ಹನುಮಂತರಾಯಪ್ಪ ಹೇಳಿಕೆಗೆ ಆಕ್ಷೇಪ
ತುಮಕೂರು: ಕೆಲ ಸಂಘವು ಸಂಸ್ಥೆಗಳು ದಲಿತರ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿತ್ದಾರೆ ಎಂಬ ಪಾಲಿಕೆಯ ವಿರೋಧ ಪಕ್ಷದ ಹನುಮಂತರಾಯಪ್ಪ, ಮೇಯರ್ ಗೀತಾ ಮತ್ತು ಕೆಲವು ಸದಸ್ಯರ ಹೇಳಿಕೆಗೆ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಪಿ.ಕೆ.ಎಸ್ ಕಾಲೋನಿಯ ಸಮುದಾಯ ಭವನವನ್ನು ನಮ್ಮ ಸಮಿತಿಯೂ ಅತಿಕ್ರಮ ಪ್ರವೇಶ ಮಾಡಿಲ್ಲ. ಕಾನೂನು ರೀತಿಯಲ್ಲಿ ಅಂದರೆ ಕೌನ್ಸಿಲ್ ಸಭೆಯಲ್ಲಿ ಅನುಮತಿ ಪಡೆದು ಕೊಳಗೇರಿಗಳಲ್ಲಿರುವ ಮಕ್ಕಳ, ಯುವಜನರ ಶೈಕ್ಷಣಿಕ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಸ್ಲಂ ಜನಾಂದೋಲನ-ಕರ್ನಾಟಕದ ರಾಜ್ಯಸಂಚಾಲಕರಾದ ಎ. ನರಸಿಂಹಮೂರ್ತಿ ತಿಳಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಕೊಳಗೇರಿ ಸಮಿತಿಯ ಕಾರ್ಯದರ್ಶಿ ಸೈಯದ್ ಅಲ್ತಾಫ್, ಶಾಖಾ ಅಧ್ಯಕ್ಷರಾದ ಸಿದ್ದಪ್ಪ, ರಾಜಣ್ಣ, ಅಟ್ಟೆಕಾರ್ , ಶಾರದಮ್ಮ, ಲೋಕೇಶ್, ಜಯಣ್ಣ, ಯುವಜನ ಸಂಪನ್ಮೂಲ ಕೇಂದ್ರದ ಶೆಟ್ಟಳಯ್ಯ, ರಾಮಯ್ಯ, ಅರುಣ್, ಗಾಯಿತ್ರಿ, ಕೋಮಲ, ಶೃತಿ, ಲತಾ ಮುಂತಾದವರು ಹಾಜರಿದ್ದರು.
ಆಟೋದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
ತಿಪಟೂರು: ಚಲಿಸುತ್ತಿದ್ದ ಆಟೋದಿಂದ ಶುಕ್ರವಾರ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಶನಿವಾರ ಸಾವನ್ನಪ್ಪಿದ್ದಾರೆ. ತಾಲೂಕಿನ ತಡಸೂರು ಗ್ರಾಮದ ಆಶೋಕಚಾರ್ಯ (38) ಮೃತಪಟ್ಟವರು. ಹಾಸನ-ತಿಪಟೂರು ರಸ್ತೆಯ ಹೊನ್ನೇನಹಳ್ಳಿ ಗ್ರಾಮದ ವಿರುಪಾಕ್ಷೇಶ್ವರ ದೇವಸ್ಥಾನದ ಆರ್ಚ್ ಮುಂಭಾಗ ತಿಪಟೂರಿನಿಂದ ತಡಸೂರಿಗೆ ಹೋಗುವಾಗ ಚಲಿಸುತ್ತಿದ್ದ ಆಟೋದಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ಮತ್ತು ತಾಯಿಯನ್ನು ಅಗಲಿದ್ದಾರೆ. ಪ್ರಕರಣವನ್ನು ನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಸಂತಾಪ: ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಬಿ.ದಿವಾಕರ್, ಜೆಡಿಎಸ್ ಅಧ್ಯಕ್ಷರಾದ ಗುರುಮೂರ್ತಿ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ತಂತಿ ತುಳಿದು ಮಹಿಳೆ ಸಾವು
ಕುಣಿಗಲ್: ತಾಲೂಕಿನ ಅಮೃತೂರು ಹೋಬಳಿ ವಳಗೆರೆಪುರ ಗ್ರಾಮದ ಲಕ್ಷ್ಮಮ್ಮ (55ವರ್ಷ) ಕೊಟ್ಟಿಗೆಗೆ ಹೋಗುವಾಗ, ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ತುಳಿದು, ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಮೃತಳ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪದವಿ ವಿದ್ಯಾರ್ಥಿಗಳ ಸಾಹಿತ್ಯ ಕೃಷಿಯ ಆರಂಭ
ತುರುವೇಕೆರೆ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿಸಿಕೊಂಡಿರುವ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವ ಆರಂಭ(ಕೃಷಿ) ಕೃತಿಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಪ್ಪ ಬಿಡುಗಡೆ ಮಾಡಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿರುವ ಸಮಸ್ಯೆಗಳು, ಅವಕಾಶಗಳು, ವಿಜ್ಞಾನ ಕ್ಷೇತ್ರದ ವಿವರಗಳು ಹಾಗೂ ತಮ್ಮಲ್ಲಿರುವ ವಿವಿಧ ರೀತಿಯ ಬರವಣಿಗೆಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುವ ಈ ಆರಂಭಕ್ಕೆ ರೂಪು ನೀಡಿದ ಸಾಹಿತಿ ಹಾಗೂ ಕಾಲೇಜಿನ ಇತಿಹಾಸ ಉಪನ್ಯಾಸಕ ಕೃಷ್ಣಮೂರ್ತಿ ಬೆಳಗೆರೆ ಉಪಸಂಪಾದಕರಾಗಿದ್ದಾರೆ. ಆರಂಭದ ಬಿಡುಗಡೆ ಸಮಾರಂಭದಲ್ಲಿ ವೈದ್ಯ ಡಾ. ಚೌದ್ರಿ ನಾಗೇಶ್, ಉದಯ ಭಾರತಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ ದೇವರ ಮನೆ, ಉಪನ್ಯಾಸಕರಾದ ವಿಜಯಕುಮಾರ್, ಬಸವರಾಜು, ಶ್ರೀನಿವಾಸ್(ಕಂಪ್ಯೂಟರ್) ಮೊದಲಾದವರಿದ್ದರು. ವರ್ಷದಲ್ಲಿ 2 ಬಾರಿ ಪುಸ್ತಕ ರೂಪದಲ್ಲಿ ಆರಂಭ ಹೊರತರುವ ಆಲೋಚನೆ ಇದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

