ಮಾಜಿ ಶಾಸಕ ಬಿ.ಸಿ.ನಾಗೇಶ್ ಮನೆಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಬಿಎಸ್‌ವೈ ಜೊತೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ, ಮುಖಂಡ ಹೆಬ್ಬಾಕ ರವಿ ಮುಂತಾದವರು ತಿಪಟೂರಿಗೆ ಆಗಮಿಸಿದ್ದರು.
ರಾಜ್ಯಪಾಲರ ಹೇಳಿಕೆಗೆ ಯಡಿಯೂರಪ್ಪ ಕಿಡಿ
ತುಮಕೂರು: ರಾಜಭವನಕ್ಕೆ ಬಂದು ದೂರು ಹೇಳಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ ಎಂಬ ರಾಜ್ಯಪಾಲರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಅವರು ಕಡೂರಿನಲ್ಲಿ ನಡೆಯುತ್ತಿರುವ ಗುರುಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ತೆರಳುವ ವೇಳೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜಭವನಕ್ಕೆ ತೆರಳಲು ನಾವೆಲ್ಲಾ ಸಿದ್ಧರಿದ್ದೇವೆ. ಆದರೆ ಯಾವಾಗ ಹೋಗಬೇಕು ಎಂಬ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂದರು. ರಾಜಭವನಕ್ಕೆ ಬಿಜೆಪಿಯವರು ಬರಲು ಧೈರ್ಯವಿಲ್ಲವೆಂಬುದು ರಾಜ್ಯಪಾಲರ ತಪ್ಪು ಗ್ರಹಿಕೆಯಷ್ಟೇ ಎಂದು ಹೇಳಿದರು. ಇದೇ ವೇಳೆ ತುಮಕೂರು ಸಂಸದ ಜಿ.ಎಸ್. ಬಸವರಾಜು ಸೇರಿದಂತೆ ಇನ್ನಿತರೆ ಮುಖಂಡರ ಮನವೊಲಿಕೆ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ಯಡಿಯೂರಪ್ಪ ತುಮಕೂರಿನ ಟೌನ್‌ಹಾಲ್‌ಗೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶ್ ಗೌಡ, ರವಿಹೆಬ್ಬಾಕ, ಶಿವಪ್ರಸಾದ್, ಮಹಿಳಾ ವಿಭಾಗದ ಪ್ರೇಮ ಹೆಗಡೆ, ಕೊಪ್ಪಲ್ ನಾಗರಾಜು, ರುದ್ರೇಶ್, ಶ್ರೀನಿವಾಸ್ ಮತ್ತಿತರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.