ತುಮಕೂರು

ನಿರ್ಮಿತಿ ಕೇಂದ್ರಕ್ಕೆ ನೋಟಿಸ್

Published On :

ಕ.ಪ್ರ.ವಾರ್ತೆ ್ಣ ತುಮಕೂರು ್ಣ ಜೂನ್ 28
ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಕಳಪೆಯಾಗಿದ್ದು, ಸರಿಯಾಗಿ ಕ್ಯೂರಿಂಗ್ ಆಗಿಲ್ಲ. ಕೈಯಲ್ಲಿ ಕಾಂಕ್ರಿಟ್ ಮಿಕ್ಸ್ ಮಾಡಲಾಗುತ್ತಿದೆ ಎಂದು ತುಮಕೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜೆಡಿಎಸ್‌ನ ಎಚ್. ಆರ್. ಹನುಮಂತರಾಯಪ್ಪ ಆರೋಪಿಸಿದರು.
ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಘಟಕಕ್ಕೆ ಈಗಾಗಲೇ 1 ಕೋಟಿ ವೆಚ್ಚ ಮಾಡಿದ್ದು, ಮತ್ತೆ ಒಂದೂವರೆ ಕೋಟಿ ಖರ್ಚಾಗುತ್ತಿದೆ ಎನ್ನುತ್ತಿದ್ದೀರಿ. ಸರ್ಕಾರದ ನಿರ್ಮಿತಿ ಕೇಂದ್ರವೇ ಕಾಮಗಾರಿ ನಡೆಸುತ್ತಿದ್ದು, ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾದಂತೆ ಕಾಮಗಾರಿ ಸ್ಥಿತಿಯಿದೆ. ಮೇಯರ್ ಸ್ಥಳ ಪರಿಶೀಲಿಸಿದ್ದು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಮೇಯರ್ 3 ನೇ ಪಾರ್ಟಿ ಪರಿಶೀಲನೆ ಬಳಿಕ ಹಣ ಬಿಡುಗಡೆ ಮಾಡಲಾಗುವುದು ಎಂದರು. ಸದಸ್ಯ ಡೆಲ್ಟಾರವಿ 3 ನೇ ಪಾರ್ಟಿ ಪರಿಶೀಲನೆಯೇ ಪಾಲಿಕೆಯಲ್ಲಿ ಸರಿಯಿಲ್ಲ. ಅಧಿಕಾರಿಗಳೇ ದುಡ್ಡು ಕೊಟ್ಟು ಸರಿಯಿದೆ ಎಂದು ಬರೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಈ ವೇಳೆ ಸದಸ್ಯರು ಪಕ್ಷಾತೀತವಾಗಿ ಕ್ವಾಲಿಟಿ ಕಂಟ್ರೋಲ್‌ನಿಂದ ಚೆಕ್ ಮಾಡಿಸಿ ಕಳಪೆ ಕಾಮಗಾರಿಯನ್ನು ಸರಿಪಡಿಸಬೇಕು ಎಂದು ಒಕ್ಕೂರಲಿನಿಂದ ಒತ್ತಾಯಿಸಿದರು. ಈ ಸಂಬಂಧ ಗುತ್ತಿಗೆದಾರರಾದ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ನೀಡುವಂತೆ ನಿರ್ಣಯ ಕೈಗೊಂಡರು.
ಸದಸ್ಯ ಬಾಲಕೃಷ್ಣ ಮಾತನಾಡಿ, ಶೇ.1 ರ ಕ್ರೀಡಾನಿಧಿಯಲ್ಲಿ 2010-12 ನೇ ಸಾಲಿನಲ್ಲಿ ಸಾಲಿನಲ್ಲಿ ಸದಸ್ಯರಿಗೆ ಮತ್ತು ಸಿಬ್ಬಂದಿಗಾಗಿ 3 ಲಕ್ಷ ವೆಚ್ಚದಲ್ಲಿ ಕ್ರೀಡಾ ಸಾಮಾಗ್ರಿ ಖರೀದಿಸಲಾಗಿದೆ. ಮೇಯರ್ ಜತೆಯಲ್ಲಿ ಉಗ್ರಾಣಕ್ಕೆ ಭೇಟಿ ನೀಡಿದಾಗ ಟೆಂಡರ್‌ನಲ್ಲಿ ನಮೂದಿಸಿರುವಷ್ಟು ಕ್ರೀಡಾ ಸಾಮಾಗ್ರಿಗಳೇ ಇಲ್ಲದಿರುವುದು ಪತ್ತೆಯಾಗಿದೆ. ಎರಡು ಟೆನಿಸ್‌ಬಾಲ್, 30-40 ಕ್ರಿಕೆಟ್ ಬ್ಯಾಟ್, ವಿಕೆಟ್ ಖರೀದಿಗೆ ಲಕ್ಷಗಟ್ಟಲೇ ವೆಚ್ಚವಾಯಿತೆಂದರೆ ಅಚ್ಚರಿಯಾಗುತ್ತದೆ. ಟೆನ್ನಿಸ್ ಬಾಲ್ ಆಟಕ್ಕೆ ಸೇಪ್ಟಿ ಪ್ಯಾಡ್ ಖರೀದಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿ ಕೊಡುತ್ತದೆಯೆಂದರು. ವಿಪಕ್ಷ ನಾಯಕ ಹನುಮಂತರಾಯಪ್ಪ, ಸದಸ್ಯರಾದ ನಾಗರಾಜು, ಕರುಣಾರಾಧ್ಯ, ಮಹೇಶ್, ನಾಗರಾಜರಾವ್ ಪಟೇಲ್, ಸುಧೀಶ್ವರ್ ಸೇರಿ ಹಲವರು ಬಾಲಕೃಷ್ಣ  ಆರೋಪಕ್ಕೆ ದನಿಗೂಡಿಸಿದರು. ಈ ವೇಳೆ ಮೇಯರ್ ಸಹ ತಾವೂ ಭೇಟಿ ನೀಡಿದ ಸಂದರ್ಭದಲ್ಲಿ ಕ್ರೀಡಾ ಸಾಮಾಗ್ರಿಗಳು ಕೆಲವು ನಾಪತ್ತೆಯಾಗಿದ್ದನ್ನು ಕಂಡಿದ್ದಾಗಿ ಸಭೆಗೆ ಹೇಳಿದಾಗ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಂಡಿರುವಿರಿ ಎಂದು ಸದಸ್ಯರು ಆವೇಶಭರಿತರಾಗಿ ಪ್ರಶ್ನಿಸಿದರು. ಆಯುಕ್ತರಿಗೆ ತನಿಖೆಗೆ ಸೂಚಿಸಿರುವುದಾಗಿ ಮೇಯರ್ ಉತ್ತರಿಸಿದರು.
ಉಗ್ರಾಣದ ಸಿಬ್ಬಂದಿ ಲೋಕನಾಥ್ ಸಭೆಗೆ ಉತ್ತರಿಸಿ 46 ಕ್ರಿಕೆಟ್ ಬ್ಯಾಟ್‌ಗಳು, 200 ಕ್ಕೂ ಹೆಚ್ಚುವಿಕೆಟ್‌ಗಳು ಟೆನ್ನಿಸ್ ಸಾಮಾಗ್ರಿಗಳು ಉಗ್ರಾಣದಲ್ಲೇ ಇದ್ದು, ಕೆಲವು ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡರು. ಸದಸ್ಯ ಸುಧೀಶ್ವರ್ ಮಾತನಾಡಿ, ಸಿಬ್ಬಂದಿಯಾದ ಶಿವಪ್ರಸಾದ್, ಲೋಕನಾಥ್, ಶ್ರೀನಿವಾಸ್ ಹಾಗೂ ಕುಮಾರ್ ಅವರುಗಳ ಮೇಲೆ ಬರೀ ಕ್ರೀಡಾ ಸಾಮಾಗ್ರಿ ಅವ್ಯವಹಾರ ಆರೋಪ ಮಾತ್ರವಿಲ್ಲ. ಎಸ್‌ಜಿಎಸ್‌ಆರ್‌ವೈ ಶಾಖೆಯಲ್ಲಿ ವಿವಿಧ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಿಸಲು ಕಮೀಷನ್ ಪಡೆದಿರುವುದು, 18 ವರ್ಷಗಳಿಂದ ಪಾಲಿಕೆಯಲ್ಲೇ ಬೇರೂರಿರುವುದು, ಸಾಮಾಗ್ರಿ ಖರೀದಿಯಲ್ಲಿ ಅವ್ಯವಹಾರದ ಆರೋಪಗಳಿದೆ. ಇವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಸದಸ್ಯರು ಸಹಿ ಹಾಕಿ ಪತ್ರ ನೀಡಿದ್ದು ಮೇಯರ್ ಟಿಪ್ಪಣಿ ನೀಡಿ ಆಯುಕ್ತರಿಗೆ ಕಳುಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಯರ್, ಆಯುಕ್ತರು ಕ್ರಮತೆಗೆದುಕೊಳ್ಳದೇ ಮೌನ ವಹಿಸಿರುವುದನ್ನು ನೋಡಿದರೆ ಅಧಿಕಾರಿಗಳಿಂದ ಹಪ್ತಾ ಪಡೆಯುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದಿದ್ದರೆ ನೀವೇಕೆ ಆ ಸ್ಥಾನದಲ್ಲಿ ಕುಳಿತಿರುವಿರಿ. ಮೇಯರ್ ಗೌನ್ ತೆಗೆದು ಹೊರಬನ್ನಿಯೆಂದು ಸವಾಲೆಸೆದರು.
ಈ ವೇಳೆ ಮೇಯರ್ ಮತ್ತು ಆಯುಕ್ತ ಅರ್ಷಾದ್ ಷರೀಪ್ ಸದರಿ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದಾಗ ತೃಪ್ತರಾಗದ ಸದಸ್ಯರು ಕೂಡಲೇ ಅಮಾನತುಗೊಳಿಸಿ. ಇಲ್ಲವಾದಲ್ಲಿ ನಾವೇ ಸಭೆಯಿಂದ ಹೊರನಡೆಯುತ್ತೇವೆ ಎಂದರು. ಮಧ್ಯಪ್ರವೇಶಿಸಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮೇಲ್ನೋಟಕ್ಕೆ ಆರೋಪ ರುಜುವಾತಾಗುವಂತಿದ್ದು, ಸದಸ್ಯರ ಬೇಡಿಕೆ ನ್ಯಾಯಯುತವಾಗಿದೆ. ಮೇಯರ್ ಮತ್ತು ಆಯುಕ್ತರು ಸಿಬ್ಬಂದಿ ವಿರುದ್ಧ ಕೈಗೊಳ್ಳುವ ಕ್ರಮಕ್ಕೆ ತಮ್ಮ ಸಹಮತವಿದೆಯೆಂದರು. ಮೇಯರ್ 5 ನಿಮಿಷ ಕಾಲಾವಕಾಶ ಕೇಳಿ ಸದರಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸುವುದಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಪ್ರಕಟಿಸಿದರು. ಇದಕ್ಕೆ ಸದಸ್ಯ ಸುಧೀಶ್ವರ್ ಡಿಸಿಯವರಿಗೆ ಏಕೆ ಬರೆಯುತ್ತೀರಿ ನೀವೇ ಕ್ರಮ ಕೈಗೊಳ್ಳಿ. ಅಮಾನತುಗೊಳಿಸಿ ಇಲ್ಲವೇ ವರ್ಗಾವಣೆ ಮಾಡಿ ಎಂದರು. ಆಯುಕ್ತರು ಉತ್ತರಿಸಿ ಆರೋಪಕ್ಕೆ ಗುರಿಯಾಗಿರುವ ನಾಲ್ವರು ಸಿಬ್ಬಂದಿ ಸಿ ಗ್ರೂಪ್ ನೌಕರರಾಗಿರುವುದರಿಂದ ನಾವು ಕ್ರಮ ತೆಗೆದುಕೊಳ್ಳಲು ಅಧಿಕಾರವಿಲ್ಲವೆಂದು ಸ್ಪಷ್ಟಪಡಿಸಿದರು. ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, 10-12 ವರ್ಷಗಳಿಂದ ಪಾಲಿಕೆಯಲ್ಲಿ ಬೇರೂರಿರುವ ಸಿಬ್ಬಂದಿ ಸಾಮೂಹಿಕ ವರ್ಗಾವಣೆಗೆ ಸರ್ಕಾರಕ್ಕೆ ತಿಳಿಸಿದ್ದು, ತಿಂಗಳೊಳಗೆ ಬದಲಾವಣೆಯಾಗಲಿದೆ. ಪಾಲಿಕೆಗೆ ಅಗತ್ಯವಾದ ಹೆಚ್ಚುವರಿ ಸಿಬ್ಬಂದಿಯೂ ನೇಮಕವಾಗಲಿದ್ದಾರೆ ಎಂದು ಸದಸ್ಯರನ್ನು ಸಮಾಧಾನಗೊಳಿಸಲೆತ್ನಿಸಿದರು. ಅಮಾನತ್ತಿನ ನಿರ್ಣಯವನ್ನು ಸಭೆಯಲ್ಲಿ ಬರೆಸಿ ಓದಿದ ಬಳಿಕ ಸದಸ್ಯರು ಶಾಂತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.