ತುಮಕೂರು

ಮೋದಿ ಆಶಯದಂತೆ ಬಿಜೆಪಿ ಬಲಪಡಿಸುವೆ

Published On :

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದಲ್ಲಿ ಬಿಜೆಪಿ ಬಲಪಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಬಿಜೆಪಿ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು. ಮೋದಿ ಅವರು ತಮ್ಮ ಬಳಿ ಹಲವು ಸಲ ರಾಜ್ಯದಲ್ಲಿ ಪಕ್ಷ ಬಲಪಡಿಸುವಂತೆ ಸೂಚಿಸಿದ್ದಾರೆ. ರಾಜ್ಯದ 3 ಸಚಿವರು ಕೇಂದ್ರದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ರಥ ಎಳೆಯುವ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದರು. ದೇಶದಲ್ಲಿ ಈಗಾಗಲೇ ಬದಲಾವಣೆ ಗಾಳಿ ಬೀಸಿದ್ದು, ಜನತೆ ಬಹಳ ಅಚ್ಚರಿಯಿಂದ ನೋಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಮೋದಿ ಅಪೇಕ್ಷೆ ಪಟ್ಟಿದ್ದಾರೆ. ಮತದಾರರು ಕಾಂಗ್ರೆಸ್ ಪಕ್ಷವನ್ನು ಪ್ರಾದೇಶಿಕ ಪಕ್ಷದ ಮಟ್ಟಕ್ಕೆ ಇಳಿಸಿದ್ದು, ಇಂಥ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಪ್ರಧಾನಿ ಮೋದಿ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಎದುರಾಗಿದ್ದು ದಕ್ಷ ಪ್ರಧಾನಿ ಮೋದಿ ಅಲೆಯಿದ್ದು ಶಿವಯೋಗಿಸ್ವಾವು ಗೆಲುವಿಗೆ ಕಾರ್ಯಕರ್ತರು ಗುಂಪು ಗುಂಪಾಗಿ ಶ್ರಮಿಸುವಂತೆ ಕರೆ ನೀಡಿದರು. ಪದವೀಧರ ಕ್ಷೇತ್ರ ಅತ್ಯಂತ ಪವಿತ್ರವಾದ, ಪ್ರಮಾಣಿಕವಾದ ಕ್ಷೇತ್ರವಾಗಿದ್ದು ಇಲ್ಲಿ ಹಣ, ಆಮಿಷಗಳಿಗೆ ಅವಕಾಶವಿಲ್ಲ ಎಂದರು. ಈ ಮತಗಳೆಲ್ಲಾ ದೇಶದ ನಿರ್ಮಾಣಕ್ಕೆ ಮೀಸಲು ಎನ್ನುವ ವಿಶ್ವಾಸವಿದೆ. ಬಿಜೆಪಿ ಸರ್ಕಾರ ಇದ್ದಾಗ ಏನು ಮಾಡಿದ್ದೇವೆ ಎನ್ನುವುದು ಪದವೀಧರರಿಗೆ, ಶಿಕ್ಷಕರಿಗೆ ಗೊತ್ತಿರುವ ವಿಷಯ ಎಂದರು.


ಅನಂತಮೂರ್ತಿ, ಕಲ್ಬುರ್ಗಿ ಗಡಿಪಾರು ಮಾಡಲು ಆಗ್ರಹ
ಚಿಕ್ಕನಾಯಕನಹಳ್ಳಿ: ಜ್ಞಾನಪೀಠಿಗಳೆಂಬ ಅಜ್ಞಾನಿ ಅನಂತಮೂರ್ತಿ ಮತ್ತು ಸಂಶೋಧಕನೆಂಬ ಬಿರುಧಾಂಕಿತ ಕಲ್ಬುರ್ಗಿಯವರನ್ನು ಗಡಿಪಾರು ಮಾಡುವ ಮೂಲಕ ಜನಸಾಮಾನ್ಯರ ನೆಮ್ಮದಿ ಕಾಪಾಡಬೇಕೆಂದು ಶೆಟ್ಟೀಕೆರೆ ಹೋಬಳಿ ವೀರಶೈವ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಎಸ್.ಜಿ. ದಯಾಶಂಕರ್ ಮತ್ತು ಎಸ್.ಎಮ್. ಪುಟ್ಟಣ್ಣಶೆಟ್ಟಿ, ವಿದ್ಯೆಯಿಂದ ವಿನಯ ಬರಬೇಕು. ಆದರೆ ಈ ಜ್ಞಾನಪೀಠಿಗಳೆಂಬ ಅಜ್ಞಾನಿಗಳಿಗೆ ದಿಢೀರ್ ಪ್ರಚಾರ ಪಡೆಯಲು ಸ್ವಜಾತಿ, ಸ್ವಧರ್ಮವನ್ನು ಹೀಯಾಳಿಸುವ ಮಟ್ಟಕ್ಕಿಳಿದಿರುವುದು ನೈತಿಕ ದಿವಾಳಿತನವಾಗಿದೆ. ಇವರು ನಿಜವಾದ ಬುದ್ದಿಜೀವಿಗಳಾಗಿದ್ದರೆ ಬೇರೆ ಧರ್ಮಗಳಲ್ಲಿರುವ ನ್ಯೂನತೆಗಳನ್ನು ಟೀಕಿಸುವ ಧೈರ್ಯ ತೋರಲಿ. ಬಸವಣ್ಣರನ್ನು ನಾನ್‌ಸೆನ್ಸ್ ಎಂದು ಸಂಭೋದಿಸಿರುವ ಅನಂತಮೂರ್ತಿಗೆ ಬಸವಶ್ರೀಪ್ರಶಸ್ತಿಯನ್ನು ನೀಡುವ ಮೂಲಕ ಅವರ ರೋಗಕ್ಕೆ ಔಷಧಯ ಖರ್ಚಿಗೆ 10 ಲಕ್ಷ ಸರ್ಕಾರಿ ಹಣವನ್ನು ಪ್ರಶಸ್ತಿಯ ರೂಪದಲ್ಲಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇವರ ಪಾಪದಲ್ಲಿ ಪಾಲುದಾರರಾಗಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.

ರಾಜ್ಯಕ್ಕಾಗಿರುವ ರೇಲ್ವೆ ಅನ್ಯಾಯ ಸರಿಪಡಿಸಿ
ತುಮಕೂರು: ರೇಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಆಗಿರುವ ಭಾರಿ ಅನ್ಯಾಯ ಸರಿಪಡಿಸುವಂತೆ ಮಾಜಿ ಸಿಎಂ ಯಡಿಯೂರಪ್ಪ ಸಲಹೆ ನೀಡಿದ್ದಾರೆ. ತುಮಕೂರಿನಲ್ಲಿ ಬಿಜೆಪಿ ಆಗ್ನೇಯ ಪದವೀಧರರ ಮತದಾರರ ಸಭೆಯಲ್ಲಿ ಮಾತನಾಡಿ, ಪೂರ್ವಜನ್ಮದ ಪುಣ್ಯದ ಫಲ ರೇಲ್ವೆ ಇಲಾಖೆ ಸದಾನಂದಗೌಡರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ ಎಂದರು. ನೋಡದೆ ರಾಜ್ಯಕ್ಕೆ ರೇಲ್ವೆ ಯೋಜನೆಗಳನ್ನು ದೊಡ್ಡ ಮಟ್ಟದಲ್ಲಿ ಜಾರಿಗೊಳಿಸಿ ಹೊಸ ಯೋಜನೆಗಳಿಗೆ ಆದ್ಯತೆ ನೀಡಿ ಎಂದ ಯಡಿಯೂರಪ್ಪ ರೈಲ್ವೆ ಇಲಾಖೆಯಲ್ಲಿ ಸದಾನಂದಗೌಡರು ಗಣನೀಯ ಸೇವೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.


ಸಿಎಂಗೆ ಕಿವಿಮಾತು
ತಾವು ಸಿಎಂ ಆಗಿದ್ದ ವೇಳೆ ರೇಲ್ವೆ ಯೋಜನೆಗಳ ಜಾರಿಗೆ ಅರ್ಧದಷ್ಟು ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊರುವ ಭರವಸೆ ನೀಡಿದ್ದೆ. ಆದರೆ ಸಿದ್ದರಾಮಯ್ಯ ತಮ್ಮ ಸರ್ಕಾರದಲ್ಲಿ ಹಣದ ಕೊರತೆಯ ನೆಪ ಹೇಳಿ ಒಡಕಿನ ಮಾತನ್ನು ಆಡುತ್ತಿದ್ದಾರೆ. ಖಜಾನೆಯಲ್ಲಿ ಹಣಯಿದೆ. ಮುಖ್ಯಮಂತ್ರಿಗಳು ಮೀನಮೇಷ ಎಣಿಸದೆ ರೈಲ್ವೆ ಯೋಜನೆಗಳಿಗೆ ಸಹಕರಿಸಬೇಕು ಎಂದರಎ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.