ದಲಿತರ ಶೋಷಣೆ ತಡೆಗೆ ಶಿಕ್ಷಣ ಅಗತ್ಯ
ಕ.ಪ್ರ. ವಾರ್ತೆ ತುಮಕೂರು ಜ. 30
ದಲಿತರು ಇಂದು ಅನುಭವಿಸುತ್ತಿರುವ ಎಲ್ಲಾ ನೋವು, ಶೋಷಣೆಗಳಿಗೆ ಶಿಕ್ಷಣಮೊಂದೇ ಮುಕ್ತಿ ಮಾರ್ಗವಾಗಿದ್ದು,ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಚಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರಜಾವಿಮೋಚನಾ ಚಳವಳಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದಲಿತರ ಹಕ್ಕನ್ನು ಪ್ರತಿಪಾದಿಸುವ ಸಂವಿಧಾನ ಜಾರಿಯಾಗಿ 65 ವರ್ಷ ಕಳೆದರೂ ಇಂದಿಗೂ ದಲಿತರು ತಮ್ಮ ಹಕ್ಕುಗಳಿಗಾಗಿ ಘೋಷಣೆ ಕೂಗುತ್ತಾ ಪ್ರತಿಭಟನೆ, ಧರಣಿ ನಡೆಸುತ್ತಿರುವುದು ದುರಂತವೇ ಸರಿ. ದಲಿತರ ಸಂವಿಧಾನ ಬದ್ಧ ಪಾಲನ್ನು ನೀಡಲು ಇದುವರೆಗೂ ಆಡಳಿತ ನಡೆಸಿದವರಿಗೆ ಸಾಧ್ಯವಾಗದಿರುವುದು ಕೂಡ ನಾಚಿಕೆಗೇಡಿನ ವಿಚಾರವಾಗಿದೆ ಎಂದರು.
ದಲಿತರಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ದೊರೆತರೆ ಅವರು ಅದನ್ನು ಬಳಸಿಕೊಂಡು ಉನ್ನತ ಹುದ್ದೆಗಳಿಗೆ ಏರಿದರೆ ಸಾಮಾಜಿಕ ಸ್ಥಾನ ಮಾನ ಮತ್ತು ಆರ್ಥಿಕ ಸಬಲತೆ ತಾನಾಗಿಯೇ ಬರುತ್ತದೆ. ಹಾಗಾಗಿ ಹೋರಾಟಗಾರರು ಮೊದಲು ತಮ್ಮ ಸುತ್ತಮುತ್ತಲಿನ ದಲಿತ ಕುಟುಂಬಗಳು ವಿದ್ಯಾವಂತರಾಗುವಂತೆ ನೋಡಿಕೊಳ್ಳಬೇಕಾಗಿದೆ. ಕೋಟಿ ರು. ಸಾಲ ಸೌಲಭ್ಯ ನೀಡಿ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಿದಿದ್ದರೆ ಅಂತಹ ಸಾಲ ಸೌಲಭ್ಯದಿಂದ ಏನು ಪ್ರಯೋಜನ ಎಂದು ಮುದ್ದಹನುಮೇಗೌಡ ಪ್ರಶ್ನಿಸಿದರು.
ಕಡೆಗಣನೆ: ಇಂದು ದಲಿತರಿಗೆ ಸಿಕ್ಕಿರುವ ಮೀಸಲಾತಿಯ ಫಲವನ್ನು ಕೆಲವೇ ಮಂದಿ ಪಡೆಯುತ್ತಿದ್ದಾರೆ ಎಂಬ ಕೂಗು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಅದರಲ್ಲಿಯೂ ಮೀಸಲಾತಿಯಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ಈ ವರ್ಗವನ್ನು ಕಡೆಗಣಿಸುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ದಲಿತರು ಮತ ಹಾಕುವ ಮುನ್ನ ಮತ್ತು ನಂತರ ತಮ್ಮ ಜನಪ್ರತಿನಿಧಿಯ ಮೌಲ್ಯಮಾಪನ ಮಾಡಬೇಕು. ತಮ್ಮ ಆಶಯಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು. ಎಂದಿಗೂ ದಲಿತರ ಹೆಸರಿನಲ್ಲಿ ಸ್ವಹಿತಾಸಕ್ತಿಗೆ ಅವಕಾಶ ನೀಡಬಾರದು. ಅಲ್ಲದೆ ಅವರ ಜವಾಬ್ದಾರಿಯನ್ನು ಪ್ರಶ್ನಿಸುವ ಮನೋಭಾವನೆಯನ್ನು ದಲಿತರು ಬೆಳೆಸಿಕೊಳ್ಳಬೇಕಿದೆ ಎಂದು ಮುದ್ದಹನುಮೇಗೌಡ ನುಡಿದರು.
ವಿಶಾಲ ಅರ್ಥ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ದಲಿತರು ಎಂಬುದು ಇಂದು ವಿಶಾಲ ಅರ್ಥದಿಂದ ಕೂಡಿದೆ. ಎಲ್ಲಾ ಜಾತಿಯ ಬಡವರು, ಶೋಷಿತರು ದಲಿತರು ಎಂಬ ಛತ್ರಿಯಡಿ ಬರುವುದರಿಂದ ನಿಜವಾದ ಅಸ್ಪೃಶ್ಯರು ಶೋಷಣೆಗೆ ಒಳಗಾಗುತಿದ್ದಾರೆ. ನಿಜವಾದ ದಲಿತರೆಂದರೆ ಹೊಲೆಮಾದಿಗರು ಮಾತ್ರ ಎಂದರು.
ಅಧ್ಯಕ್ಷತೆಯನ್ನು ಪ್ರಜಾವಿಮೋಚನಾ ಚಳುವಳಿಯ ಮುನಿರಾಜು ವಹಿಸಿದ್ದರು. ಪ್ರಜಾವಿಮೋಚನಾ ಚಳವಳಿಯ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮಚಂದ್ರಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸತ್ಯವತಿ, ತುಮಕೂರು ಘಟಕದ ಮಹಿಳಾ ಅಧ್ಯಕ್ಷೆ ಪಾವರ್ತಮ್ಮ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ವಹಾಬ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಟೌನ್ಹಾಲ್ ವೃತ್ತದಿಂದ ವಿವಿಧ ಕಲಾತಂಡಗಳ ಕಲಾಪ್ರದರ್ಶನದ ಮೂಲಕ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
ರಾಜ್ಯದ ವಿವಿಧ ಮೂಲೆಗಳಿಂದ ನೂರಾರು ಜನ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

