ತುಮಕೂರು

ಅವಸಾನದತ್ತ ತರಕಾರಿ ಮಾರುಕಟ್ಟೆ

Published On :

ಚಿಕ್ಕನಾಯಕನಹಳ್ಳಿ: ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಸ್ಥಳೀಯ ಆಡಳಿತದ ಕರ್ತವ್ಯ. ಆದರೆ ಇಲ್ಲಿನ ಪುರಸಭೆ ತನ್ನ ಕರ್ತವ್ಯವನ್ನು ಮರೆತ ಪರಿಣಾಮ ನಗರದ ನಾಗರಿಕರು ಉತ್ತಮ ಗುಣಮಟ್ಟದ ತರಕಾರಿ ಖರೀದಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.
ಸುಮಾರು 50 ವರ್ಷಗಳಿಂದ ಪಟ್ಟಣದ ಮಧ್ಯಭಾಗದಲ್ಲಿ ನಡೆಯುತ್ತಿರುವ ತರಕಾರಿ ಮಾರುಕಟ್ಟೆಗೆ ಸುತ್ತಮುತ್ತಲಿನ ರೈತರು ತಾವು ಬೆಳೆದ ತಾಜಾ  ತರಕಾರಿಗಳನ್ನು ತಂದು ಮಾರಾಟ ಮಾಡುವುದಕ್ಕೆ ಅನುಕೂಲವಾಗಲೆಂದು ಬೆಳಗಿನ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಲವಾರು ವರ್ಷಗಳಿಂದ ಇದು ನಿರಂತರವಾಗಿ ನಡೆದುಕೊಂಡು ಬಂದಿತ್ತು. ಹಿಂದೆ ಪುರಸಭೆ ಜನರ ತೆರಿಗೆಯಿಂದಲೇ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಪರಿಸ್ಥಿತಿಯಿತ್ತು. ಆದ್ದರಿಂದ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹಣಕಾಸಿನ ಕೊರತೆಯನ್ನು ಎದುರಿಸಬೇಕಿತ್ತು.ಅದರ ನಡುವೆಯು ಹಲವಾರು ಶಾಶ್ವತವಾದ ಮತ್ತು ಗುಣಮ್ಟಟದ ಕಾಮಗಾರಿಗಳನ್ನು ಮಾಡಲಾಗಿತ್ತು. ಆದರೆ ಇಂದು ಸರ್ಕಾರ ಕೋಟ್ಯಂತರ ರು.ಗಳ ಅನುದಾನ ನೀಡುತ್ತಿದ್ದರು ಅಭಿವೃದ್ಧಿ ಶೂನ್ಯವಾಗಿದೆ. ಅಂದಿನ ಪುರಪಿತೃಗಳ ದೂರದೃಷ್ಟಿಯಿಂದ ಪಟ್ಟಣದಲ್ಲಿ ಜನರ ಅನುಕೂಲಕ್ಕಾಗಿ ತರಕಾರಿ ಮಾರುಕಟ್ಟೆಯನ್ನು ಪ್ರಾರಂಭಿಸಿ ನಡೆಸಿಕೊಂಡು ಬಂದಿದ್ದರು. ಆದರೆ ಇಂದು  ಜನಪ್ರತಿನಿಧಿಗಳ ನಿರ್ಲಕ್ಷದಿಂದ ದಿನೇದಿನೇ ಅವನತಿಯತ್ತ ಸಾಗುತ್ತಿದೆ.ಮಳೆ ಬಿಸಿಲಿನಿಂದ ರಕ್ಷಣೆ ಪಡೆಯುವ ಯಾವುದೇ
ವ್ಯವಸ್ಥೆ, ಮೇಲ್ಚಾವಣಿಯಾಗಲಿ ಇಲ್ಲ. ಮಳೆಬಂದರಂತು ವ್ಯಾಪಾರಸ್ಥರು ಕೆಸರು ನೆಲದ ಮೇಲೆ  ಕುಳಿತು ತಮ್ಮ ವ್ಯವಹಾರ ನಡೆಸಬೇಕಾಗಿದೆ.ಪ್ರತಿನಿತ್ಯ ತೆರಿಗೆ ವಸೂಲು ಮಾಡುವ ಪುರಸಭೆಗೆ ಕನಿಷ್ಠ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಪರಿವೆಯಿಲ್ಲದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಯ ವೈಖರಿಯಾಗಿದೆ.

ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಿ
ಕುಣಿಗಲ್ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೆಲ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗ ತೂರಿ ಮನಂಬಂದಂತೆ ವಂತಿಗೆ ಮತ್ತು ಶುಲ್ಕ ವಸೂಲು ಮಾಡುತ್ತಿವೆ. ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ವಂತಿಗೆ, ಶುಲ್ಕ ವಸೂಲಿ ನೆಪದಲ್ಲಿ ಮಕ್ಕಳ ಪೋಷಕರ ಸುಲಿಗೆಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್ ಆಗ್ರಹ. ಕಳೆದ ಸಾಲಿನಲ್ಲಿ ಡೊನೇಷನ್ ಪಿಡುಗಿನಿಂದ ಪೋಷಕರನ್ನು ಪಾರು ಮಾಡಲು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಶಾಲಾಡಳಿತ ಮಂಡಳಿಯವರು ತಾವು ವಸೂಲು ಮಾಡುವ ವಂತಿಗೆ ಮತ್ತು ಶುಲ್ಕವನ್ನು ಶಾಲೆಯ ಮುಂಭಾಗದಲ್ಲಿ ಜಾಹಿರುಪಡಿಸಿ ಅದರಂತೆ ವಸೂಲು ಮಾಡಬೇಕೆಂದು ತಾಕೀತು ಮಾಡಲಾಗಿತ್ತು. ಆದರೆ ಈ ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾಣನಿದ್ದೆಯಲ್ಲಿರುವ ಕಾರಣ, ಅಂತಹ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದು ಪಟ್ಟಣದ ಕೆಲ ಖಾಸಗಿ ಶಾಲೆಗಳಲ್ಲಿ ಅಗತ್ಯ ಮೂಲ  ಸೌಕರ್ಯಗಳಿಲ್ಲದೆ ಇದ್ದರೂ ಪೋಷಕರನ್ನು ಸುಲಿಗೆಮಾಡುತ್ತಿವೆ.
ಪೂರ್ವ ಪ್ರಾಥಮಿಕಶಾಲೆಗೆ (ಎಲ್‌ಕೆಜಿ) ದಾಖಲಾತಿಗೆ ಇಪ್ಪತ್ತರಿಂದ ಮೂವತ್ತು ಸಾವಿರ ರು. ಶುಲ್ಕ ವಸೂಲು ಮಾಡುತ್ತಿದ್ದರೆ, ಎಂಟನೇ ತರಗತಿಗೆ ನಲವತ್ತರಿಂದ ಐವತ್ತು ಸಾವಿರ ಕೇಳುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಪೋಷಕರಿಗೆ ಸರ್ಕಾರಿ ಶಾಲೆಗೆ ಹೋಗಿ ಎಂಬ ಸಿದ್ದ ಉತ್ತರ ನೀಡುತ್ತಿದ್ದಾರೆ. ಇನ್ನು ಕೆಲ ಖಾಸಗಿ ಪ್ರೌಢ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಕಳಪೆ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಲವಂತವಾಗಿ ವರ್ಗಾವಣೆ ಪತ್ರ ನೀಡಿ ಸರ್ಕಾರಿ ಶಾಲೆ ಸೇರಿದಂತೆ ಇತರೆ ಶಾಲೆಗಳಿಗೆ ಸಾಗಿಹಾಕುವ ಪರಿಪಾಠ ನಡೆಯುತ್ತಿದ್ದು ಪೋಷಕರು ಪರದಾಡುವಂತಾಗಿದೆ.
ಇನ್ನು ಬಹುತೇಕ ಪೋಷಕರು, ಕಡ್ಡಾಯ ಶಿಕ್ಷಣ ಅಧಿನಿಯಮದಡಿಯಲ್ಲಿ ಇಲಾಖೆಯ ಅಧಿಕೃತ ಪ್ರಕ್ರಿಯೆಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪಡೆದರೂ, ಅಂತಹ ಮಕ್ಕಳಿಗೆ ಹದಿನೈದರಿಂದ ಇಪ್ಪತ್ತು ಸಾವಿರ ರು. ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ವಂತಿಗೆ ಮತ್ತು ಶುಲ್ಕ ವಸೂಲಾತಿಯ ಆಟಾಟೋಪಕ್ಕೆ ಕಡಿವಾಣ ಹಾಕುವ ಜೊತೆಯಲ್ಲಿ ಖಾಸಗಿಶಾಲೆಗಳು ವಸೂಲಿ ಮಾಡಬೇಕಾದ ಶುಲ್ಕದ ವಿವರಗಳನ್ನು ಆಯಾ ಶಾಲೆಗಳ ಮುಂದೆ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪೋಷಕರ ಹಿತರಕ್ಷಣೆಗೆ ಕರವೇ ವತಿಯಿಂದ ಪ್ರತಿಭಟನೆ ಖಚಿತ ಎಂದು ಎಚ್ಚರಿಸಿದ್ದಾರೆ.

ಕುಡಿಯುವ ನೀರಿಗೆ ಹಾಹಾಕಾರ
ಚಿಕ್ಕನಾಯಕನಹಳ್ಳಿ: ತಾಲೂಕಿನ ಕಂದಿಕೆರೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಸುಮಾರು 2000 ಜನಸಂಖ್ಯೆಯಿರುವ ಗ್ರಾಮದಲ್ಲಿ ಒಂದು ವರ್ಷದಿಂದಲು ನೀರಿಗೆ ಬಹಳ ತೊಂದರೆಯಿದ್ದು, ತಾಲೂಕು ಆಡಳಿತ ಯಾವುದೇ ಮುಂಜಾಗ್ರತಾ ಕ್ರಮಕೈಗೊಂಡಿಲ್ಲದಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ.
ಗ್ರಾಮಪಂಚಾಯ್ತಿ ಆಡಳಿತ, ಬರೀ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಮಾಡುವಲ್ಲಿ ತೋರುವ ಆಸಕ್ತಿಯನ್ನು ಜನರ ಕುಂದುಕೊರತೆಗಳನ್ನು ಈಡೇರಿಸುವಲ್ಲಿ ತೋರುತ್ತಿಲ್ಲ. ಈಗಾಗಲೇ ಹಲವಾರು ಬಾರಿ ಮನವಿ ಮತ್ತು ಪ್ರತಿಭಟನೆಗಳನ್ನು ಮಾಡಿದ್ದರು ಸಹ ಜಡ್ಡು ಗಟ್ಟಿರುವ ಆಡಳಿತವರ್ಗಕ್ಕೆ ಸಾರ್ವಜನಿಕರ ಸಮಸ್ಯೆ ಅರಿವಾಗಿಲ್ಲದಿರುವುದು ಜನರ ದುರಂತವಾಗಿದೆ. ಒಂದೊಂದು ಕೊಡ  ಕುಡಿಯುವ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ತಾಲೂಕಿನ ಅನೇಕ ಹಳ್ಳಿಗಳಲ್ಲಿದೆ.
ಮನೆಯ ಹಿರಿಯರು ಕೆಲಸ ಕಾರ್ಯ ಬಿಟ್ಟು ಕಾದು ನಿಲ್ಲಲಾರದೆ, ಮಕ್ಕಳನ್ನು ನೀರಿನ ಟ್ಯಾಂಕುಗಳ ಬಳಿ ಕಾವಲು ನಿಲ್ಲಿಸಬೇಕಾಗಿದೆ. ಕಂದಿಕೆರೆಯಂತಹ ಹೋಬಳಿ ಕೇಂದ್ರದಲ್ಲಂತು ಬಹಳವಾಗಿದ್ದು, ಶಾಸಕರು ಇತ್ತ ಗಮನ ಹರಿಸಿ ಕೂಡಲೇ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯ.

ನೂರಾರು ಲೀಟರ್ ಪಡಿತರ ವಿತರಣೆ ಸೀಮೆಎಣ್ಣೆ ಪತ್ತೆ
ಕುಣಿಗಲ್ ಪಟ್ಟಣದಲ್ಲಿ ಇತ್ತೀಚೆಗೆ ಖಾಸಗಿ ಬಸ್ಸುಗಳಿಗೆ  ಬಳಸಲು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ನೂರಾರು ಲೀಟರ್ ಪಡಿತರ ವಿತರಣೆ ಸೀಮೆಎಣ್ಣೆ ಪತ್ತೆಯಾಗಿದ್ದು, ಈ ಅಕ್ರಮದಲ್ಲಿ ಕೆಲ ಪಡಿತರ ವಿತರಣೆಯ ಹೊಣೆಹೊತ್ತಿರುವ ನ್ಯಾಯಬೆಲೆ ಅಂಗಡಿಯವರು ಭಾಗಿಯಾಗಿದ್ದಾರೆ ಎಂಬುದು ಆರೋಪ.
ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಮತ್ತು ಪಡಿತರ ಕಾರ್ಡ್‌ದಾರರು ಆಗ್ರಹ.
ಪಡಿತರ ಕಾರ್ಡ್‌ಗೆ ಆಹಾರ ಧಾನ್ಯಗಳು ಸೇರಿದಂತೆ ಸೀಮೆಎಣ್ಣೆ ವಿತರಣೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಿಂಗಳಿಗೊಂದರಂತೆ ಹೊಸ, ಹೊಸ ಕಾನೂನು, ನಿಯಮಗಳನ್ನು ಜಾರಿ ಮಾಡುತ್ತಿದೆ. ಸೀಮೆ ಎಣ್ಣೆ ಪಡೆಯಲು ಪಡಿತರ ಕಾರ್ಡ್, ಮತದಾರರ ಭಾವಚಿತ್ರ ಮತ್ತು ಅಧಾರ ಕಾರ್ಡ್, ಕಾರ್ಡ್‌ದಾರರ
ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ದಾಖಲೆಗಳನ್ನು ಕಡ್ಡಾಯವಾಗಿ ನೀಡಿದರೆ ಮಾತ್ರ ಪಡಿತರ ಸೇರಿದಂತೆ ಸೀಮೆಎಣ್ಣೆ ನೀಡುವುದಾಗಿ ಹೇಳಿ, ಈ ಪೈಕಿ ಸ್ವಲ್ಪ ನ್ಯೂನತೆ ಇದ್ದರೂ ಪಡಿತರ ಕಾರ್ಡ್ ಹೊಂದಿದವರು ಕಾಡಿ ಬೇಡಿದರೂ, ನ್ಯಾಯಬೆಲೆ ಅಂಗಡಿ ಮಾಲೀಕರು ಕನಿಕರ ತೋರದೆ, ನೀತಿ ನಿಯಮಗಳಿಗೆ ಬದ್ದರಾಗಿದ್ದೇವೆಂಬ ಫೋಸು ಕೊಡುತ್ತಾರೆ. ತಾಲೂಕಿನ ಆಹಾರ ಇಲಾಖೆ ಆಧಿಕಾರಿಗಳಂತೂ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವ ಖಡಕ್ ಅಧಿಕಾರಿಗಳೆಂಬಂತೆ ವರ್ತಿಸುತ್ತಿದ್ದಾರೆ. ಒಂದೆಡೆ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತೊಂದೆಡೆ ಇವರಿಗಿಂತಲೂ ಖಡಕ್ ಅಧಿಕಾರಿಗಳಿದ್ದರೂ ಸಾಮಾನ್ಯಜನತೆಗೆ ವಿತರಿಸಬೇಕಾದ ಪಡಿತರನೂರಾರು ಲೀಟರ್ ಸೀಮೆಎಣ್ಣೆ ಟ್ರಾವೆಲ್ಸ್ ಅಂಗಡಿಯಲ್ಲಿ ಖಾಸಗಿ ಬಸ್ಸುಗಳಿಗೆ ಬಳಸುವ ಡೀಸಲ್‌ಗೆ ಬೆರಕೆ ಮಾಡಲು ಸಂಗ್ರಹಿಸಿರುವುದು ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕ ವಿತರಣಾ ಪದ್ಧತಿಯ ಮೂಲಕ ವಿತರಿಸಬೇಕಿದ್ದ ಸೀಮೆ ಎಣ್ಣೆ ಕೇವಲ ಒಬ್ಬ ವ್ಯಕ್ತಿಯ ಬಳಿ ಪತ್ತೆಯಾಗಿರುವ ಬಗ್ಗೆ ಸ್ಥಳೀಯ
ನ್ಯಾಯಬೆಲೆ ಅಂಗಡಿಯವರು ಶಾಮೀಲಾಗಿರುವ ಸಾಧ್ಯತೆಗಳು ದಟ್ಟವಾಗಿರುವ ಕಾರಣ, ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳು ಕೂಲಂಕುಶ ತನಿಖೆಗೆ ಕ್ರಮ ಕೈಗೊಂದು ತಪ್ಪಿತಸ್ಥ ಸಿಬ್ಬಂದಿ ಮತ್ತು ನ್ಯಾಯಬೆಲೆ ಎಂಗಡಿಯವರ ವಿರುದ್ಧಕ್ರಮ ಕೈಗೊಳ್ಳಬೇಕಿದೆ.

ಪಾಲಿಕೆ ಪಾರ್ಕ್ ಅವ್ಯವಸ್ಥೆ
ಸಮರ್ಪಕ ನಿರ್ವಹಣೆ ಇಲ್ಲದೆ ತುಮಕೂರು ಮಹಾನಗರಪಾಲಿಕೆ ಆವರಣದಲ್ಲಿರುವ ಸಾರ್ವಜನಿಕ ಉದ್ಯಾನವನ ಹಾಳುಗೆಡವಿದೆ. ಪಾಲಿಕೆ ಆವರಣದಲ್ಲಿರುವ ಈ ಉದ್ಯಾನವನ ಘನ ತ್ಯಾಜ ವಸ್ತುಗಳಿಂದ ತುಂಬಿ ತುಳುಕುತ್ತಿವೆ. ಪ್ಲಾಸ್ಟಿಕ್ ನೀರಿನ ಬಾಟಲ್, ಕಡ್ಡಿ,ಕಸ, ಮದ್ಯದ ಬಾಟಲು ಹೇರಳವಾಗಿ ಬಿದ್ದಿವೆ. ಅಲ್ಲದೇ ಸದಾಕಾಲ ಈ ಪಾರ್ಕಿನಲ್ಲಿ ಕುದುರೆಗಳು, ಎಮ್ಮೆ, ಹಸುಗಳು ಅಡ್ಡಾಡುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ನಿರಾಶ್ರಿತರು, ಕೆಲ ಸಾರ್ವಜನಿಕರು ಈ ಪಾರ್ಕಿನ ಸುತ್ತಮುತ್ತ ಮಲಮೂತ್ರ ವಿಸರ್ಜಿಸಿ ಕಲುಷಿತಗೊಳಿಸಿದ್ದಾರೆ. ಪಾಲಿಕೆ ಆವರಣದಲ್ಲಿರುವ ಈ ಉದ್ಯಾನವನ್ನು ಸ್ವಚ್ಛಗೊಳಿಸಬೇಕೆಂದು ಹಲವಾರು ಬಾರಿ ಈ ಭಾಗದ ನಿವಾಸಿಗಳು ಹಾಗೂ ಸಾರ್ವಜನಿಕರು ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತು ಪಾಲಿಕೆ ಆವರಣದಲ್ಲಿರುವ ಈ ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವರೇ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.