ತುಮಕೂರು

ಅವರಗಲ್ಲು ಸಮೀಪ ಗಾರ್ಮೆಂಟ್ ಫ್ಯಾಕ್ಟರಿ

Published On :

ಮಧುಗಿರಿ: ತಾಲೂಕಿನ ಯುವ ಜನಾಂಗ ಉದ್ಯೋಗ ಅರಸಿ ನಗರಗಳತ್ತ ಗುಳೇ ಹೋಗುವುದನ್ನು ತಪ್ಪಿಸಲು ಅವರಗಲ್ಲು ಸಮೀಪ 200 ಎಕರೆ ಪ್ರದೇಶದಲ್ಲಿ ಗಾರ್ಮೆಂಟ್  ಫ್ಯಾಕ್ಟರಿ ಪ್ರಾರಂಭಿಸಲಾಗುವುದು ಎಂದು ಶಾಸಕ  ಕೆ.ಎನ್. ರಾಜಣ್ಣ ತಿಳಿಸಿದರು. ಮಿಡಿಗೇಶಿಯಲ್ಲಿ ಸಿಗಂಧೂರು ಶ್ರೀಚೌಡೇಶ್ವರಿ ಪೆಟ್ರೋಲ್ ಬಂಕ್ ಉದ್ಘಾಟಿಸಿ ಮಾತನಾಡಿದ ಅವರು,ಈಗಾಗಲೇ ಸಾಕಷ್ಟು ಮಂದಿ ನಮ್ಮ ತಾಲೂಕಿನ ಜನತೆ  ನಗರಗಳಿಗೆ ಗುಳೇ ಹೋಗಿ
ಗಾರ್ಮೆಂಟ್ಸ್ ಮತ್ತು ಹಲವು ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ. ಗುಳೇ ತಪ್ಪಿಸಲು  ಬೆಂಗಳೂರಿನ ಶ್ರೀಕಣ್ವ ಫ್ಯಾಷನ್ ಪತ್ತಿನ ಗಾರ್ಮೆಂಟ್ಸ್ ಅವರ ಜತೆ ಚರ್ಚಿಸಿ ನಮ್ಮ ತಾಲೂಕಿನಲ್ಲೇ ವಿದ್ಯಾವಂತ ನಿರುದ್ಯೋಗಿಗಳಿಗೆ  ಉದ್ಯೋಗ ಒದಗಿಸಿ ಕೊಡಲು ಗಾಮೆಂರ್ಟ್ ಫ್ಯಾಕ್ಟರಿ ಪ್ರಾರಂಭಿಸಲು ಅವರಗಲ್ಲು ಸಮೀಪ 200 ಎಕರೆ ಭೂಮಿ ಹೊಂದಿದ್ದು, ಇನ್ನು 200 ಎಕರೆ ಜಮೀನು ಖರೀದಿಸಿ ಮೇ 1ರ ಕಾರ್ಮಿಕ ದಿನಾಚರಣೆ ದಿನ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ಮಿಡಿಗೇಶಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ  ಕೇಂದ್ರವಾಗಿ ಮಾರ್ಪಟಾಗಿದ್ದು, ನಿಯೋಜನೆಗೊಂಡ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಕ್ಕೆ ದಂಡ ಕಟ್ಟಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರ ಜತೆ ಚರ್ಚಿಸಿ 1 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಮಧುಗಿರಿಯಲ್ಲಿ ಎಆರ್ಟಿ ಕಚೇರಿಗೆ ಭೂಮಿ ಖರೀದಿಸಲು ಜಮೀನು ಶುಲ್ಕ 27 ಲಕ್ಷ ರು.ಪಾವತಿಸಿದ್ದು, ಮಧುಗಿರಿ ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆಗೆ 37 ಲಕ್ಷ ರು.ಮಂಜೂರಾತಿ ದೊರೆತಿರುವುದಾಗಿ ತಿಳಿಸಿದ ರಾಜಣ್ಣ, ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮಧುಗಿರಿಗೆ ಕರೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದರು. ಮುಖ್ಯ ಅತಿಥಿ ಆಂಧ್ರ ರಾಜ್ಯದ ಮಡಕಶಿರಾ ತಾಲೂಕಿನ ಎಂಎಲ್‌ಸಿ ಗುಂಡುಮಾಲಾ ತಿಪ್ಪೇಸ್ವಾಮಿ ಮಧುಗಿರಿಯಿಂದ- ಪಾವಗಡಕ್ಕೆ ಹಾದು ಹೋಗುವ ನದಿ ನೀರಿಗೆ ಆಂಧ್ರ ಸರ್ಕಾರ ಯಾವುದೇ ರೀತಿಯ ತೊಂದರೆ ಮಾಡದೇ ಅನುಕೂಲ ಮಾಡಿ ಕೊಡುವುದಾಗಿ ಭರವಸೆ ನೀಡಿದರು. ಬೆಂಗಳೂರಿನ ಕಣ್ವ ಪತ್ತಿನ ಗಾರ್ಮೆಂಟ್ ಮ್ಯಾನೇಜಿಂಗ್ ಡೈರಕ್ಟರ್ ನಂಜುಂಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸ್. ಮಲ್ಲಿಕಾರ್ಜುನಯ್ಯ, ಗ್ರಾ.ಪಂ.ಸದಸ್ಯರು ಹಾಗೂ ತಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಕಾಡುಗಳ್ಳರ ಬಂಧನ
ತಿಪಟೂರು: ಸಂರಕ್ಷಿತ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ತಿಪಟೂರು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಚೌಡ್ಲಾಪುರ ಅರಣ್ಯ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ 6.30ರ ಸಮಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ದೊಡ್ಡ ದೊಡ್ಡ ಬಲೆಗಳನ್ನು ಬೀಸಿ ಕಾದು ಕುಳಿತಿದ್ದ  8ರಿಂದ 10 ಜನರಿದ್ದ ತಂಡದ ಮೇಲೆ ಹಠಾತ್ ದಾಳಿ ನಡೆಸಿದ ತಿಪಟೂರು ವಲಯ ಅರಣ್ಯ ಸಿಬ್ಬಂದಿ ಮೂರು ಜನರನ್ನ ಬಂಧಿಸಿ ಅವರಿಂದ ಪ್ರಾಣಿಗಳನ್ನು ಹಿಡಿಯಲು ಬಳಸುವ ದೊಡ್ಡ ಬಲೆಗಳು, ಗೂಟ ಮತ್ತು ಚೂಪಾದ ಆಯುಧಗಳು ಮತ್ತು ಇತರೆ ಪರಿಕರಗಳನ್ನು ವಶಪಡಿಸಿಕೊಂಡಿತು. ಬಂಧಿತರನ್ನು ಬೂವನಹಳ್ಳಿ ನಾಗರಾಜು, ಮರಿಯಪ್ಪ ಮತ್ತು ಶೆಟ್ಟೀಕೆರೆಯ ಶಿವಣ್ಣ ಎಂದು ಗುರುತಿಸಲಾಗಿದ್ದು ಈ ಮೂವರ ಮೇಲೆ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯನ್ವಯ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪ ಪಟ್ಟಿ ಸಲ್ಲಿಸಲಾಯಿತು. ತಪ್ಪಿಸಿಕೊಂಡ ತಂಡದ ಇನ್ನುಳಿದ ಸದಸ್ಯರಿಗಾಗಿ ಶೋಧ ನಡೆದಿದ್ದು ಶೀಘ್ರವಾಗಿ ಬಂದಿಸುವುದಾಗಿ ವಲಯ ಅರಣ್ಯಾಧಿಕಾರಿ ನಾಗೇಂದ್ರ ಹಾಗೂ ಸತ್ಯನಾರಾಯಣ ತಿಳಿಸಿದರು. ಡಿಆರ್‌ಎಫ್ ನಾಗರಾಜು, ಸಿಬ್ಬಂದಿ ಸಿದ್ಧಲಿಂಗಮೂರ್ತಿ, ಮಂಜುನಾಥ ಮತ್ತಿತರರು ದಾಳಿ ಸಮಯದಲ್ಲಿದ್ದರು.
ಉಡ ಸಾಗಣೆ; ವ್ಯಕ್ತಿ ಬಂಧನ
ಹನೂರು: ಹನೂರು ವನ್ಯಜೀವಿ ವಲಯದ ಬಂಡಳ್ಳಿ ಶಾಖೆಯ ಬಂಡಳ್ಳಿ ಎ ಗಸ್ತಿನ ಗೊಲ್ಲನಕೆರೆಹಳ್ಳ ಅರಣ್ಯ ಪ್ರದೇಶದಲ್ಲಿ ಉಡ ಹಿಡಿದು ಸಾಗಿಸುತ್ತಿದ್ದ  ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಂದ್ರಯ್ಯನ ದುರ್ಗದ ನಿವಾಸಿ ನಾಗಮಹದೇವಯ್ಯ ಎಂಬುವವನನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಗೊಲ್ಲನಕೆರೆಹಳ್ಳದಲ್ಲಿ ಉಡ ಹಿಡಿದಿದ್ದ ಖಚಿತ ಮಾಹಿತಿ ಮೇರೆಗೆ  ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಎಂ.ನಾಗರಾಜು ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಆರ್.ಸಾಲನ್, ವಲಯ ಅರಣ್ಯಾಧಿಕಾರಿ ಬಿ.ಸಿ.ಲೋಕೇಶ್ ಮತ್ತಿತರರು  ದಾಳಿ ನಡೆಸಿ ಆತನನ್ನು ಬಂಧಿಸಿದ್ದು, ಉಡ ವಶಪಡಿಸಿಕೊಂಡು ಆರೋಪಿಯನ್ನು ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತುರುವೇಕೆರೆ ತಾಪಂ ಅಧ್ಯಕ್ಷರಾಗಿ ಗಂಗಾಧರ್?
ತುರುವೇಕೆರೆ: ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕೋಳಾಲ ಗಂಗಾಧರ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.  ಹಿಂದಿನ ಅಧ್ಯಕ್ಷರಾಗಿದ್ದ ಜಿ.ಎಂ.ಲಕ್ಷ್ಮೀಕಾಂತ್  ರಾಜಿನಾಮೆ ನೀಡಿರುವುದರಿಂದ ಸೋಮವಾರ ನೂತನ ಅಧ್ಯಕ್ಷರ ಆಯ್ಕೆ ಆಗಲಿದೆ. ಶಾಸಕ ಎಂ.ಟಿ.ಕೃಷ್ಣಪ್ಪನವರ ಆಣತಿಯಂತೆಯೇ ಮುಂದಿನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಮಲ್ಲಾಘಟ್ಟ ಕ್ಷೇತ್ರವನ್ನು ಪ್ರತಿನಿಧಿಸುವ ಕೋಳಾಲ ಗಂಗಾಧರ್ ಜೆಡಿಎಸ್‌ನ ಸದಸ್ಯರಾಗಿದ್ದಾರೆ. ತಾಲೂಕು ಪಂಚಾಯ್ತಿಯಲ್ಲಿ 17 ಮಂದಿ ಸದಸ್ಯರಿದ್ದು ಇವರಲ್ಲಿ ಇಬ್ಬರು ಮಾತ್ರ ಬಿಜೆಪಿಯ ಸದಸ್ಯರು. ಉಳಿದ 15 ಮಂದಿಯೂ ಜೆಡಿಎಸ್‌ನ ಸದಸ್ಯರಾಗಿದ್ದಾರೆ.
ಆರೋಗ್ಯ ತಪಾಸಣಾ ಶಿಬಿರ
ಚಿಕ್ಕನಾಯಕನಹಳ್ಳಿ: ದೇಶದಲ್ಲಿ ರೋಟರಿ ಮತ್ತು ಇನ್ನರ್‌ವ್ಹೀಲ್ ಕ್ಲಬ್‌ಗಳು ಸೇವೆಗೆ ಹೆಸರಾಗಿವೆ ಎಂದು ಮೈಸೂರಿನ ಆರ್ಯುವೇದ ವೈದ್ಯರಾದ ಡಾ. ಗುರುಬಸವಯ್ಯನವರು ನುಡಿದರು.  ಭಾನುವಾರ ಅವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿದ್ದ ಆಯುರ್ವೇದ  ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಶಿಬಿರದಲ್ಲಿ ಅಸ್ತಮಾ, ಕೀಲು ನೋವು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ, ಸೋರಿಯಾಸಿಸ್ (ಇಸುಬು) ಕಣ್ಣಿನ ಸಮಸ್ಯೆ, ಕಿವಿ, ಮೂಗು ಮುಂತಾದ ರೋಗಗಳಿಗೆ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಗುವುದು.
ಇನ್ನರ್‌ವ್ಹೀಲ್ ಅಧ್ಯಕ್ಷೆ ತೇಜಾವತಿ ಮಾತನಾಡಿ ನಮ್ಮ ತಂಡದಲ್ಲಿ ಸೇವಾ ಮನೋಭಾವದಿಂದ ಕಾರ್ಯಕ್ರಮವನ್ನು ನಡೆಸುವ ಸದಸ್ಯರ ತಂಡವಿದ್ದು, ಮೈಸೂರಿನ ಆರೋಗ್ಯ ಭಾರತಿ ಸಮತಿ ನೀಡುವ ಸಹಕಾರವನ್ನು ಸ್ವೀಕರಿಸುತ್ತೇವೆ ಎಂದರು. ರೋಟರಿ ಅಧ್ಯಕ್ಷರಾದ ಸಿ.ಎಸ್. ಪ್ರದೀಪ್, ರೋಟರಿ ಕಾರ್ಯದರ್ಶಿ ಶಶಿಕಲಾ ಜಯದೇವ್, ಪುಷ್ಪ ಶಿವಣ್ಣ, ಪುಷ್ಪ ವಾಸುದೇವ್, ಭಾರತಿ ನಟರಾಜ್ ಮುಂತಾದವರಿದ್ದರು.
ಗೊಲ್ಲಹಳ್ಳಿಯತ್ತ 4 ಕಾಡಾನೆಗಳ ಪಯಣ
ತುಮಕೂರು: ಮಲ್ಲಸಂದ್ರ ಕೆರೆಯಲ್ಲಿ ಬೀಡುಬಿಟ್ಟಿದ್ದ ನಾಲ್ಕು ಕಾಡಾನೆಗಳು ಭಾನುವಾರ ಗೊಲ್ಲಹಳ್ಳಿಯತ್ತ ಪಯಣ ಬೆಳೆಸಿದವು. ಗೊಲ್ಲಹಳ್ಳಿಯಲ್ಲಿರುವ ಅರಣ್ಯ ಇಲಾಖೆ ನರ್ಸರಿಗೆ ಆಗಮಿಸಿದ ಕಾಡಾನೆಗಳನ್ನು ಬೆನ್ನತ್ತಿರುವ ಅರಣ್ಯ ಇಲಾಖೆ ಆರ್‌ಎಫ್‌ಓ ನರಸಿಂಹಮೂರ್ತಿ ಮತ್ತು ಸಿಬ್ಬಂದಿ ಆನೆಗಳನ್ನು ಮರಳಿ ಮಲ್ಲಸಂದ್ರ, ಗೊಲ್ಲಹಳ್ಳಿ, ಗಂಗಸಂದ್ರ ಮೂಲಕ ಮರಳಿ ಸ್ವಸ್ಥಾನಕ್ಕೆ ಕಳುಹಿಸಲು ಪ್ರಯತ್ನಿಸಿದರು. ಸಂಜೆ 6.45ರ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಅನ್ನು ದಾಟಿ ಆನೆಗಳು ಗೊಲ್ಲಹಳ್ಳಿ ಕಡೆ ಸಾಗಿದವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗೊಲ್ಲಹಳ್ಳಿ ಸುತ್ತಮುತ್ತ ವಸತಿ ಪ್ರದೇಶಗಳಿದ್ದು, ಆನೆಗಳು ಈ ಭಾಗಕ್ಕೆ ಪ್ರವೇಶಕೊಟ್ಟಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.  ಸಾರ್ವಜನಿಕರು ಆನೆ ನೋಡುವ ಕುತೂಹಲದಿಂದ ಆನೆಗಳ ಹತ್ತಿರ ಸುಳಿದು ಕೀಟಲೆ ಮಾಡುವುದು, ಓಡಿಸುವ ಪ್ರಯತ್ನ ಮಾಡುವುದು ಇದ್ಯಾವುದನ್ನು ಮಾಡದೇ ಅವುಗಳ ಪಾಡಿಗೆ ಬಿಟ್ಟು ದೂರ ಉಳಿಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪಕ್ಷಾಂತರಿಗಳಿಗೆ 'ಕೈ' ಟಿಕೆಟ್ ನೀಡಬೇಡಿ
ಚಿಕ್ಕನಾಯಕನಹಳ್ಳಿ: ಪಕ್ಷದಿಂದ ಅನೇಕ ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಿ ಕಷ್ಟಪರಿಸ್ಥಿತಿಯಲ್ಲಿ ಪಕ್ಷವನ್ನು ತೊರೆದು ಹೋದವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದೆಂದು ಕಾಂಗ್ರೆಸ್ ಮುಖಂಡರಾದ ಬಿ.ಎನ್.ಲೋಕೇಶ್ ಆಗ್ರಹಿಸಿದ್ದಾರೆ.
ಈ ಸಂಬಂಧ ನೀಡಿರುವ  ಹೇಳಿಕೆ ನೀಡಿರುವ ಅವರು ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಿಣಿಯಾದ ಟಿ.ಬಿ.ಜಯಚಂದ್ರರವರ ಪುತ್ರ ಸಂತೋಷ್ ಜಯಚಂದ್ರ ಕ್ಷೇತ್ರದ ಜನತೆಗೆ ಚಿರಪರಿಚಿತರಾಗಿದ್ದಾರೆ. ಅಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಸಂತೋಷ್ ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಪಕ್ಷ ಗೆಲವು ಸಾಧಿಸುವದರಲ್ಲಿ ಸಂದೇಹವಿಲ್ಲ. ಆದರೆ ಪಕ್ಷದಿಂದ ಹೊರಹೋಗಿ ಬೇರೆ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಪುನಃ ಪಕ್ಷದ ಟಿಕೆಟ್ ಪಡೆಯಲು ಹವಣಿಸುತ್ತಿರುವ ಜಿ.ಎಸ್. ಬಸವರಾಜು ಅವರಂತಹ ಅವಕಾಶವಾದಿಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಬಿಜೆಪಿ ಟಿಕೆಟ್ ಪಡೆದು ಸಂಸದರಾಗಿ ಆಯ್ಕೆಯಾಗಿ, ನಂತರ ಕೆಜೆಪಿ ಸೇರಿದ್ದರಿಂದ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಪುನಃ ಕಾಂಗ್ರೆಸ್ ಬಾಗಿಲಿಗೆ ಬಂದಿದ್ದಾರೆ. ಇಂತಹ ಗೋಸುಂಬೆ ರಾಜಕಾರಣಿಗಳಿಗೆ ಪಕ್ಷ ಮಣೆ ಹಾಕಬಾರದು. ಸಂತೋಷ್ ಅವರು ಯುವಕರಾಗಿದ್ದು, ಅವರಿಗೆ ಟಿಕೆಟ್ ನೀಡುವಂತೆ  ಮುಖ್ಯಮಂತ್ರಿಗಳನ್ನು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ.ಪರಮೇಶ್ವರ್ ಅವರನ್ನು ಬಿ.ಎನ್.ಲೋಕೇಶ್ ಒತ್ತಾಯಿಸಿದ್ದಾರೆ.
ನೀರಿಗಾಗಿ ಹೋರಾಟ: ಸಲಹೆ, ಸೂಚನೆಗೆ ಕರೆ
ಕೊರಟಗೆರೆ: ಕುಡಿಯುವ ನೀರಿಗಾಗಿ ನಾಗರಿಕರ ಬೃಹತ್ ಹೋರಾಟಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಮಠಾಧೀಶರ, ರೈತರ, ಪ್ರಗತಿಪರ ಚಿಂತಕರ, ಬೃಹತ್ ಆಂದೋಲನಕ್ಕೆ ಪ್ರಥಮ ಪೂರ್ವಭಾವಿ ಸಭೆಯನ್ನು ಜ.24 ರಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದಲ್ಲಿ ಮಧ್ಯಾಹ್ನ 12 ಘಂಟೆಗೆ ಸಭೆಯನ್ನು ಕರೆಯಲಾಗಿದ್ದು ಬೃಹತ್ ಸಂಖ್ಯೆಯ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡುವುದರ ಮೂಳಕ ಯಶಸ್ವಿ ಹೋರಾಟಕ್ಕೆ ನಾಂದಿ ಹಾಡಬೇಕೆಂದು ತಿಳಿಸಲಾಗಿದೆ.
ಅಜ್ಜೆನಹಳ್ಳಿ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಇಂದು ಚಾಲನೆ
ಶಿರಾ: ತಾಲೂಕಿನ ಕಳ್ಳಂಬೆಳ್ಳ ದೊಡ್ಡ ಕೆರೆಯಿಂದ ಮದಲೂರು ಕೆರೆಗೆ ಹಾಗೂ ಮಾರ್ಗ ಮಧ್ಯದ 11 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರನ್ನು ಹರಿಸುವ ಯೋಜನೆಯ ಪ್ರಾರಂಭಿಕ ಹಂತವಾಗಿ ಮೊದಲಿಗೆ ಕಳ್ಳಂಬೆಳ್ಳ ಕೆರೆಯಿಂದ ಅಜ್ಜೆನಹಳ್ಳಿ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಜ. 20 ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಳ್ಳಂಬೆಳ್ಳ ಕೆಂಚಗಾನಹಳ್ಳಿ ನಾಲೆ ಹತ್ತಿರ ಚಾಲನೆ ನೀಡುವರು.
ಈ ಬಗ್ಗೆ ತಾಲೂಕು ಹೇಮಾವತಿ ಹೋರಾಟ ಸಮಿತಿಯವರು ಈ ಹಿಂದೆ ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿಸಲು 1994 ರಿಂದ ಟಿ.ಬಿ.ಜಯಚಂದ್ರ ಅವರ ನೇತೃತ್ವದಲ್ಲಿ ಹಾಗೂ ಪ್ರಮುಖರ ಸಹಭಾಗಿತ್ವದಲ್ಲಿ ನಡೆದ ಹೋರಾಟದ ಫಲವಾಗಿ ಅ. 28, 2004 ರಂದು ಕಳ್ಳಂಬೆಳ್ಳ-ಶಿರಾ ಕೆರೆಗೆ ಕುಡಿಯುವ ನೀರು ಸಲುವಾಗಿ ಹೇಮಾವತಿ ನೀರು ಹರಿಸುವಲ್ಲಿ ನಮ್ಮ ಹೋರಾಟ ಯಶಸ್ವಿಯಾಯಿತು. 2004 ರಿಂದ 2014 ರವರೆಗೂ ನಿರಂತರವಾಗಿ 10 ವರ್ಷಗಳ ಕಾಲ ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗೆ ನೀರು ಹರಿದು ಇಲ್ಲಿನ ನಾಗರಿಕರಿಗೆ ಕುಡಿಯುವ ನೀರಿನ ದಾಹ ನೀಗಿಸಿದೆ.
ಆದಿಚುಂಚನಗಿರಿ ಬಾಲಗಂಗಾಧರಶ್ರೀಗಳ ಸಾಧನೆ ಆದರ್ಶನೀಯ: ಹನುಮಂತನಾಥ ಶ್ರೀ
ಕನ್ನಡಪ್ರಭ ವಾರ್ತೆ ,  ಕೊರಟಗೆರೆ ,  ಜ.19
ಇಡೀ ಮನುಕುಲಕ್ಕೆ ಆದಿಚುಂಚನಗಿರಿ ಬಾಲಗಂಗಾಧರಶ್ರೀಗಳ ಸಾಧನೆ ಆದರ್ಶನೀಯ ಎಂದು ಎಲೇರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಪ.ಪಂ ಮುಂಭಾಗ ಶ್ರೀಗಳ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಹಾಗೂ ವಿಶೇಷ ಪೂಜೆ  ನೆರವೇರಿಸಿ ಮಾತನಾಡಿ ಶ್ರೀಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲದ ಉದ್ಧಾರಕ್ಕಾಗಿ ಇಡೀ ಭಾರತದಲ್ಲೇ ಉತ್ತಮ ದರ್ಜೆಯ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ಹಲವಾರು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅತೀ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿಹೋಗಿದ್ದು ಅವರನ್ನು ಎಲ್ಲಾ ಸಾಧಕರು ಅನುಕರಿಸಬೇಕು ಎಂದರು.
ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಣ್ಣ, ಹುಲೀಕುಂಟೆ ರುದ್ರಪ್ರಸಾದ್, ನಿವೃತ್ತ ಶಿಕ್ಷಕ ಮಲ್ಲೇಶಯ್ಯ, ಬೆಸ್ಕಾಂ ನಟರಾಜು, ಗುಂಡಿನ ಪಾಳ್ಯ ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
ಇಂದು ಬೂತ್ ಮಟ್ಟದ ಕಾರ್ಯಾಗಾರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ,  ಕೊರಟಗೆರೆ ,  ಜ.19
ಭಾರತೀಯ ಜನತಾ ಪಕ್ಷದ ಬೂತ್ ಮಟ್ಟದ ಕಾರ್ಯಾಗಾರ ಉದ್ಘಾಟನೆಯನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ  ಲಕ್ಷ್ಮೀನರಸಿಂಹ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.