ಆರೋಪಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ
ಮಧುಗಿರಿ: ಮಧುಗಿರಿಯಲ್ಲಿ ಈಚೆಗೆ ದಂಪತಿಗಳಿಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತ ಆರೋಪಿಯೊಬ್ಬನನ್ನು ತುಮಕೂರು ಗ್ರಾಮಾಂತರ ವಕ್ಕೋಡಿ ಗ್ರಾಮದಲ್ಲಿ ಬಂಧಿಸಲು ತೆರಳಿದ್ದ ಪಿಎಸೈ ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೇ ನಡೆಸಿರುವ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಅಡಿಷನಲ್ ಎಸ್ಪಿ ಆರ್. ಲಕ್ಷ್ಮಣ್ ತಿಳಿಸಿದರು.
ಬುಧವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದ ಅವರು,ಜ.24 ರ ರಾತ್ರಿ ಮಧುಗಿರಿ ಪಟ್ಟಣದ ಅಂಗಡಿ ಮಾಲೀಕ ನಾಗರಾಜ ಪತ್ನಿ ಮಾಧವಿ ದಂಪತಿಗಳಿಬ್ಬರ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೇ ನಡೆಸಿ 40 ಸಾವಿರ ರು.ಹಣದ ಚೀಲ ದೋಚಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪತ್ತೆಗಾಗಿ ತುಮಕೂರು ಗ್ರಾಮಾಂತರ ವಕ್ಕೋಡಿ ಗ್ರಾಮಕ್ಕೆ ಮಂಗಳವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಮಧುಗಿರಿ ಪಿಎಸೈ ಅಂಬರೀಶ್ ನೇತೃತ್ವದ ಪೊಲೀಸ್ ತಂಡ ತೆರಳಿ ಅಲ್ಲಿನ ಶಂಕಿತ ಆರೋಪಿ ಹರೀಶ್ ಎಂಬಾತನ ಮನೆ ಬಾಗಿಲು ತಟ್ಟಿ ತೆರೆಯಲು ಸೂಚಿಸಿದ್ದಾರೆ. ಮಪ್ತಿಯಲ್ಲಿದ್ದ ಪೊಲೀಸರನ್ನು ಕಿಟಕಿಯಲ್ಲಿ ಕಂಡ ಹರೀಶ, ತಂದೆ, ತಾಯಿ ಒಳಗೆ ಕೂಗಾಡಿ ಮೊಬೈಲ್ ಮೂಲಕ ಸಂಬಂಧಿಕರಿಗೆ ಮತ್ತು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿ ಮನೆ ಹೊರಗೆ 40ಕ್ಕೂ ಅಧಿಕ ಜನರು ಸೇರುವಂತೆ ಪ್ರಚೋದಿಸಿದ್ದಾರೆ. ಆಗ ಹರೀಶನ ಮನೆ ಮುಂದೆ ಜಮಾಯಿಸಿದ ಉದ್ರಿಕ್ತ ಜನರ ಗುಂಪು ಪೊಲೀಸರ ಮೇಲೆ ಏಕಾಏಕಿ ಕಲ್ಲು, ಇಟ್ಟಿಗೆ, ದೊಣ್ಣೆಗಳಿಂದ ತೂರಿ ಥಳಿಸಿದ್ದಾರೆ. ಅಲ್ಲದೆ ಮಾಹಿತಿದಾರನನ್ನು ಒಂದು ಹಂತದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾದಾಗ ಬೆಳ್ಳಾವಿ ಠಾಣೆ ಪೊಲೀಸ್ ಜೀಪ್ ಬರುವ ಸೈರನ್ ಕೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ವಾಹನ ಜಖಂ: ಈ ಘಟನೆಯಲ್ಲಿ ಮಧುಗಿರಿ ಪಿಎಸೈ ಅಂಬರೀಶ್, ಎಎಸ್ಐ ನರಸಿಂಹಯ್ಯ, ಪೇದೆಗಳಾದ ಮಲ್ಲಿಕಾರ್ಜುನ, ಶ್ರೀನಿವಾಸ, ಧರ್ಮಪಾಲ್ ನಾಯ್ಕ್ ಒಳಗೊಂಡಿದ್ದು 2 ವಾಹನಗಳು ಜಮಖಂಗೊಂಡಿವೆ ಎಂದು ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ಳಾವಿ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ, ಕೊಲೆಯತ್ನ, ಮಾರಣಾಂತಿಕ ಹಲ್ಲೆ, ದೊಂಬಿ ಪ್ರಕರಣ ದಾಖಲಾಗಿದ್ದು ವೆಂಕಟಪ್ಪ, ಬಾಬು, ನಾಗಾರಾಜು ಆನಂದ, ಗೋವಿಂದರಾಜು ಎಂಬ 5 ಜನರನ್ನು ಬಂಧಿಸಲಾಗಿದೆ ಎಂದರು. ಮಧುಗಿರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಹರೀಶ ಮತ್ತು 6 ಜನರನ್ನು ಹಾಗೂ ವಕ್ಕೋಡಿ ಗ್ರಾಮದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಉಳಿದವರನ್ನು ಬಂಧಿಸಲು ತಂಡ ರಚಿಸಲಾಗಿದೆ ಎಂದರು.
ಗಾಯಾಳು ಪೊಲೀಸರಿಗೆ ಇಲಾಖೆ ವತಿಯಿಂದ ಚಿಕಿತ್ಸೆಗಾಗಿ 10 ಸಾವಿರ ರು.ನೀಡಲಾಗಿದೆ ಎಂದ ಲಕ್ಷ್ಮಣ್ ಈ ಘಟನೆಯಿಂದ ನಾವು ವಿಚಲಿತರಾಗಿಲ್ಲ. ಎಲ್ಲ ಆರೋಪಿಗಳನ್ನು ಅತಿ ಶೀಘ್ರದಲ್ಲೇ ಬಂದಿಸಲಾಗುವುದು ಎಂದರು.
ಎಚ್ಚರಿಕೆ: ಮಟ್ಕಾ, ಜೂಜು ಮೊದಲಾದ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗುವವರು ಯಾರೇ ಆಗಿರಲಿ ಈ ದಂಧೆ ಬಿಟ್ಟು ಒಳ್ಳೆಯ ಜೀವನ ನಡೆಸಲಿ ಇಲ್ಲವಾದಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿ ಪಾರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಲಕ್ಷ್ಮಣ್ ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಡಿವೈಎಸ್ಪಿ ಗುರುಸ್ವಾಮಿ, ತುಮಕೂರು ಗ್ರಾಮಾಂತರ ಡಿವೈಎಸ್ಪಿ ರಾಮನಾಯ್ಕ, ಸಿಪಿಐ ಶಿವಮೂರ್ತಿ, ಪಿಎಸೈ ಅಂಬರೀಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

