ಆದಿಜಾಂಬವ ಸಮಾಜದ ಮುಖಂಡರು ಒಗ್ಗೂಡಲಿ
ತಿಪಟೂರು: ಆದಿ ಜಾಂಬವ ಸಮಾಜದ ಮುಖಂಡರು ಎಲ್ಲಾ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕೆಂದು ಹಿರಿಯೂರು ಆದಿಜಾಂಬವ ಬೃಹವನ್ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿಗಳು ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಆದಿಜಾಂಬವ ಜಯಂತ್ಯುತ್ಸವವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಆದಿಜಾಂಬವ ಜನಾಂಗ ಪರಿಶಿಷ್ಟರಲ್ಲೇ ಸಿಂಹಪಾಲು ಹೊಂದಿದೆ. ಒಗ್ಗಟ್ಟಿನ ಕೊರತೆಯಿಂದ ಸರ್ಕಾರದ ಸವಲತ್ತುಗಳು ಸೇರಿದಂತೆ ರಾಜಕೀಯ ಸವಲತ್ತುಗಳಿಂತ ವಂಚಿತವಾಗುತ್ತಿದೆ. ಸಮಾಜದ ಎಲ್ಲಾ ಮುಖಂಡರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗೂಡುವ ಜತೆಗೆ ಸಮಾಜದ ಗುರುಗಳ ಶಕ್ತಿ ಪಡೆಯಬೇಕೆಂದು ಕರೆ ನೀಡಿದರು.
ಶಿಶುನಾಳ ಶರೀಪರ ತತ್ವ ಪ್ರಚಾರಕರು ಹಾಗೂ ಸಾಹಿತಿ ಎಂ.ಸಿ.ನರಸಿಂಹಮೂರ್ತಿ ಮಾತನಾಡಿ, ಆದಿಜಾಂಬವ ಜನಾಂಗ ನಾಲ್ಕು ಯುಗಗಳ ಇತಿಹಾಸ ಹೊಂದಿದೆ. ಪಂಚಮಹಾಸತಿಯರಲ್ಲಿ ಶ್ರೇಷ್ಠರಾದ ಅರುಂಧತಿ ಜಾಂಬವ ಕುಲಕ್ಕೆ ಸೇರಿರುವುದಲ್ಲದೆ ಪತಿವ್ರತದಿಂದ ಅರುಂಧತಿ ನಕ್ಷತ್ರವಾಗಿ ಉಳಿದಿರುವುದು ಸಾಕ್ಷಿಯಾಗಿದೆ. ಭೂಮಂಡಲದ ಆದಿಪರಂಪರೆ ಹೊಂದಿರುವ ಜನಾಂಗ ನಂತರದ ದಿನಗಳಲ್ಲಿ ಒಗ್ಗಟ್ಟಿನ ಕೊರತೆಯಿಂದ ಶೋಷಣೆಗೆ ಒಳಗಾಗಿರುವುದು ಇತಿಹಾಸವಾದರು ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಭರತ ಖಂಡದ ಮೂಲ ಹೆಸರು ಜಂಭುದ್ವೀಪ. ಇದರ ಮೂಲಪುರುಷ ಜಾಂಬವಂತ. ಗೌತಮ ಬುದ್ಧನು ಸಹ ಜಾಂಬವ ಮುನಿಯ ತತ್ವದಲ್ಲೇ ಅರಿವು ಮೂಡಿಸಿದ್ದು, ಆದರಿಂದ ಜನಾಂಗ ಬಂಧುಗಳು ಯಾವುದೇ ರಾಜಕೀಯ ಪಕ್ಷದಲ್ಲಿರಲಿ, ಸಂಘಟನೆಯಲ್ಲಿರಲಿ ಜನಾಂಗದ ದೃಷ್ಟಿಯಿಂದ ಒಂದಾಗಬೇಕೆಂದು ಕರೆ ನೀಡಿದರು. ಬಂದಗುಂಟೆ ನಾಗರಾಜಯ್ಯ ಸಮಾಜ ಆದಿಜಾಂಬವ ಜಯಂತಿಯನ್ನು ಪ್ರತಿ ಗ್ರಾಮಗಳಲ್ಲೂ ಆಚರಿಸುವ ಮೂಲಕ ಒಂದುಗೂಡಬೇಕೆಂದು ಕರೆ ನೀಡಿದರು. ಜನಾಂಗದ ಹಿರಿಯ ಮುಖಂಡ ಕೆ.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಬಾ.ನ.ಬಸವರಾಜು, ಕೆ.ಆರ್.ರಂಗಸ್ವಾಮಿ, ಟಿ.ಆರ್.ರಘುಪತಿ, ಕೆ.ಎಂ.ಶಾಂತಪಪ್ಪ, ನಾಗತಿಹಳ್ಳಿ ಕೃಷ್ಣಮೂರ್ತಿ, ಈಚನೂರು ಮಹದೇವ್, ಪೆದ್ದೀಹಳ್ಳಿ ನರಸಿಂಹಯ್ಯ, ದೊಡ್ಡೇಗೌಡ, ಕೆ.ಇ.ಬಿ.ನರಸಿಂಹಮೂರ್ತಿ, ಹೊನ್ನಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಆದಿಜಾಂಬವ ಮಹಾಮುನಿಗಳ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಿಪಟೂರು ಗ್ರಾಮದೇವತೆ ಕೆಂಪಮ್ಮದೇವಿ ದೇವಾಲಯದಿಂದ ಹೊರಟ ಮೆರವಣಿಗೆ ಗಾಂಧಿನಗರದ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

