ಅನುಕಂಪದ ಮತ ಬೀಳಲಿದೆ: ಚೌಡರೆಡ್ಡಿ ವಿಶ್ವಾಸ
ತುಮಕೂರು: ಇದೇ ತಿಂಗಳ 20 ರಂದು ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಯಲ್ಲಿ ತಮಗೆ ಅನುಕಂಪದ ಮತ ಬೀಳಲಿದೆ ಎಂಬ ವಿಶ್ವಾಸವನ್ನು ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ವ್ಯಕ್ತಪಡಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2008 ರ ಆಗ್ನೇಯ ಪದವೀಧರ ಕ್ಷೇತ್ರ ಹಾಗೂ 2012 ರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಾವು ಪರಾಭವಗೊಂಡಿದ್ದು ಈ ಬಾರಿ ಸೋಲಿನ ಅನುಕಂಪ ತಮ್ಮ ಗೆಲುವಿಗೆ ಸಹಾಯವಾಗುತ್ತದೆ ಎಂದರು. ಕಳೆದ 6 ತಿಂಗಳಿನಿಂದ ಶೇ. 60 ಕ್ಕೂ ಹೆಚ್ಚು ಮತದಾರರನ್ನು ತಾವು ಭೇಟಿಯಾಗಿದ್ದು ತಮ್ಮ ಪರ ಮತದಾರರಲ್ಲಿ ಒಲವು ವ್ಯಕ್ತವಾಗಿದೆ ಎಂದರು. 5 ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 31 ತಾಲೂಕಿನಿಂದ ಒಟ್ಟು 98037 ಮತದಾರರಿದ್ದಾರೆ. ಆದರೆ ಈ ಎಲ್ಲಾ ಮತದಾರರನ್ನು ಸಂಪರ್ಕಿಸುವುದು ಕಷ್ಟದ ಮಾತು. ಹಾಗಾಗಿ ಬಹುತೇಕ ಮತದಾರರನ್ನು ಫೋನ್‌ನಲ್ಲೂ ಸಂಪರ್ಕಿಸಿರುವುದಾಗಿ ತಿಳಿಸಿದರು. ತಾವು ಕಳೆದೆರಡು ಚುನಾವಣೆಯಲ್ಲಿ ಸೋತರು ಮತದಾರರ ಸಂಪರ್ಕ ಕಡಿದುಕೊಳ್ಳಲಿಲ್ಲ. ಇದು ಈ ಬಾರಿಯ ಚುನಾವಣೆಯಲ್ಲಿ ತಮ್ಮ ನೆರವಿಗೆ ಬರಲಿದೆ ಎಂದರು. ಆಗ್ನೇಯ ಪದವೀಧರ ಕ್ಷೇತ್ರ ವ್ಯಾಪ್ತಿಗೆ ಬರುವ 98 ಸಾವಿರ ಮತದಾರರಲ್ಲಿ ಬಹುತೇಕ ಮಂದಿ ಶಿಕ್ಷಕ, ಉಪನ್ಯಾಸಕ ಹುದ್ದೆಯಲ್ಲಿದ್ದಾರೆ ಎಂದರು. ವಿಧಾನ ಪರಿಷತ್ ನಡೆಯುತ್ತಿದ್ದರೆ ಜೆಡಿಎಸ್ ವರಿಷ್ಠರು ಶ್ರೀಲಂಕಾಕ್ಕೆ ಹೋಗಿದ್ದಾರಲ್ಲ ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರು, ಶಾಸಕರು ವಿದೇಶದಲ್ಲಿ ಇದ್ದರೂ ತಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹುಲಿನಾಯ್ಕರ್, ಜಿ.ಪಂ. ಪ್ರಭಾರ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ಬೆಳ್ಳಿ ಲೋಕೇಶ್, ಕೃಷ್ಣಮೂರ್ತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

