ತುಮಕೂರು

ಸಂಚಾರಿ ಆರೋಗ್ಯ ಘಟಕಕ್ಕೆ ಅನಾರೋಗ್ಯ!

Published On :

 ನಾಗಭೂಷಣ್
ತುರುವೇಕೆರೆ: ಗುಡ್ಡಗಾಡು ಪ್ರದೇಶದ, ರಸ್ತೆ ಸಂಪರ್ಕವಿಲ್ಲದೆ ತುರ್ತು ಸಂದರ್ಭಗಳಲ್ಲಿ ಪರದಾಡುತ್ತಿದ್ದ ರೋಗಿಗಳ ಅನುಕೂಲಕ್ಕಾಗಿ ಮನೆ ಬಾಗಿಲಿಗೇ ಚಿಕಿತ್ಸೆ ನೀಡಲು ಆರಂಭಗೊಂಡಿದ್ದ ಸಂಚಾರಿ ಆರೋಗ್ಯ ಘಟಕ ಜುಲೈ ಒಂದರಿಂದ ಸ್ಥಬ್ದಗೊಂಡಿದೆ.
2008 ರಲ್ಲಿ ಜನರ ಅನುಕೂಲಕ್ಕಾಗಿ ಆರಂಭಗೊಂಡಿದ್ದ ಸಂಚಾರಿ ಆರೋಗ್ಯ ಘಟಕದಿಂದ ಹಳ್ಳಿಗಾಡಿನ ಜನರಿಗೆ ಬಹಳ ಉಪಯೋಗವಾಗಿತ್ತು. ವಿಶೇಷವಾಗಿ ರಸ್ತೆ ಸಂಪರ್ಕವಿಲ್ಲದ ಸ್ಥಳಗಳಿಗೆ ಸಂಚಾರಿ ಆರೋಗ್ಯ ಘಟಕ ಕಾಯಂ ಆಗಿ ವೈದ್ಯರ ತಂಡದೊಂದಿಗೆ ತೆರಳಿ ರೋಗಗಳಿಂದ ನರಳುತ್ತಿರುವ ಜನರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಇದರಿಂದ ಗುಡ್ಡಗಾಡು ಪ್ರದೇಶದ ಜನರಿಗೂ ಉತ್ತಮ ಆರೋಗ್ಯ ಸೌಲಭ್ಯ ದೊರೆತು ಹರ್ಷಗೊಂಡಿದ್ದರು. ಆದರೆ ಈ ಸೇವೆ ಸ್ಥಗಿತಗೊಂಡ ಕಾರಣ ಗುಡ್ಡಗಾಡು ಪ್ರದೇಶದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಸಂಚಾರಿ ಆಸ್ರತ್ರೆಯಲ್ಲಿ ವೈದ್ಯರು, ಫಾರ್ಮಾಸಿಸ್ಟ್, ಶುಶ್ರೂಷಕ, ಆರೋಗ್ಯ ಸಹಾಯಕ ಮತ್ತು ಚಾಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಗ್ರಾಮಕ್ಕೆ ನಿಗದಿತ ದಿನ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುವುದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಅದೇ ಸಂಚಾರಿ ವಾಹನದಲ್ಲೇ ಕರೆದೊಯ್ಯಲಾಗುತ್ತಿತ್ತು.
ಮಹಾತ್ಮಗಾಂಧಿ ರೂರಲ್ ಡೆವಲಪ್ಮೆಂಟ್ ಮತ್ತು ಯೂತ್ವೆಲ್ಫೇರ್ ಸೆಂಟರ್ ವತಿಯಿಂದ ಪ್ರಾರಂಭವಾಗಿರುವ ಈ ಯೋಜನೆಯ ಜವಾಬ್ದಾರಿಯನ್ನು ಜಿಲ್ಲೆಯಲ್ಲಿ ತುಮಕೂರಿನ ರೂರಲ್ ಡೆವಲಪ್ ಮೆಂಟ್ ಮತ್ತು ಯೂತ್ ವೆಲ್ಫೇರ್ ಸೆಂಟರ್ ಸ್ವಯಂ ಸೇವಾ ಸಂಸ್ಥೆ ವಹಿಸಿಕೊಂಡಿದೆ.
ಈ ಯೋಜನೆ ವಿಶೇಷವಾಗಿ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಮುಸ್ಲಿಂ ಜನಾಂಗವಿರುವ ಪ್ರದೇಶಗಳಲ್ಲಿ ತಮ್ಮ ಸೇವೆ ಮಾಡುತ್ತಿತ್ತು. ವಯೋವೃದ್ಧರು ಹಾಗೂ ಬಡ ಜನರಿಗೆ ಇದರ ಅನುಕೂಲವಿತ್ತು. ಈಗ ಈ ಸಂಚಾರಿ ಆಸ್ಪತ್ರೆಯನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ಅನನುಕೂಲವಾಗಿದೆ. ಅಲ್ಲದೇ ಸಂಚಾರಿ ಆರೋಗ್ಯ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಇತರೆ ಸಿಬ್ಬಂದಿಯವರಿಗೆ ಜೀವನೋಪಾಯಕ್ಕೆ ಧಕ್ಕೆ ತಂದಿದೆ. ಇವರ ದುಡಿಮೆಯನ್ನು ನೆಚ್ಚಿಕೊಂಡಿರುವ ಕುಟುಂಬ ಬೀದಿಗೆ ಬಿದ್ದಿದೆ. ತಾಲೂಕಿನ ಮುದ್ದನಹಳ್ಳಿ, ಹಬುಕನಹಳ್ಳಿ, ಪಿ. ಕಲ್ಲಳ್ಳಿ, ಎ. ಹೊಸಳ್ಳಿ, ಕೊಂಡಜ್ಜಿ, ದೊಡ್ಡಗೊರಾಘಟ್ಟ, ನಾಗಲಾಪುರ, ಬೆನಕನಕೆರೆ, ದೊಡ್ಡಮಲ್ಲಿಗೆರೆ, ಸೀಗೆಹಳ್ಳಿಗೆ ತೆರಳಿ ಅಲ್ಲಿನ ಜನರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವುದಲ್ಲದೇ ಅಗತ್ಯವಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿತ್ತು. ಪ್ರತಿ ದಿನ ಕನಿಷ್ಠವೆಂದರೂ ನೂರು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವಾಹನ ನಿಗದಿತ ದಿನಾಂಕ ಗ್ರಾಮಕ್ಕೆ ಬರಲಿದೆ ಎಂದು ತಿಳಿದಿದ್ದ ಆ ಗ್ರಾಮದ ಅಕ್ಕಪಕ್ಕದ ಜನರೂ ಬಂದು ಸಂಚಾರಿ ಆಸ್ಪತ್ರೆಯ ಪ್ರಯೋಜನ ಪಡೆಯುತ್ತಿದ್ದರು.
ಬಡ ಜನರ ಮನೆ ಬಾಗಿಲಿಗೇ ಆರೋಗ್ಯ ಸೇವೆ ಕಲ್ಪಿಸಿ ಜನರ ಜೀವನಾಡಿಯಾಗಿದ್ದ ಯೋಜನೆಯನ್ನು ಕೂಡಲೇ ಮುಂದುವರೆಸಬೇಕು ಎಂದು ಸಂಚಾರಿ ಆರೋಗ್ಯ ಘಟಕದ ವೈದ್ಯ ಡಾ. ನಂಜುಂಡಪ್ಪ, ಫಾರ್ಮಾಸಿಸ್ಟ್ ಅಜಯ್, ಆರೋಗ್ಯ ಸಹಾಯಕ ಸುದರ್ಶನ್, ಶುಶ್ರೂಷಕಿ ಲೀಲಾವತಿ, ಜಯಂತಿ, ಚಾಲಕ ಮಂಜುನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.