ತುಮಕೂರು

ಕಡಬ ಕೆರೆಗೆ ಹೇಮಾವತಿ ನೀರು ಹರಿಸಿ

Published On :

ಗುಬ್ಬಿ: ತಾಲೂಕಿನ ಅತಿ ದೊಡ್ಡ ಕಡಬ ಕೆರೆಗೆ ಹೇಮಾವತಿ ನೀರು ಹರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಹೇಮಾವತಿ ನಾಲಾ ಅಧಿಕಾರಿಗಳು ಸಂಬಂಧಿಸದ ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿಸುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ಕಡಬ ಕೆರೆಗೆ ನೀರು ಹರಿಸದಿದ್ದರೆ ಈ ಭಾಗದ ರೈತರು ಎಲ್ಲ ರೀತಿಯ ಹೋರಾಟಕ್ಕೂ ಮುಂದಾಗಲಿದ್ದಾರೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ಕಡಬ ಕೆರೆಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಕಡಬ ಅಮಾನಿಕೆರೆ ಮತ್ತು ಕಡಬ ಗದ್ದೆ ಕಾವಲ್ ಅಚ್ಚುಕಟ್ಟುದಾರರ ವೇದಿಕೆ ವತಿಯಿಂದ ತಾಲೂಕಿನ ನಿಟ್ಟೂರು ಹೇಮಾವತಿ ಎಸ್ಕೇಪ್ ಗೇಟ್ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಯಚಂದ್ರ ಅವರು ಶಿರಾ, ಮದಲೂರು, ಕಳ್ಳಂಬೆಳ್ಳ ಹಾಗೂ ಅವರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಮಾತ್ರ ನೀರನ್ನು ಹರಿಸಲು ಮುಂದಾಗಿದ್ದಾರೆ. ಸಚಿವರು ಜಿಲ್ಲೆಯ ಕುಣಿಗಲ್, ಗುಬ್ಬಿ, ತುಮಕೂರು ಗ್ರಾಮಾಂತರ ಇನ್ನುಳಿದ ತಾಲೂಕುಗಳಿಗೆ ನೀರನ್ನು ಹರಿಸದೆ ಪಕ್ಷಪಾತ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ನಿಯಮಾನುಸಾರ ನೀರು ಹರಿಸಬೇಕಾದ ಕೆರೆಗಳಿಗೆ ನೀರು ಹರಿಸದೆ ಮನಬಂದಂತೆ ಸಂಬಂಧಿಸದ ಕೆರೆಗಳಿಗೆ ನೀರು ಹರಿಸಿದ್ದು ಈವರೆಗೂ ಕಡಬ, ಸಿ.ಎಸ್.ಪುರ, ಗುಬ್ಬಿ ಕೆರೆಗಳಿಗೆ ನೀರು ಹರಿಸದೆ ರೈತರಿಗೆ ಅನ್ಯಾಯವೆಸಗಿದ್ದಾರೆ. ಕೂಡಲೇ ಕಡಬ ಕೆರೆಗೆ ಹೇಮಾವತಿ ನೀರು ಹರಿಸದಿದ್ದರೆ ಈ ಭಾಗದ ರೈತರು ಉಗ್ರ ಹೋರಾಟಕ್ಕೆ ಮುಂದಾಗಲಿದ್ದಾರೆಂದರು.
ತಾಲೂಕಿನ ಪ್ರಮುಖ ಕೆರೆಗಳಾದ ಗುಬ್ಬಿ, ಕಡಬ ಸೇರಿದಂತೆ ಹಲವಾರು ಕೆರೆಗಳು ತುಂಬಿಲ್ಲದ ಕಾರಣ ಕಳೆದ ಒಂದು ವಾರದ ಹಿಂದೆ ಕಡಬ ಮತ್ತು ಅದರ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟೂರಿನ ಎಸ್ಕೇಪ್ ಗೇಟ್ ಬಳಿ ಧರಣಿ ಕುಳಿತಾಗ ಸ್ಥಳೀಯ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ನೀರನ್ನು ಬಿಡುವ ಭರವಸೆ ನೀಡಿದ್ದರು. ಆದರೂ ಇದುವರೆಗೂ ಸಂಬಂಧಿಸಿದ ಹೇಮಾವತಿ ಅಧಿಕಾರಿಗಳು ನೀರನ್ನು ಬಿಡದಿದ್ದಕ್ಕೆ ಆಕ್ರೋಶಗೊಂಡ ರೈತ ಮುಖಂಡರು ಬುಧವಾರ ಬೆಳಗ್ಗೆ ಕಡಬ ಬಂದ್ ಮಾಡಿ ಕೆಲ ಕಾಲ ರಸ್ತೆ ತಡೆ ನಡೆಸಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾದರು.
ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ರೈತರೊಂದಿಗೆ ಮಾತನಾಡಿ ನಾಳೆಯಿಂದ ಅಧಿವೇಶನವಿರುವುದರಿಂದ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ನೀರನ್ನು ಬಿಡುವಂತೆ ಒತ್ತಾಯಿಸುತ್ತೇವೆ. ಸಾಧ್ಯವಾಗದೇ ಹೋದಲ್ಲಿ ನಿಮ್ಮೊಂದಿಗೆ ಪ್ರತಿಭಟನೆಗೆ ಇಳಿಯುತ್ತೇನೆ ಎಂದರು.
ತಾ. ಬಿಜೆಪಿ ಅಧ್ಯಕ್ಷ ಭೈರಪ್ಪ, ರೈತ ಮುಂಖಂಡರಾದ ದೊಡ್ಡೇಗೌಡ, ಬಿ.ಬಾಲಾಜಿ, ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ, ಮುಖಂಡರಾದ ಬಿ.ವಿ.ರತ್ನಕುಮಾರ್, ಬಿಜೆಪಿ ಮುಖಂಡರಾದ ಸಿದ್ದರಾಮಣ್ಣ, ಲೋಕೇಶ್, ಪಂಚಾಕ್ಷರಿ, ಹರಪ್ರಸಾದ್, ಪಾರ್ಥಸಾರಥಿ, ಉಮಾಶಂಕರ್, ಎನ್.ಜಿ.ಕೃಷ್ಣಮೂರ್ತಿ, ವೆಂಕಟೇಶ್, ಕುಮಾರ್ ಇತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.