ತುಮಕೂರು

ವ್ಯವಹಾರಿಕವಾದವೂ ಬೇಕು: ಮರಿದೇವರು

Published On :

ತುಮಕೂರು: ಭಗವಂತನ ಕುರಿತಾದ ತಾದ್ಯಾತ್ಮಿಕತೆಯೇ ಧ್ಯೇಯವಾದ. ಧ್ಯೇಯವಾದದ ಪ್ರಕಾರ ಜಗತ್ತನ್ನು ಆಳುವ ಯಾವುದೋ ಒಂದು ನಿಗೂಢವಾದ ಶಕ್ತಿ ಇದೆ. ಆ ಶಕ್ತಿಯನ್ನು ಕಂಡುಕೊಳ್ಳಬೇಕು ಎಂದು ಹಿರಿಯ ಲೇಖಕ ಪ್ರೊ. ಸಿ.ಎಚ್. ಮರಿದೇವರು ಹೇಳಿದರು.
ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ವಿದ್ಯಾವಾಹಿನಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 255 ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಧ್ಯೇಯವಾದ ಮತ್ತು ವ್ಯವಹಾರಿಕವಾದ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಜಗತ್ತಿನ ಮುಕ್ಕಾಲುಭಾಗ ಜನರು ಬುದ್ಧನನ್ನು ಪೂಜಿಸುತ್ತಾರೆ. ಇವರೆಲ್ಲಾ ಧ್ಯೇಯವಾದಿಗಳು ಅಲ್ಲದೆ ಅಂತರಂಗದ ಗುಹೆಯನ್ನು ಹೊಕ್ಕು ಪರಮಾತ್ಮನನ್ನು ಒಲಿಸಿಕೊಳ್ಳುವವರೇ ಧ್ಯೇಯವಾದಿಗಳು ಬುದ್ಧ, ಬಸವ, ಅಲ್ಲಮ ಅಕ್ಕಮಹಾದೇವಿ ಮುಂತಾದ ಮಹನೀಯರು ಧ್ಯೇಯವಾದಿಗಳಾಗಿದ್ದರು ಎಂದರು.
ಜಗತ್ತಿನಲ್ಲಿರುವ ನೂರಕ್ಕೆ 98 ರಷ್ಟು ಜನ ವ್ಯವಹಾರಿಕವಾದಿಗಳು. ವ್ಯವಹಾರಿಕವಾದದ ಜನಕ ಅಮೆರಿಕಾದ ಜಾನ್ಡ್ಯೂಯಿಯ ಪ್ರಕಾರ ನಮ್ಮ ಜೀವನ ಸುಗಮವಾಗಿರಬೇಕಾದರೆ ಚೆನ್ನಾಗಿ ದುಡಿಯಬೇಕು. ನಾಳಿನ ಸಮಸ್ಯೆ ಬೇಕಿಲ್ಲ. ಇಂದಿನ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯ. ನಾವು ಧ್ಯೇಯ ವಾದವನ್ನು ಹೆಚ್ಚು ಮಾಡಿಕೊಂಡು, ವ್ಯವಹಾರಿಕವಾದವನ್ನು ಕಡಿಮೆ ಮಾಡಿಕೊಂಡು ನಡೆದರೆ ನೆಮ್ಮದಿಯಾಗಿರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಸಮಾರಂಭದಲ್ಲಿ 70 ವಸಂತಗಳು ತುಂಬಿದ ವಿದ್ಯಾವಾಹಿನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಬಿ. ಜಯಣ್ಣರವರನ್ನು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಹರಿಕಥಾ ವಿದ್ವಾನ್ ಕಲಾಶ್ರೀ ಡಾ. ಲಕ್ಷ್ಮಣದಾಸ್ ಮಾತನಾಡುತ್ತಾ ನಮ್ಮ ತುಮಕೂರಿನ ಶಿಕ್ಷಣ ಕ್ಷೇತ್ರದ ದಿಗ್ಗಜ ಕೆ.ಬಿ. ಜಯಣ್ಣನವರು ಬಹಳ ಕಷ್ಟದಿಂದ ಮೇಲೆ ಬಂದವರು ಶಿಕ್ಷಣದ ಬಗ್ಗೆ ಅಪಾರ ಕಳಕಳಿ ಹೊಂದಿರುವ ಕೆ.ಬಿ. ಜಯಣ್ಣನವರ ಸಮರ್ಪಣಾ ಮನೋಭಾವದಿಂದ ಇವರ ವಿದ್ಯಾಸಂಸ್ಥೆ ಹೆಮ್ಮರವಾಗಿದೆ. ಜಯಣ್ಣನವರಿಗೆ ಜಯಣ್ಣನವರೇ ಸಾಟಿ. ಇವರ ಪ್ರೀತಿ ವಾತ್ಸಲ್ಯ ವರ್ಣನಾತೀತ. ಇವರಿಗೆ ಗೌರವಿಸುವುದು ನಮಗೆ ನಾವೇ ಗೌರವಿಸಿಕೊಂಡಂತೆ. ಇಂತಹವರ ಜೊತೆ ಇರುವುದೇ ನಮ್ಮ ಪುಣ್ಯ. ಕೆ.ಬಿ. ಜಯಣ್ಣನವರು ಶತಾಯುಷಿಗಳಾಗಲಿ ಎಂದು ಹಾರೈಸಿದರು.
ಸನ್ಮಾನಿತರಾದ ಕೆ.ಬಿ. ಜಯಣ್ಣನವರು ಭಾವುಕರಾಗಿ ಮಾತನಾಡಿದರು. ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸ್ಥಾಪಕ ಅಧ್ಯಕ್ಷ ಪಿ. ಶಾಂತಿಲಾಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ.ಎಸ್.ಪಿ. ಪದ್ಮಪ್ರಸಾದ ಈ ಧ್ಯೇಯವಾದ ಹಾಗೂ ವ್ಯವಹಾರಿಕವಾದಗಳು ಯೂರೋಪ್ ದೇಶಗಳ ಶೈಕ್ಷಣಿಕ ಸಿದ್ಧಾಂತಗಳಾಗಿವೆ. ಕೆ.ಬಿ.ಜಯಣ್ಣರವರು ಆದರ್ಶವಾದದ ಹಿಂದೆ ಹೋಗಿ ಶಿಕ್ಷಣ ಸಂಸ್ಥೆ ಕಟ್ಟಿದರು. ಅವರು ಉದಾತ್ತತೆಯ ಪರವಾಗಿ ನಿಂತಿದ್ದರಿಂದ ಆದರ್ಶ ವ್ಯಕ್ತಿಯಾದರು. ಆತ್ಮೀಯ ಹಾಗೂ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.