ಬರದ ದವಡೆಗೆ ಚಿ.ನಾ.ಹಳ್ಳಿ ತಾಲೂಕು
ಅಣೇಕಟ್ಟೆ ಸಿದ್ದರಾಮಣ್ಣ
ಚಿಕ್ಕನಾಯಕನಹಳ್ಳಿ: ತಾಲೂಕಿನ ತೆಂಗು-ಅಡಕೆ ಬೆಳೆಯುವವರ ಮೊಗದಲ್ಲಿ ಆತಂಕದ ಛಾಯೆ ಮೂಡುತ್ತಿದೆ.
ಕಲ್ಪತರು ನಾಡೆಂಬ ಖ್ಯಾತಿ ಪಡೆದಿರುವ ಚಿ.ನಾ.ಹಳ್ಳಿ ತಾಲೂಕು ಸತತ ಬರಗಾಲಕ್ಕೆ ಸಿಲುಕಿ ಸಂಕಷ್ದದ ಸ್ಥಿತಿಗೆ ಬಂದು ನಿಂತಿದೆ.
ಹಲವು ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡು ಬಂದಿದ್ದ ತೆಂಗು-ಅಡಕೆ ಬೆಳೆಗಳು ಕಣ್ಣೆದುರಿಗೆ ನೀರಿನ ಕೊರತೆಯಿಂದ ಒಣಗಿ ಹೋಗುತ್ತಿರುವುದನ್ನು ಅಸಹಾಯಕ ಸ್ಥಿತಿಯಿಂದ ನೋಡಬೇಕಾದ ಪರಿಸ್ಥಿತಿ ತೆಂಗು ಬೆಳೆಗಾರನದ್ದಾಗಿದೆ. ಮೂರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಬರದ ಸಿಡಿಲು ರೈತನ ಮೇಲೆರಗಿದೆ. ಕಳೆದ ವರ್ಷ ಮಳೆಕೊರತೆಯಿಂದ ಅರ್ಧಂಬರ್ಧ ಕೈಗೆಟಕಿದ ಬೆಳೆಯಿಂದ ರೈತ ಉಸಿರು ಉಳಿಸಿಕೊಂಡರೂ ಈ ಬಾರಿ ಮರಗಳನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ದೃಶ್ಯವನ್ನು ನೋಡಿದರೆ ಎಂತಹ ಕಲ್ಲೆದೆಯು ಕರಗದಿರದು. ಕೆಲ ರೈತರು ಈ ಪರಿಸ್ಥಿಯನ್ನು ಎದುರಿಸುವ ಶಕ್ತಿಹೊಂದಿದ್ದರೂ, ಸಣ್ಣಪುಟ್ಟ ರೈತರು ಗುಳೆ ಹೋಗುವುದನ್ನು ಬಿಟ್ಟರೆ, ದಿಕ್ಕೇ ತೋಚದ ಸ್ಥಿತಿ ನಿರ್ಮಾಣವಾಗಿದೆ. ತಲೆ ತಲೆಮಾರಿನಿಂದ ವಂಶಪಾರಂಪರ್ಯವಾಗಿ ಬಂದಿದ್ದ ತೋಟಗಳನ್ನು ಉಳಿಸಿಕೊಳ್ಳಲು ರೈತ ಹರಸಾಹಸ ಮಾಡುತ್ತಿದ್ದಾನೆ.
ಆಕ್ರೋಶ: ಜನಪ್ರತಿನಿಧಿಗಳು ರೈತರಿಗೆ ನೆರವಾಗುವಂತಹ ನೀರಾವರಿ, ಕೈಗಾರಿಕೆ ಮುಂತಾದ ಯೋಜನೆಗಳ ಜಾರಿಗೆ ಶ್ರಮಿಸಿಲ್ಲ, ಬರೀ ಆಶ್ವಾಸನೆ ನೀಡಿದ್ದು ಬಿಟ್ಟರೆ, ಈ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿಲ್ಲ ಎಂಬುದು ರೈತರ ಆಕ್ರೋಶ. ನೀರಾವರಿಯಂತಹ ಯೋಜನೆಗಳ ವಿಚಾರದಲ್ಲಿ ಮುಂದಾಗಿಲ್ಲ. ಕೇವಲ ಘೋಷಣೆ, ಭಾಷಣಗಳಿಗಷ್ಟೇ ಜನಪ್ರತಿನಿಧಿಗಳ ಮಾತು ಸೀಮಿತಿ ಎಂಬುದು ಆರೋಪ.
ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯೂ ಪ್ರಕೃತಿ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು ಬರಗಾಲಕ್ಕೆ ಇದರ ಕಾಣಿಕೆಯೂ ಸಾಕಷ್ಟಿದೆ ಎಂದು ಆರೋಪಿಸಲಾಗುತ್ತಿದೆ. ಇದರಿಂದಾಗಿ ಮಳೆ ಪ್ರಮಾಣ ಕಡಿಮೆಯಾಗಿದೆ ಎಂಬುದು ಹಿರಿಯರ ಅಂಬೋಣ.
ಕೊಳವೆ ಬಾವಿ: ಈಗಾಗಲೇ ಪ್ರಾರಂಭವಾಗಿರುವ ಬೇಸಿಗೆಯ ಬಿಸಿಲಿನ ಪರಿಣಾಮ ರೈತ ಬತ್ತಿರುವ ಕೊಳವೆ ಬಾವಿಗಳಿಗೆ ಬದಲಾಗಿ ಹೊಸ ಕೊಳವೆ ಬಾವಿ ಕೊರೆಸಲು ಪ್ರಯತ್ನ ನಡೆಸುತ್ತಿದ್ದಾನೆ. ಪ್ರತಿದಿನ ಹತ್ತಾರು ಕೊಳವೆ ಬಾವಿ ಕೊರೆಯಲು ಲಕ್ಷಾಂತರ ರು.ಗಳ ವೆಚ್ಚ ತಗಲುತ್ತಿದೆ. ಖಾಸಗಿ ಬೋರ್ವೆಲ್ ಲಾರಿ ಮಾಲೀಕರು ಒಂದಕ್ಕೆ ಎರಡರಷ್ಟು ದರ ನಿಗದಿ ಮಾಡಿ ರೈತರನ್ನು ಹಿಂಡುತ್ತಿದ್ದಾರೆ. ಮೊದಮೊದಲು 300ರಿಂದ 400 ಅಡಿ ಆಳದಲ್ಲ್ಲಿ ಸಿಗುತ್ತಿದ್ದ ನೀರಿನ ಮೂಲ ಈಗ ಸಾವಿರ ಅಡಿಯವರೆಗೂ ಇಳಿದಿದೆ. ನೀರನ್ನು ಮೆಲೆತ್ತಲು ಕೃಷಿಕ ಭಗೀರಥ ಪ್ರಯತ್ನ ಮಾಡಬೇಕಾಗಿದೆ.
ಬಿಜೆಪಿ ಸರ್ಕಾರದಲ್ಲಿ ಮಂಜೂರಾದ 102 ಕೋಟಿ ರು.ಗಳ ಹೇಮಾವತಿ ನಾಲೆಯಿಂದ ತಾಲೂಕಿನ 26 ಕೆರೆಗಳಿಗೆ ಕುಡಿಯುವ ನೀರಿನ ಯೋಜನೆ ಜನರ ಪಾಲಿಗೆ ಆಶಾಕಿರಣವಾಗಿದ್ದು, ಕಾಮಗಾರಿ ಪ್ರಾರಂಭವಾಗಿದೆ. ಶಾಸಕರು ಈ ಕುರಿತು ಹೆಚ್ಚಿನ ಆಸಕ್ತಿ ತೋರುವುದು ಅಗತ್ಯ. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಬಿಟ್ಟು ಎಲ್ಲರು ಅಭಿವೃದ್ಧಿಯ ಪರವಾಗಿ ಕೈಜೋಡಿಸಿದರೆ ಕನಿಷ್ಠ ಮೂರ್ನಾಲ್ಕು ವರ್ಷಗಳಲ್ಲಿ ಯೋಜನೆಯ ಕಾಮಗಾರಿ ಮುಗಿದು ತಾಲೂಕಿನ ರೈತ ನೆಮ್ಮದಿಯ ನಿಟ್ಟುಸಿರು ಬಿಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

