ಮಹಿಳಾ ಪರ ಯೋಜನೆಗಳೆಲ್ಲಾ ನಮ್ಮದೇ
ತುಮಕೂರು: ಈಗಾಗಲೇ ಜಾರಿಯಾಗಿರುವ ಬಹುತೇಕ ಮಹಿಳಾಪರ ಯೋಜನೆಗಳು ಜನತಾ ಪರಿವಾರದ್ದೇ ವಿನಾ ಕಾಂಗ್ರೆಸ್, ಬಿಜೆಪಿಯದ್ದಲ್ಲ ಎಂಬುದನ್ನು ಇತಿಹಾಸವೇ ಹೇಳುತ್ತದೆ. ಬೇಕಾಬಿಟ್ಟಿ ಹೇಳಿಕೆ ನೀಡುವವರು ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ಹಾಕಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸವಾಲು ಹಾಕಿದರು.
ಅವರು ತುಮಕೂರಿನ ಸಪಪೂ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ರಾಜ್ಯ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಸ್ತ್ರೀಶಕ್ತಿ ದೇಶದ ಶಕ್ತಿ, ಜಾತ್ಯತೀತ ಜನತಾದಳದ ಅಭಿವ್ಯಕ್ತಿ. ಜಾತ್ಯತೀತ ಜನತಾದಳದ ನಡೆ ಮಹಿಳಾ ಸಬಲೀಕರಣದತ್ತ ಎಂಬ ಧ್ಯೇಯವಾಕ್ಯವನ್ನು ಹೊತ್ತ ವೇದಿಕೆಯಲ್ಲಿ ಮಾಜಿ ಪ್ರಧಾನಿ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.
1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ, ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದ ವೇಳೆ ಮಂಡಲ್ ಪಂಚಾಯತ್, ಜಿಲ್ಲಾ ಪರಿಷತ್, ವಿಧಾನಸಭೆಗೆ ಮಹಿಳೆಯರಿಗೆ ಶೇ.10ರಷಷ್ಟು ಮೀಸಲು ನೀಡಿದ ಕೀರ್ತಿ ನಮ್ಮದು. ಅಂದು ನಾನೂ ಕೂಡ ಸಚಿವನಾಗಿದ್ದೆ. ತಾಳಿ ಭಾಗ್ಯ ಯೋಜನೆ ಜಾರಿ, ಹೆರಿಗೆ ಭತ್ಯೆ, ರಜೆ ನೀಡಿದ ಕೀರ್ತಿಯೂ ಜನತಾ ಪರಿವಾರದ್ದೇ. ಈ ಯೋಜನೆಗಳೆಲ್ಲವನ್ನೂ ಜಾರಿ ಮಾಡುವಾಗ ಎಲ್ಲ ವರ್ಗದ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯದ ಹಿತದೃಷ್ಟಿಯಿಂದ ಜಾತಿ, ಧರ್ಮ ಮೀರಿ ಜಾರಿ ಮಾಡಲಾಯಿತೇ ವಿನಾ ಕೇವಲ ಅಹಿಂದ ವರ್ಗವನ್ನಷ್ಟೇ ಗುರಿಯಾಗಿಸಿಕೊಂಡು ಮಾಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ಹೆಸರೆತ್ತದೆ ವಾಗ್ದಾಳಿ ನಡೆಸಿದರು.
ಜೆಡಿಎಸ್ ಯಾವುದೇ ಜಾತಿ ಸಮಾವೇಶವನ್ನಾಗಲೀ, ಅಹಿಂದ ಸಮಾವೇಶವನ್ನಾಗಲೀ ಮಾಡಲು ಹೊರಟಿಲ್ಲ. ಎಲ್ಲ ಜಾತಿ, ವರ್ಗದ ಹೆಣ್ಣು ಮಕ್ಕಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ರಾಜಕೀಯ ಮೀಸಲಾತಿಗಾಗಿ, ಹಾಗೂ ಮಹಿಳಾ ಮೀಸಲಿನ ಪರವಾಗಿ ಜನತಾದಳ ಮಾಡಿದ ಹೋರಾಟವನ್ನು ಇಂದಿನ ಪೀಳಿಗೆ ಮುಂದಿಡಲು ಈ ರಾಜ್ಯಮಟ್ಟದ, ಸರ್ವಜನಾಂಗದ ಮಹಿಳಾ ಜಾಗೃತಿ ಸಮಾವೇಶ ನಡೆಸುತ್ತಿದೆ ಹೊರತು ಸಮಾಜವನ್ನು ವಿಭಜಿಸುವ ದೃಷ್ಟಿಯಿಂದ ಅಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಡಬೇಕು ಎಂದರು. 1995ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ನಗರ ಹಾಗೂ ಗ್ರಾಮದ ಸ್ಥಳೀಯ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ಶೇ.33ರಷ್ಟು ಮಹಿಳಾ ಮೀಸಲು ಕಲ್ಪಿಸಲಾಯಿತು. ಸಂಸತ್ ಮತ್ತು ರಾಜ್ಯ ಶಾಸನಸಭೆಗಳಲ್ಲೂ ಮಹಿಳಾ ಮೀಸಲು ಕಲ್ಪಿಸಲು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಹೊರಟೆ. ಬಹುಶಃ ರಾಹುಲ್ಗಾಂಧಿ ಅವರಿಗೆ ಇದೆಲ್ಲ ಗೊತ್ತೋ, ಇಲ್ಲವೋ ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಉತ್ಸಾಹದಿಂದ ಬೆಂಗಳೂರಿಗೆ ಬಂದು 10-15 ಮಹಿಳೆಯರನ್ನು ಕೂರಿಸಿಕೊಂಡು ಮಹಿಳಾ ಮೀಸಲಾತಿ ಕುರಿತು ಮಾತನಾಡಿ ಹೋಗಿದ್ದಾರೆ. ಹೆಣ್ಣು ಮಕ್ಕಳಿಗೆ ರಿಸರ್ವೇಶನ್ ನೀಡುವುದಾಗಿ ಹೇಳಿ ಹೋಗಿದ್ದಾರೆ. ಆದರೆ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್ ಅಲ್ಲ, ಜೆಡಿಎಸ್ ಎಂಬುದನ್ನು ನೆನಪಿನಲ್ಲಿಡಬೇಕು. 96ರಲ್ಲಿ ತಾವು ಪ್ರಧಾನಿಯಾಗಿದ್ದ ವೇಳೆ ಮಹಿಳಾ ಮೀಸಲಾತಿಗಾಗಿ ತಿದ್ದುಪಡಿ ತರಲು ಹೊರಟಾಗ ಬೆಂಬಲಿಸದ ಕಾಂಗ್ರೆಸ್ಸಿಗರು, ಪೆಟ್ಟು ತಿಂದ ಮೇಲೆ ಈಗ ಓಟಿಗಾಗಿ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನರೇಗಾ, ವರೇಗಾ, ಮರೇಗಾ: ರಾಜ್ಯದಲ್ಲಿ 3200 ಮಹಿಳಾ ಸಹಕಾರ ಸಂಘಗಳಿವೆ. 6 ಲಕ್ಷದ 28 ಸಾವಿರ ಮಂದಿ ಸದಸ್ಯೆಯರಿದ್ದಾರೆ. ದಿನವೊಂದಕ್ಕೆ 1.28 ಕೋಟಿ ಖಾತೆಗೆ ಹಣ ಜಮೆಯಾಗುತ್ತಿದೆ. ಆಸ್ತಿಗೆ ಸಂಬಂಧಿಸಿದಂತೆ ಜಂಟಿ ಖಾತೆ ಮಾಡಿಸಿದ್ದು 1998ರಲ್ಲಿ ಜನತಾದಳ ಸರ್ಕಾರ ಅಸ್ತಿತ್ವದಲ್ಲಿದ್ದ ವೇಳೆಯಲ್ಲೇ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿ ಹಾಗೂ ಜನತಾದಳ ಅಧಿಕಾರದಲ್ಲಿದ್ದ ವೇಳೆಯಲ್ಲಾದ ಕೆಲಸಗಳಿವು. ಆದರೆ ಇಂದು ನರೇಗಾ, ವರೇಗಾ, ಮರೇಗಾ ಎಂದು ಮಹಾತ್ಮಗಾಂಧಿ ಅವರ ಹೆಸರಲ್ಲಿ ಲೂಟಿ ಹೊಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಶೀಲಾ ನಾಯಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

