ಟಿವಿ, ಸಿನಿಮಾ ಮೋಹ; ನಾಟಕ ಕಲೆ ಕಣ್ಮರೆ
ಕ.ಪ್ರ.ವಾರ್ತೆ ತಿಪಟೂರು ಜ.20
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಟಿ.ವಿ, ಸಿನಿಮಾಗಳ ಮೋಹಕ್ಕೊಳಗಾಗಿ ನಾಟಕ ಕಲೆಗಳು ಕಣ್ಮರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ತಿಪಟೂರಿನ ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರವು ಹಾಸ್ಯಚಕ್ರವರ್ತಿ ನರಸಿಂಹರಾಜು ನೆನಪಿನಲ್ಲಿ ನೀನಾಸಂ ನಾಟಕಗಳನ್ನು ನಡೆಯುವ ಮೂಲಕ ಕಲೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಪಟ್ಟಣದ ಕೆ.ಆರ್.ಬಡಾವಣೆಯ ಬಯಲು ರಂಗಮಂದಿರದಲ್ಲಿ ಹೆಗ್ಗೋಡು ನೀನಾಸಂ ತಿರುಗಾಟದ ನಾಟಕೋತ್ಸವವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದು ಇಂತಹ ಕಲೆಯನ್ನು ಉಳಿಸುವ ಜೊತೆಗೆ ಪ್ರೋತ್ಸಾಹಿಸುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ. ಭೂಮಿ ಸಂಸ್ಥೆ ಈ ಕೆಲಸವನ್ನು ಮಾಡುತ್ತಿದ್ದು ಅದಕ್ಕೆ ಎಲ್ಲ ರೀತಿಯ ಸಹಕಾರವನ್ನು ಕೊಡಲಾಗುವುದು ಎಂದರು.
ಶೀಘ್ರ ಕಾಮಗಾರಿ ಮುಕ್ತಾಯ: ಆಮೆ ವೇಗದಲ್ಲಿ 2-3 ವರ್ಷಗಳಿಂದ ನಿರ್ಮಾಣವಾಗುತ್ತಿರುವ ನರಸಿಂಹರಾಜು ರಂಗಮಂದಿರದ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಭೂಮಿ ಸಂಸ್ಥೆಯ ಸತೀಶ್ ಮನವಿಗೆ ಉತ್ತರಿಸಿದ ಸಚಿವರು ಆದಷ್ಟು ಶೀಘ್ರವಾಗಿ ಕೆಲಸಗಳನ್ನು ಮುಗಿಸಿ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರೋತ್ಸಾಹ ಅಗತ್ಯ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ಕಲ್ಪತರು ನಾಡು ಕಲೆ ಮತ್ತು ಕಲಾವಿದರಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಹಲವಾರು ವರ್ಷಗಳಿಂದಲೂ ಉತ್ತರ ಕರ್ನಾಟಕದ ಹಾಗೂ ಗುಬ್ಬಿ ವೀರಣ್ಣ ನಾಟಕ ಕಂಪನಿಯ ನಾಟಕಗಳು ತಿಪಟೂರಿನಲ್ಲಿ ಹಲವಾರು ತಿಂಗಳು ಪ್ರದರ್ಶನ ನೀಡುತ್ತಿದ್ದವು. ಆಗ ಹಳ್ಳಿಯ ಜನ ಎತ್ತಿನಗಾಡಿಗಳಲ್ಲಿ ನಾಟಕ ನೋಡಲು ಬರುತ್ತಿದ್ದುದನ್ನು ಸ್ಮರಿಸಿಕೊಂಡರು. ಈಗಲೂ ಅದೇ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ಪ್ರೇಕ್ಷಕರಿಗೆ ದೊರೆತರೆ ನಾಟಕೋತ್ಸವ ನಡೆಸುತ್ತಿರುವ ಸಂಸ್ಥೆಯ ಶ್ರಮ ಸಾರ್ಥಕ ಎಂದರು
ನರಸಿಂಹರಾಜು ರಂಗಮಂದಿರದ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಂದಿನ ಆಯ-ವ್ಯಯದಲ್ಲಿ 2ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕೆಂದು ಸಚಿವರನ್ನು ಕೋರಿದ ಶಾಸಕರು ಮುಂದಿನ ದಿನಗಳಲ್ಲಿ ತಿಪಟೂರಿನ ಕಲಾವಿದರಾದ ಸಚಿವೆ ಉಮಾಶ್ರಿ ಅವರನ್ನು ಕರೆಸಿ ತವರಿನ ಸನ್ಮಾನ ಮಾಡುವುದಾಗಿ ಘೋಷಿಸಿದರು.
ನಂತರ ಮಂಜುನಾಥ್ ಎಲ್.ಬಡಿಗೇರ ನಿರ್ದೇಶದನ ಸೀತಾ ಸ್ವಯಂವರಂ ನಾಟಕ ಪ್ರದರ್ಶನಗೊಂಡಿತು. ತಹಸೀಲ್ದಾರ್ ಬಿ.ಆರ್. ಮಂಜುನಾಥ್, ಪೌರಾಯುಕ್ತ ನರಸಿಂಹಮೂರ್ತಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

