ತುಮಕೂರು

ಪೋಲಿಯೊ ಯಶಸ್ಸಿಗೆ ಸಕಲ ಸಿದ್ಧತೆ

Published On :

ತುಮಕೂರು: ಜನವರಿ 19 ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಯಶಸ್ವಿಗಾಗಿ ತುಮಕೂರು ತಾಲೂಕಿನಲ್ಲಿ ಒಟ್ಟು 232 ಪೊಲಿಯೋ ಲಸಿಕಾ ಬೂತ್‌ಗಳನ್ನು ತೆರೆಯಲಾಗುವುದು ಎಂದು ತುಮಕೂರು ತಹಸೀಲ್ದಾರ್ ಹಾಗೂ ತಾಲೂಕು ಪಲ್ಸ್ ಪೋಲಿಯೊಚಾಲನಾ ಸಮಿತಿ ಅಧ್ಯಕ್ಷ ಏಕೇಶ್ ಬಾಬು ತಿಳಿಸಿದರು. ಅವರು ತುಮಕೂರಿನ ಟಿ.ಬಿ. ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪಲ್ಸ್ ಪೋಲಿಯೊಚಾಲನಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜನವರಿ 19 ರಂದು ನಡೆಯುವ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ 928 ಲಸಿಕಾ ಕಾರ್ಯಕರ್ತರ ಮೂಲಕ 68433 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ತುಮಕೂರಿಲ್ಲಿ ಒಟ್ಟು 97 ಬೂತ್‌ಗಳಲ್ಲಿ 540 ಲಸಿಕಾ ಕಾರ್ಯಕರ್ತರ ಮೂಲಕ 29992 ಮಕ್ಕಳಿಗೆ ಲಸಿಕೆ ಹಾಕಲು ಯೋಜಿಸಲಾಗಿದೆ.

ಕೇರಳಕ್ಕೆ ಯುವಜನರ ಬೀಳ್ಕೊಡುಗೆ
ತುಮಕೂರು: ಕೇರಳದ ಕೊಟ್ಟಾಯಂನಲ್ಲಿ ಜ. 22 ರವರೆಗೆ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ತುಮಕೂರಿನ ಯುವಜನರನ್ನು ಬೀಳ್ಕೊಡಲಾಯಿತು. ನೆಹರು ಯುವ ಕೇಂದ್ರ ಏರ್ಪಡಿಸಿರುವ ಈ ಶಿಬಿರಕ್ಕೆ ತುಮಕೂರು ಜಿಲ್ಲಾ ನೆಹರು ಯುವ ಕೇಂದ್ರದ ವತಿಯಿಂದ ಪ್ರತಿನಿಧಿಸಲು ತಂಡದ ನಾಯಕರಾದ ನವೀನ್ ಎಚ್.ಆರ್ ನೇತೃತ್ವದಲ್ಲಿ ತ್ರಿನೇತ್ರ ಯೂತ್ ಸರ್ವೀಸಸ್ ಅಂಡ್ ಡೆವಲಪರ್ಸ್ ತಂಡವನ್ನು ಬೀಳ್ಕೊಡಲಾಯಿತು. ಉಪಮೇಯರ್ ಧನಲಕ್ಷ್ಮೀ ಮತ್ತು 25 ನೇ ವಾರ್ಡ್‌ನ ಸದಸ್ಯೆ ವಿಜಯ ರುದ್ರೇಶ್ ಅವರು ಹಸಿರು ಬಾವುಟ ಹಾರಿಸುವ ಮೂಲಕ ಬೀಳ್ಕೊಟ್ಟರು. ಲೋಹಿತ್ ಇದ್ದರು.

ಬುದ್ಧಿವಂತ ಭ್ರಷ್ಟರು ಬೇಕಿಲ್ಲ: ವೀರೇಶಾನಂದ ಶ್ರೀ
ತುಮಕೂರು: ಬುದ್ಧಿವಂತ ಅಪ್ರಮಾಣಿಕರು, ಭ್ರಷ್ಟರು ಸಮಾಜಕ್ಕೆ ಅಗತ್ಯವಿಲ್ಲ ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಡಾ. ವೀರೇಶಾನಂದ ಸ್ವಾಮಿಗಳು ಮಾರ್ಮಿಕವಾಗಿ ನುಡಿದರು. ಅವರು ತುಮಕೂರಿನ ವೀರಶೈವ ಸಮಾಜದ ವತಿಯಿಂದ ನಡೆಯುತ್ತಿರುವ ರೇಣುಕಾ ವಿದ್ಯಾಪೀಠ ಪದವಿ ಪೂರ್ವ ಕಾಲೇಜು ಕಾರ್ಯಕ್ರಮದಲ್ಲಿ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ವೀರಶೈವ ಸಮಾಜ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಜನತೆಗೆ ಗುಣ ಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಶಿಕ್ಷಣ ಸಂಸ್ಥೆ ಕಟ್ಟಡಗಳ ಮೇಲೆ ನಿಂತಿಲ್ಲ. ಮನಸ್ಸುಗಳ ಮೇಲೆ ನಿಂತಿದೆ. ಕಷ್ಟಪಟ್ಟು ಪ್ರಾಮಾಣಿಕವಾಗಿ ಗಳಿಸಿದ್ದನ್ನು ಎಚ್ಚರಿಕೆಯಿಂದ ಬಳಸಬೇಕು. ಇಲ್ಲವಾದಲ್ಲಿ ನೋವುಂಟಾಗುತ್ತದೆ. ಇಂದು ಪ್ರಾಮಾಣಿಕ ಮಧ್ಯಮ ವರ್ಗದ ಅಗತ್ಯ ಬಹಳಷ್ಟಿದೆ ಎಂದು ವೀರೇಶಾನಂದರು ಮಾರ್ಮಿಕವಾಗಿ ನುಡಿದರು. ಕಾಲೇಜು ಪ್ರಿನ್ಸಿಪಾಲ್ ಪ್ರೊ. ಸಿ.ಬಿ. ಬಾರಿಗಿಡದ್ ಮಾತನಾಡಿ,  ಶರಣ ಎನ್ನುವ ಪದಕ್ಕೆ ಬದ್ಧನಾಗಿರುವುದು ಇಂದು ಕಷ್ಟ ಎಂದರಲ್ಲದೆ, ಶರಣರ ಮಹತ್ವವನ್ನು ತಿಳಿಸಿದರು.

ಜಿಎಸ್‌ಎಸ್‌ಗೆ ನುಡಿ ನಮನ
ತುಮಕೂರು: ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಸಾಪ ವತಿಯಿಂದ ದಿ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಮಲ್ಲಿಕಾರ್ಜುನ ಕೆಂಕೆರೆ ಅವರಿಂದ ಇದೇ ಸಂದರ್ಭದಲ್ಲಿ ಗೀತ ಗಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರು ಜಿ.ಎಸ್.ಎಸ್ ದಾರ್ಶನಿಕರಾಗಿದ್ದರು ಎಂದು ಸ್ಮರಿಸಿದರು. ಕಥಾಕೀರ್ತಕಾರ ಡಾ. ಲಕ್ಷ್ಮಣದಾಸ್ ಅವರು ರಂಗಗೀತೆ ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಎಸ್‌ಎಸ್ ಶಿಷ್ಯರಾದ ಜಿಲ್ಲಾ ಕಸಾಪ ಅಧ್ಯಕ್ಷ ಸೋಮು ಭಾಸ್ಕರಾಚಾರ್ ಹಾಗೂ ಎನ್ ನಾಗಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ವೀರಭದ್ರಯ್ಯ ವಹಿಸಿದ್ದರು.

ಬಡವರಿಗೆ ಮಾತ್ರ ಸಾಲ ಸೌಲಭ್ಯ ದೊರಕುತ್ತಿಲ್ಲ: ಆರೋಪ
ತುಮಕೂರು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕಡು ಬಡವರಿಗೆ ಹಾಗೂ ನಿರ್ಗತಿಕರಿಗೆ ಸಾಲಸೌಲಭ್ಯ ದೊರಕುತ್ತಿಲ್ಲ. ಈ ನಿಗಮದಲ್ಲಿ ಹಲವು ರೀತಿಯ ಸಾಲ ಸೌಲಭ್ಯಗಳಿವೆ. ಆದರೆ ಬಡವರಿಗೆ ಮಾತ್ರ ದೊರಕುತ್ತಿಲ್ಲ ಎಂದು ಕರ್ನಾಟಕ ಪ್ರಜಾ ಸೇನೆ ಅಧ್ಯಕ್ಷ ಹಂಚಿಹಳ್ಳಿ ರಾಮಸ್ವಾಮಿ ಆರೋಪಿಸಿದ್ದಾರೆ. ಬಡ ಅರ್ಜಿದಾರರು ಈ ನಿಗಮದ ಅಧಿಕಾರಿಗಳಲ್ಲಿ ಹೋಗಿ ಕೇಳಿದರೆ ನಾವು ಸಾಲಕ್ಕೆ ಅರ್ಜಿ ಸಲ್ಲಿಸಿದ್ದೇವೆ. ನಮಗೆ ಸಾಲ ಮಂಜೂರು ಮಾಡಿಕೊಡಿ ಎಂದು ಕೇಳಿದರೆ ನಿಮ್ಮ  ಶಾಸಕರ ಹತ್ತಿರ ಹೋಗಿ ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವರು, ಆಯಾ ಕ್ಷೇತ್ರದ ಶಾಸಕರು ಈ ನಿಗಮದ ಜಿಲ್ಲಾ ವ್ಯವಸ್ಥಾಪಕರು ಬ್ಯಾಂಕ್ ಸಾಲಕ್ಕೆ ಇನ್ನೂ ಹೆಚ್ಚಿನ ಅರ್ಜಿದಾರರಿಗೆ ಆಯ್ಕೆ ಮಾಡುವಂತೆ ಶಿಫಾರಸು ನೀಡಬೇಕು. ನೇರ ಸಾಲಕ್ಕೆ ಅರ್ಜಿ ಸಲ್ಲಿಸಿರುವವರಿಗೆ ಈ ಬಾರಿ ನೇರ ಸಾಲ ಸಿಗುವಂತೆ ಹಾಗೂ ಹೆಚ್ಚಿನ ಅರ್ಜಿದಾರರಿಗೆ ನೇರ ಸಾಲ ಸಿಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಹಂಚಿಹಳ್ಳಿ ರಾಮಸ್ವಾಮಿ ಆಗ್ರಹಿಸಿದ್ದಾರೆ.

ರಂಜಿಸಿದ ಸಾಧ್ವಿ ಸರಸ್ವತಿ ನಾಟಕ
ತುಮಕೂರು: ತುಮಕೂರು ತಾಲೂಕು ಸ್ವಾಂದೇನಹಳ್ಳಿಯಲ್ಲಿ ಅಮರೇಶ್ವರ ವಿಜಯ ನಾಟಕ ಮಂಡಳಿಯವರು ಪ್ರಚುರಪಡಿಸಿದ ಮಾರುತೇಶ್ ಮಾಂಡ್ರೆ ವಿರಚಿತ ಸಾದ್ವಿ ಸರಸ್ವತಿ ಎಂಬ ನಾಟಕ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಲೋಕೇಶ್ ಗ್ರಾಮೀಣ ಪ್ರದೇಶಗಳಲ್ಲಿ ರಂಗಕಲೆಯು ಗ್ರಾಮಾಂತರ ಹಾಗೂ ಅಕ್ಕಪಕ್ಕದ ಜನತೆ ಸಹಬಾಳ್ವೆಯಿಂದ ನಡೆಯಲು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಈರಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಮೇಶ್, ಅಲ್ಲಾಬಕಾಶ್, ಲಕ್ಷ್ಮೀನರಸಿಂಹಯ್ಯ,ಡಾ. ವೆಂಕಟೇಶ್, ವಸಂತಮ್ಮ, ಈಶ್ವರಪ್ಪ ಇದ್ದರು. ಹೆಣ್ಣಿನ ಶೋಷಣೆ ಹಾಗೂ ವ್ಯಾಪಾರಿ ಮನೋಭಾವದ ದಬ್ಬಾಳಿಕೆಯನ್ನು ಚಿತ್ರಿಸಿರುವ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ವಿವೇಕಾನಂದ ಜನ್ಮದಿನಾಚರಣೆ
ತುಮಕೂರು: ಇಲ್ಲಿನ ಎಸ್‌ಎಸ್ ಪುರಂನ ಗೋಕುಲ ರಸ್ತೆ 2ನೇ ಕ್ರಾಸ್‌ನಲ್ಲಿರುವ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದರ 151ನೇ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರಿನ ಚಿನ್ಮಯಿ ಮಿಷನ್‌ನ ಉಪಾಧ್ಯಕ್ಷರಾದ ವರದರಾಜ್ ಪೈ ಅವರು ಸ್ವಾಮಿ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಿದರು. ವಿವೇಕಾನಂದರ ತತ್ವ ಆದರ್ಶಗಳನ್ನು ತಿಳಿಸಿ ಬದುಕಿನಲ್ಲಿ ನಿಮ್ಮ ಶಕ್ತಿಯನ್ನು ದೇಶದ ಮತ್ತು ಸಮಾಜದ ಉನ್ನತಿಗೆ ಬಳಸಿಕೊಂಡು ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವರದರಾಜ್ ಪೈ ಅವರು ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಫಣೀಶ್ ಕುಮಾರ್ ಕೆ.ಎಂ. ವಹಿಸಿದ್ದರು. ಪ್ರಾಂಶುಪಾಲರಾದ ಬಿ.ಎ. ವಾಸುದೇವ ಅವರು ನೆನಪಿನ ಕಾಣಿಕೆ ನೀಡುವ ಮೂಲಕ ಎಲ್ಲರನ್ನು ಅಭಿನಂದಿಸಿದರು.

ಇಂದು ಆಮ್ ಆದ್ಮಿ ಪಾರ್ಟಿ ಸಭೆ
ತುಮಕೂರು: ದೆಹಲಿಯ ಗದ್ದುಗೆ ಹಿಡಿದ ಆಮ್ ಆದಿ ಪಾರ್ಟಿ ತುಮಕೂರು ಜಿಲ್ಲೆಯಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆಗೆ ತೊಡಗಿದೆ. ಈಗಾಗಲೇ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಘಟಕಗಳನ್ನು ಸ್ಥಾಪಿಸಿ ಪಕ್ಷ ಸಂಘಟನೆ ಮಾಡುತ್ತಿರುವ ಆಮ್ ಆದ್ಮಿ ಪಾರ್ಟಿ ಇದೀಗ ಕೊರಟಗೆರೆಯಲ್ಲಿ ಪಕ್ಷದ ಸಭೆ ನಡೆಸಲು ನಿರ್ಧರಿಸಿದೆ. ಜ. 19 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಘಟಕದಿಂದ ಕೊರಟಗೆರೆ ನಗರದ ಸರ್ಕಾರಿ ಕಾಲೇಜಿನ ಮುಂಭಾಗದಲ್ಲಿ  ಕೊರಟಗೆರೆ ತಾಲೂಕು ಆಮ್ ಆದ್ಮಿ ಪಕ್ಷದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತು ಸದಸ್ಯತ್ವ ಅಭಿಯಾನವನ್ನು ಆಯೋಜಿಸಿದೆ. ಈಗಾಗಲೇ ತಿಪಟೂರು ನಗರದ ಪೈ ಹೊಟೇಲ್ ಮುಂಭಾಗ ಶನಿವಾರ ಪಕ್ಷದ ಸಭೆ ನಡೆಯಿತು. ಕೊರಟಗೆರೆಯಲ್ಲಿ 19 ರಂದು ನಡೆಯಲಿರುವ ಸಭೆ ಸಾರ್ವಜನಿಕರು ಭಾಗವಹಿಸುವ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಾಗೇಶ್ 8553408266 ಸಂಪರ್ಕಿಸಬಹುದು.

ತನ್ನ ಮಾನ ಹರಾಜು ಹಾಕಿಕೊಂಡ ಕಸಾಪ
ತುಮಕೂರು: ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸುವ ಮೂಲಕ ಕಸಾಪ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದೆ ಎಂದು ಚಿಂತಕ ಸಿ. ಯತಿರಾಜು ಲೇವಡಿ ಮಾಡಿದ್ದಾರೆ. ಡಾ. ಕಸ್ತೂರಿ ರಂಗನ್ ವರದಿಯ ಪೂರ್ವಾಪರಗಳೇನು, ಅದನ್ನು ವಿರೋಧಿಸುತ್ತಿರುವವರ ಪೂರ್ವಾಪರಗಳೇನು, ವರದಿಯ ಪ್ರಮುಖ ಪ್ರತಿಪಾದನೆಗಳೇನು ಎಂಬುದರ ಬಗ್ಗೆ ಯಾವುದೇ ವಿವೇಚನೆ ನಡೆಸದೆ ಆತುರಕ್ಕೆ ಬಲಿಯಾಗಿ ಇಂತಹ ನಿರ್ಣಯ ಅಂಗೀಕರಿಸುವ ಮೂಲಕ ಕಸಾಪ ತನ್ನನ್ನು ತಾನು ಅಗೌರವಿಸಿಕೊಂಡಿದೆ ಎಂದಿದ್ದಾರೆ. ಕೇಂದ್ರ ಶಾಸನಾತ್ಮಕವಾಗಿ ನೇಮಕ ಮಾಡಿದ ಕಸ್ತೂರಿ ರಂಗನ್ ಸಮಿತಿ ನೀಡಿದಂತಹ ವರದಿಯ ಬಗ್ಗೆ ಅದರ ಹಿನ್ನೆಲೆಯ ಬಗ್ಗೆ ಅವರು ಮಾಡಿರುವ ಶಿಫಾರಸುಗಳ ಬಗ್ಗೆ ಗಂಭೀರವಾಗಿ ಆಲೋಚಿಸುವ ಪ್ರಯತ್ನಗಳನ್ನೂ ಮಾಡದೆ ಬೇಜವಾಬ್ದಾರಿ ನಿರ್ಣಯ ಅಂಗೀಕರಿಸುವ ಮೂಲಕ ತನ್ನ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದೆ ಎಂದು ಹರಿಹಾಯ್ದಿದ್ದಾರೆ.

ರಾಜೇಶ್ ದೊಡ್ಮನೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ತುಮಕೂರು: ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ದೊಡ್ಮನೆ ಆಯ್ಕೆಯಾಗಿದ್ದಾರೆ. ಕಳೆದ 10 ರಂದು ನಡೆದ ಚುನಾವಣೆಯಲ್ಲಿ ಅವರು ಜಯಶಾಲಿಯಾಗಿದ್ದಾರೆ. ಕಳೆದ ಬಾರಿ ರಾಜೇಶ್ ಅವರು ತುಮಕೂರು ನಗರ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದು ಅತಿ ಹೆಚ್ಚು ಕೆಲಸ ಮಾಡಿ ಭಾರತ ದೇಶದಲ್ಲೇ ಅತ್ಯುತ್ತಮ ಯುವ ಕಾಂಗ್ರೆಸ್‌ನ ವಿಧಾನಸಭಾ ಅಧ್ಯಕ್ಷ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಳೆದ ಬಾರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ಅವರ ಸೂಚನೆ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದರು. ಈ ಬಾರಿಯೂ ಅತ್ಯಧಿಕ ಮತಗಳಿಂದ ತನ್ನನ್ನು ಗೆಲ್ಲಿಸಿದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ರಾಜೇಶ್ ದೊಡ್ಮನೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ಶೃಂಗಾರ ಪ್ರಕಾಶನದ ರೂವಾರಿಗೆ ಗೌರವಾರ್ಪಣೆ
ಚಿಕ್ಕನಾಯಕನಹಳ್ಳಿ: ಸಾಹಿತಿ ಎಂ.ವಿ.ನಾಗರಾಜರಾಯರಿಗೆ  ಇಂದು ಬೆಂಗಳೂರಿನಲ್ಲಿ ಗೌರವಾರ್ಪಣೆ ಸಮಾರಂಭ ನಡೆಯಲಿದೆ. ಪಟ್ಟಣದಲ್ಲಿ ಬಸ್‌ಏಜೆಂಟರಾಗಿದ್ದ ಎಂ.ವಿ.ನಾಗರಾಜರಾಯರು ಸಾಹಿತ್ಯ ಲೋಕದಲ್ಲಿ ತಮ್ಮ ಕತೃತ್ವ ಶಕ್ತಿಯಿಂದಾಗಿ ಗಮನ ಸೆಳೆದವರು. ತಮ್ಮ ಶೈಕ್ಷಣಿಕ ಸಮಯದಲ್ಲಿ ವ್ಯಾಸಂಗದ ಜೊತೆಗೆ ಬಸ್ ಏಜೆಂಟರಾಗಿ ಕಾರ್ಯನಿರ್ವಹಿಸಿ ತಮ್ಮ ಓದಿನ ಖರ್ಚನ್ನು ತಾವೇ ಗಳಿಸಿಕೊಳ್ಳುತ್ತಿದ್ದ ಸ್ವಾಭಿಮಾನಿ. ತಮ್ಮ ಬಿಡುವಿನ ವೇಳೆಯನ್ನು ವ್ಯರ್ಥವಾಗಿ ಕಳೆಯದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರು. ರಾಯರ ಮೊದಲ ಕೃತಿ ಅನಾವರಣ ಪ್ರಕಟಗೊಂಡದ್ದು 1999ರಲ್ಲಿ. ಅವರು ಕಟ್ಟಿಬೆಳೆಸಿದ ಶೃಂಗಾರ ಪ್ರಕಾಶನಕ್ಕೆ ಈಗ 25 ರ ಹರೆಯ. ಇಂತಹ ಸಾಹಿತ್ಯ ಪರಿಚಾರಕನಿಗೆ ಜ.19 ಭಾನುವಾರ  ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನ ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಅವರ ಅಭಿಮಾನಿ ಬಳಗ ಸಮಾರಭವನ್ನು ಏರ್ಪಡಿಸಿ ಗೌರವಿಸುತ್ತಿದ್ದಾರೆ.

ಬಾಲಗಂಗಾಧರನಾಥ ಶ್ರೀಗಳ ಪುಣ್ಯಾರಾಧನೆ
ತುಮಕೂರು: ತುಮಕೂರಿನ ಉಪ್ಪಾರಹಳ್ಳಿ ಬಡಾವಣೆಯ ಆರೋ ವೃತ್ತದಲ್ಲಿ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಬಾಲಗಂಗಾಧರ ನಾಧ ಸ್ವಾಮೀಜಿಯ ಪ್ರಥಮ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು. ಉಪ್ಪಾರಹಳ್ಳಿ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ. ರಾಮೇಗೌಡ ಅವರ ನೇತೃತ್ವದಲ್ಲಿ ಈ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು. ನಂತರ ಎಲ್ಲರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಯುವ ಜನತಾದಳ ಜಿಲ್ಲಾಧ್ಯಕ್ಷ ಬೆಳ್ಳಿ ಲೋಕೇಶ್, ಪ್ರೇಮ ಹೆಗ್ಗಡೆ, ಟಿ.ಸಿ. ಪ್ರೇಮಲತಾ, ಸಪ್ತಗಿರಿ ಬಡಾವಣೆಯ ಹೊಟೇಲ್ ಮೂರ್ತಿ ಅವರ ಸಮ್ಮುಖದಲ್ಲಿ ಉಪ್ಪಾರಹಳ್ಳಿಯ ಕಂಟ್ರಾಕ್ಟರ್ ಶಿವಕುಮಾರ್, ಅಯೂಬ್ ಕಾರ್ಯಕ್ರಮ  ಹಾಗೂ ಅಪಾರ ಭಕ್ತ ಸಮೂಹ ಈ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಈ  ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀಗಳ ಸಾಧನೆಯನ್ನು ಸ್ಮರಿಸಲಾಯಿತು.

ಇಂದು ನವೋದಯ ಯುವ ವೇದಿಕೆಯ ವಾರ್ಷಿಕೋತ್ಸವ
ಶಿರಾ: ಶ್ರೀ ನವೋದಯ ಯುವ ವೇದಿಕೆಯ ಪ್ರಥಮ ವಾರ್ಷಿಕೋತ್ಸವ, ಗಣ್ಯರಿಗೆ ಸನ್ಮಾನ, ದಿನದರ್ಶಿಕೆ ಬಿಡುಗಡೆ ಹಾಗೂ ರಂಗಸಂಭ್ರಮ ಸಮಾರಂಭವನ್ನು ಜನವರಿ 19 ಭಾನುವಾರದಂದು ಸಂಜೆ 6 ಗಂಟೆಗೆ ರಂಗನಾಥನಗರದ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಜಯರಾಮಕೃಷ್ಣಪ್ಪ ಅವರು ವಹಿಸುವರು. ಸಂಸದ ಜನಾರ್ದನ ಸ್ವಾಮಿ ಅವರು ಸನ್ಮಾನಿತರಿಗೆ ಅಭಿನಂದಿಸುವರು. ಮಾಜಿ ಸಚಿವ ಬಿ.ಸತ್ಯನಾರಾಯಣ ಅವರು ರಂಗ ಸಂಭ್ರಮ  ಉದ್ಘಾಟಿಸುವರು. ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಅವರು ರಂಗ ಕಲಾವಿದರಿಗೆ ಸನ್ಮಾನಿಸುವರು. ದಿನದರ್ಶಿಕೆಯನ್ನು ಸಮಾಜ ಸೇವಕ ಕಲ್ಕೆರೆ ರವಿಕುಮಾರ್ ಬಿಡುಗಡೆ ಮಾಡುವರು.  ಸಮಾರಂಭದಲ್ಲಿ ಡಾ.ಸುಲಗಿತ್ತಿ ನರಸಮ್ಮ, ವೈಜನಾಥ್ ಬಿರಾದಾರ್, ಲೋಕೇಶ್‌ಕೃಷ್ಣ, ದ್ವಾರನಕುಂಟೆ ಲಕ್ಷ್ಮಣ್ ಇವರನ್ನು ಸನ್ಮಾನಿಸಲಾಗುವುದು.

21ರಂದು ವಾರ್ಷಿಕೋತ್ಸವ, ಛಾಯಾಸ್ಫೂರ್ತಿ -2014
ತುಮಕೂರು: ತುಮಕೂರು ಜಿಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ 18 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಛಾಯಾಸ್ಫೂರ್ತಿ 2014 ರ ಸಮಾರಂಭವನ್ನು ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜ.21 ರಂದು ಬೆಳಗ್ಗೆ 10-30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ವೆಬ್ ಸೈಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿಎಸ್ ಬಿ, ಮಹಾಪೌರರಾದ ಗೀತಾ ರುದ್ರೇಶ್, ಡಿಸಿ, ಎಸ್ಪಿ ಇತರರು ಪಾಲ್ಗೊಳ್ಳಲ್ಲಿದ್ದಾರೆ. ಸಂಘದ ಅಧ್ಯಕ್ಷ ಭಕ್ತವತ್ಸಲಂ ಅಧ್ಯಕ್ಷತೆ ವಹಿಸಲಿದ್ದಾರೆ. ಸಿದ್ಧಗಂಗಾ ಶ್ರೀಗಳು ಉದ್ಘಾಟಿಸಿ, ಸಾನಿಧ್ಯ ವಹಿಸಲಿದ್ದಾರೆ. ಮಧ್ಯಾಹ್ನ 2 ಕ್ಕೆ ಅತ್ಯಾಧುನಿಕ ವಿಡಿಯೋ ಕ್ಯಾಮೆರಾಗಳ ಕಾರ್ಯಾಗಾರ ಏರ್ಪಾಟಾಗಿದೆ. 3-30 ಕ್ಕೆ ಸಮಾರೋಪ ಸಮಾರಂಭ ಏರ್ಪಾಟಾಗಿದೆ.

ದಲಿತ ಮಹಿಳೆ ಮೇಲೆ  ಅಧಿಕಾರಿ ದೌರ್ಜನ್ಯಕ್ಕೆ ಆಕ್ಷೇಪ
ತಿಪಟೂರು: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ದಲಿತ ಮಹಿಳೆ ತಾಯಮ್ಮ ಎಂಬುವವರ ಮೇಲೆ ಹೊನ್ನವಳ್ಳಿ ಕಂದಾಯ ತನಿಖಾ ಅಧಿಕಾರಿ ನರಸಿಂಹಮೂರ್ತಿ ಅವಾಚ್ಯ ಶಬ್ದಗಳಿಂದ ಬೈದು ದೌರ್ಜನ್ಯ ಎಸಗಿರುವುದು ಸರಿಯಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ನಾಗತೀಹಳ್ಳಿ ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಹೊನ್ನವಳ್ಳಿ ಹುಲಿಹಳ್ಳಿ ಸರ್ವೇ ನಂ.116-1ರಲ್ಲಿ 4.20ಗುಂಟೆಯನ್ನು ತಾಯಮ್ಮನ ತಂದೆ ಹುಚ್ಚಯ್ಯನವರು ವಿಭಾಗದ ಮೂಲಕ ಖಾತೆ ಮಾಡುವಂತೆ ಸುಮಾರು 4-5 ಬಾರಿ ಅರ್ಜಿ ಸಲ್ಲಿಸಿದ್ದು, ಖಾತೆ ಮಾಡದೇ ಹಾರಿಕೆ ಉತ್ತರ ನೀಡಿದ್ದರಿಂದ ತಾಯಮ್ಮ ನ್ಯಾಯ ಕೊಡಿಸುವಂತೆ ಮೇಲಾಧಿಕಾರಿಗಳಿಗೆ ದೂರು ನೀಡಿದಾಗ ಕುಪಿತಗೊಂಡ ಕಂದಾಯ ಅಧಿಕಾರಿ ನರಸಿಂಹಮೂರ್ತಿ ದಾರಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದರು.

ಪದವೀಧರ ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ: ಪದವಿ ಮತ್ತು ಬಿಇಡಿ ತತ್ಸಮಾನ ಪರೀಕ್ಷೆಗಳಲ್ಲಿ ಜನವರಿ 1, 2014ರಲ್ಲಿ ತೇರ್ಗಡೆ ಹೊಂದಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಸದರಿ ವಿಷಯಕ್ಕೆ ಸಂಬಂದಿಸಿದಂತೆ  ಪ್ರಕಟಣೆ ನೀಡಿರುವ ಅವರು ಜವರಿ 1, 2013ರಲ್ಲಿದ್ದಂತೆ ಜಿಲ್ಲಾವಾರು ಮತ್ತು ವಿಷಯವಾರು ಪದವಿ ಮತ್ತು ಬಿಇಡಿ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಶಿಕ್ಷಕರ  ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು  ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಶಿಕ್ಷಕರು ಮತ್ತು ಜನವರಿ 1, 2013ರ ನಂತರ ಪದವಿ, ಬಿಇಡಿ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಹತೆಯ ಪೂರಕ ದಾಖಲಾತಿಗಳೊಂದಿಗೆ 20-1-2014ರೊಳಗೆ ಕಚೇರಿಯ ವ್ಯಸ್ಥಾಪಕರಿಗೆ  ಸಲ್ಲಿಸುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.