ತುಮಕೂರು

ಕಲ್ಪತರು ತವರು ರೈತರಿಗೆ ಬೆಳೆ ವಿಮೆ ಯೋಜನೆ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಜೂ.2
ತುಮಕೂರು ಜಿಲ್ಲೆಯಲ್ಲಿ 2014 ರ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ನಿರ್ದಿಷ್ಟ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಅಧಿಸೂಚಿತ ಬೆಳೆಯ ಬಿತ್ತನೆ ವಿಫಲಗೊಂಡಲ್ಲಿ ಬೆಳೆವಿಮಾ ನಷ್ಟ ಪರಿಹಾರ ನೀಡಲಾಗುವುದು.
 ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಪರಿಹಾರ ನೀಡಲಾಗುವುದು. ಈ ಯೋಜನೆಯನ್ನು ಹೋಬಳಿ ಮಟ್ಟ ಹಾಗೂ ಗ್ರಾ.ಪಂ. ಮಟ್ಟದಲ್ಲಿ ಅನುಷ್ಠಾನಗೊಳಿಸಲಿದ್ದು, ಅಧಿಸೂಚಿತ ಪ್ರದೇಶದಲ್ಲಿರುವ ರೈತರು ಬೆಳೆಗಳಿಗೆ ವಿಮಾ ಸೌಲಭ್ಯ ಪಡೆದುಕೊಳ್ಳಲು ಅರ್ಹರು.ಹೋಬಳಿ ಮಟ್ಟದಲ್ಲಿ ಜೋಳ (ಮ.ಆ.), ರಾಗಿ (ಮ.ಆ.), ಹುರುಳಿ (ಮ.ಆ.), ಹೆಸರು (ಮ.ಆ.), ಹರಳು (ಮ.ಆ.), ಸಾವೆ (ಮ.ಆ.),ನವಣೆ (ಮ.ಆ.), ಮೆಣಸಿನ ಕಾಯಿ (ಮ.ಆ.), ಉದ್ದು (ಮ.ಆ.), ಎಳ್ಳು (ಮ.ಆ.), ಸೂರ್ಯಕಾಂತಿ (ಮ.ಆ.), ಸೂರ್ಯಕಾತಿ (ನೀರಾವರಿ), ರಾಗಿ (ನೀರಾವರಿ) ಅಧಿಸೂಚಿತ ಬೆಳೆಗಳಾಗಿರುತ್ತವೆ.
ಗ್ರಾ.ಪಂ. ಮಟ್ಟದಲ್ಲಿ ಬತ್ತ (ನೀರಾವರಿ), ನೆಲಗಡಲೆ (ಮ.ಆ.), ಮುಸುಕಿನ ಜೋಳ (ನೀರಾವರಿ), ತೊಗರಿ (ಮ.ಆ.), ಮುಸುಕಿನ ಜೋಳ (ಮ.ಆ.), ನೆಲಗಡಲೆ (ನೀರಾವರಿ) ಅಧಿಸೂಚಿತ ಬೆಳೆಗಳಾಗಿರುತ್ತವೆ.
2014 ರ ಮುಂಗಾರು ಹಂಗಾಮಿಗೆ ಅಧಿಸೂಚಿತ ಕ್ಷೇತ್ರ ಘಟಕ, ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರಿಗೆ ಮತ್ತು ಅಧಿಸೂಚಿತ ಕ್ಷೇತ್ರ ಘಟಕ, ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಸ್ವಇಚ್ಛೆಯಿಂದ ಜೂನ್ 30 ರೊಳಗೆ ಯೋಜನೆಯಲ್ಲಿ ಭಾಗವಹಿಸಬಹುದು.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀದಿ ನೀಡಬೇಕು.  
 ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಬೆಳೆವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ 30 ದಿವಸದೊಳಗಾಗಿ ಆರ್ಥಿಕ ಸಂಸ್ಥೆಗಳಿಗೆ ಬಿತ್ತನೆ ದೃಢೀಕರಣ ನೀಡಿ, ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು ಹಾಗೂ ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸ ಮೊತ್ತವನ್ನು ರೈತರೇ ಭರಿಸತಕ್ಕದ್ದು.  
2014 ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಬೆಳೆವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಡಿಸಿ, ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸಲಾಗುವುದು.
ಬಿತ್ತನೆ ಪೂರ್ಣ ವಿಫಲಗೊಂಡಲ್ಲಿ ವಿಮಾ ಮೊತ್ತಕ್ಕೆ ಶೇ.12.50ರಷ್ಟು ಪರಿಹಾರ, ಬಿತ್ತನೆಯಾದ ನಂತರ ಮೊಳಕೆ ಬಾರದಿದ್ದಲ್ಲಿ ವಿಮಾ ಮೊತ್ತಕ್ಕೆ ಶೇ. 18.75 ರಷ್ಟು ಪರಿಹಾರ, ಮೊಳಕೆ ಬಂದ ನಂತರ ಮುಂಚಿತವಾಗಿ ಬೆಳೆ ಬಾಡಿಹೋದರೆ ಅಥವಾ ಹಾಳಾದರೆ ಶೇ. 25 ರಷ್ಟು ಪರಿಹಾರ ನೀಡಲಾಗುವುದು.
ಬೆಳೆ ಬಿತ್ತನೆಯಾದ ನಂತರ ಕಟಾವಿಗೆ ಮುನ್ನ ಅಧಿಸೂಚಿತ ವಿಮಾಘಟಕದಲ್ಲಿ ಬೆಳೆಯು ಪೂರ್ಣವಾಗಿ ನಾಶಹೊಂದಿದಲ್ಲಿ ವಿಮಾ ಸಂಸ್ಥೆಯು ಬೆಳೆ ವಿಮಾ ನಷ್ಟ ಪರಿಹಾರವನ್ನು ಅಂತ್ಯದಲ್ಲಿ ಇತ್ಯರ್ಥಪಡಿಸಲಿದ್ದು, ಬಿತ್ತನೆಯಾದ ನಂತರ 1 ರಿಂದ 2ತಿಂಗಳೊಳಗಾಗಿ ವಿಮಾ ಮೊತ್ತಕ್ಕೆ ಶೇ. 50 ರಷ್ಟು ಪರಿಹಾರ, ಬಿತ್ತನೆಯಾದ ನಂತರ 2ರಿಂದ 3 ತಿಂಗಳೊಳಗಾಗಿ ವಿಮಾ ಮೊತ್ತಕ್ಕೆ ಶೇ. 75ರಷ್ಟು ಪರಿಹಾರ, ಬಿತ್ತನೆಯಾದ ನಂತರ 3 ತಿಂಗಳ ಮೇಲ್ಪಟ್ಟು ವಿಮಾ ಮೊತ್ತಕ್ಕೆ ಶೇ. 100 ರಷ್ಟು ಪರಿಹಾರ ನೀಡಲಾಗುವುದು.
ಬೆಂಗಳೂರಿನ ಎಚ್.ಡಿ.ಎಫ್.ಸಿ. ಎರ್ಗೋ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ತುಮಕೂರು ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.