ತುಮಕೂರು

ಚರಂಡಿ ಸ್ವಚ್ಚತೆ ಮೂಲಕ ಗ್ರಾಪಂ ಮಾಜಿ ಅಧ್ಯಕ್ಷೆ ನೇತೃತ್ವದಲ್ಲಿ ಪ್ರತಿಭಟನೆ

Published On :

ಶಿರಾ: ಮಲೇರಿಯಾ ರೋಗ ಭೀತಿಯಿಂದ ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸಿ ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಗಮನಹರಿಸದ ಪಂಚಾಯತಿ ಅಧಿಕಾರಿಗಳ ವಿರುದ್ಧ ಗ್ರಾಪಂ ಮಾಜಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ  ಚರಂಡಿ ಸ್ವಚ್ಚತೆ ಮಾಡುವ ಮೂಲಕ ಪ್ರತಿಭಟಿಸಿದರು. ತಾಲೂಕಿನ ಗುಂಡಪ್ಪ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಹಲವಾರು ದಿನಗಳಿಂದ ಕೊಳಚೆ ನೀರು ಚರಂಡಿಗಳಲ್ಲಿ ಸಂಗ್ರಹವಾಗಿದ್ದು, ಸೊಳ್ಳೆಗಳ ಕೇಂದ್ರವಾಗಿದೆ. ಅಲ್ಲದೆ ಊರ ತುಂಬಾ ಕೆಟ್ಟವಾಸನೆ ಬರುತ್ತಿದ್ದು, ಜನಸಾಮಾನ್ಯರಿಗೆ ತುಂಬ ಕಿರಿ ಕಿರಿಯಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರನ್ನು ಕೇಳಿದರೆ ಕ್ಯಾರೆ ಎನ್ನುವುದಿಲ್ಲ ಎಂಬುದು ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಕ್ಕ ಮತ್ತು ಉಪಾಧ್ಯಕ್ಷ ತಿಪ್ಪೇಸ್ವಾಮಿ ಆರೋಪವಾಗಿದೆ. ಆದ್ದರಿಂದ ಗ್ರಾಮದಲ್ಲಿ ಜನಪ್ರತಿನಿಧಿಗಳಾದ ನಾವುಗಳೇ ಸ್ವಚ್ಛತೆ ಮಾಡುವ ಮೂಲಕ ಪ್ರತಿಭಟಿಸುತ್ತಿರುವುದಾಗಿ ತಿಳಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೌಕರ್ಯಗಳಾದ ಕುಡಿಯುವ ನೀರು ಮತ್ತು ಸ್ವಚ್ಛತೆ ಕಾರ್ಯಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು, ಕಳೆದ ಎಂಟು ತಿಂಗಳಿಂದ ಜಾಡ್‌ಮಾಲಿಗಳಿಗೆ ಸಂಬಳ ನೀಡಿಲ್ಲ. ಹಾಗಾದರೆ ಈ ಅನುದಾನದ ಹಣ ಎಲ್ಲಿಗೂ ಹೋಯಿತು ಎಂಬುದು ಪ್ರತಿಭಟನಾಕಾರರ ಪ್ರಶ್ನೆ. ಗ್ರಾಮದ ಸ್ವಚ್ಛತಾ ಕಾರ್ಯದ ಸಿಬ್ಬಂದಿ ಸಂಬಳ ಇಲ್ಲದೆ ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿರುವುದರಿಂದ  ಸ್ವಚ್ಚತಾ ಕಾರ್ಯದ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಉದ್ಯೋಗ ಖಾತ್ರಿಯೋಜನೆ ಕಾಮಗಾರಿಗಳ ಅನುಷ್ಟಾನದಲ್ಲಿ ನಿರತರಾಗಿರುವ ಪಂಚಾಯತಿ ಪಿಡಿಓ ಕಚೇರಿಗೆ ಆಗಮಿಸುವುದೆ ತುಂಬ ವಿರಳ. ಇಂತಹ ಬೇಜವಾಬ್ದಾರಿ ಅಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬೇರೆ ಅಧಿಕಾರಿ ನೇಮಿಸುವಂತೆ ಜಿಪಂ ಕಾರ್ಯನಿರ್ವಾಹಣಾಧಿಕಾರಿಗೆ ಒತ್ತಾಯ ಪಡಿಸಿದ್ದಾರೆ. ದೇವರಾಜು, ಗುಣ್ಣಯ್ಯ, ಹೆಂಜಾರಪ್ಪ, ಮಹಾಲಿಂಗಪ್ಪ, ನಾರಯಣಪ್ಪ, ಲತಮ್ಮ, ರಾಜಮ್ಮ, ರಂಗಯ್ಯ, ಗಿರೀಶ, ಹನುಮಂತ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.