ನಿಸ್ವಾರ್ಥ ಸೇವೆ ಸಲ್ಲಿಸಿ: ದಲಿತ ಮುಖಂಡರಿಗೆ ಕರೆ
ತುಮಕೂರು: ನೊಂದವರಿಗೆ, ನಿಸ್ವಾರ್ಥ ಸೇವೆ ಸಲ್ಲಿಸಲು ದಲಿತ ಮುಖಂಡರಿಗೆ ಜಿಪಂ ಸದಸ್ಯ ನಾರಾಯಣಮೂರ್ತಿ ಕರೆ ನೀಡಿದರು. ಅವರು ಗೂಳೂರು ಹೊರವಲಯದ ಶೂಲದ ಹನುಮಂತರಾಯಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಹೋರಾಟಗಾರ ಲಿಂಗಿಕಟ್ಟೆ ಗಂಗಯ್ಯ ಹಾಗೂ ಕಲಾವಿದ ಎಲ್.ಡಿ. ಮರಿಯಪ್ಪನವರಿಗೆ ಬಾಬಾ ಅಂಬೇಡ್ಕರ್, ಜಗಜೀವನರಾಂ ಜನಜಾಗೃತಿ ಸಮಿತಿಯಿಂದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ದಲಿತರು ಸಾವಿರಾರು ಎಕರೆ ಭೂಮಿಯಿಂದ ವಂಚಿತರಾಗಿದ್ದಾರೆ. ಸರ್ಕಾರಗಳು ಸಮುದಾಯದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರು. ವ್ಯಯ ಮಾಡಿದರೂ ದಲಿತರಿಗೆ ಭೂಮಿ ಕೊಡುವ ನಿರ್ಧಾರದಿಂದ ಹಿಂದೆ ಸರಿದಿರುವುದು ವಿಷಾದನೀಯ ಎಂದರು.
1979 ರ ಯಾವುದೇ ಸರ್ಕಾರಗಳು ಭೂ ರಹಿತ ದಲಿತರಿಗೆ ಸಮಗ್ರವಾಗಿ ಭೂಮಿಯನ್ನು ನೀಡಿಲ್ಲ. ಭೂ ರಹಿತ ದಲಿತ ಕುಟುಂಬಗಳಿಗೆ ಸಮಗ್ರವಾಗಿ ಸರ್ಕಾರದ ಜಮೀನು ಹಂಚುವ ನಿರ್ಧಾರ ಬಿ. ಬಸವಲಿಂಗಪ್ಪನವರದು ದಿಟ್ಟ ನಿರ್ಧಾರವೆಂದು ಸ್ಮರಿಸಿದರು.
ನಂತರ ಗಂಗಯ್ಯ ಹಾಗೂ ಎಲ್.ಡಿ. ಮರಿಯಪ್ಪ ಅವರಿಗೆ ಅಂಬೇಡ್ಕರ್ ಹಾಗೂ ನಾಟ್ಯ ನಟರಾಜನ ವಿಗ್ರಹ ನೀಡಿ ಗೌರವಿಸಿದರು. ನಗರಸಭೆ ಮಾಜಿ ಸದಸ್ಯ ಅಂಜನಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಮುಖಂಡ ರಂಗಸ್ವಾಮಯ್ಯ, ಗಂಗಹನುಮಯ್ಯ, ಪುಟ್ಟರಾಜು ಸ್ವಾಮಿ ಮಾತನಾಡಿದರು. ಕೆ.ವಿ. ಶ್ರೀನಿವಾಸ ಕಲ್ಕೆರೆ ಸ್ವಾಗತಿಸಿ ಸಿ. ಜಯಣ್ಣ ನಿರೂಪಿಸಿದರು. ಎ. ರಂಜನ್ ವಂದಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಭೂ ಹೋರಾಟಗಾರ ನಿಂಗಿಕಟ್ಟೆ ಗಂಗಯ್ಯ ಮಾತನಾಡಿ ಸರ್ಕಾರ 1952 ರ ಜಿಎಂಎಫ್ ಯೋಜನೆಯಡಿ ಹಾಗೂ 1979 ರ ದರಖಾಸ್ತು ಯೋಜನೆಯಲ್ಲಿ ಕಾವಲ್ಗಳಲ್ಲಿ, ಸರ್ಕಾರಿ ಜಮೀನುಗಳಲ್ಲಿ ಸರ್ಕಾರ ಕೊಟ್ಟ ಶೇ. 90 ರಷ್ಟು ಸಾವಿರಾರು ಎಕರೆ ಭೂಮಿ ದಲಿತರ ಭೂಮಿಗಳಾಗಿದ್ದು ಅವುಗಳು ಇಂದು ಅಕ್ರಮವಾಗಿ ಹಸ್ತಾಂತರಗೊಂಡಿವೆ ಎಂದರು.
ಅವುಗಳನ್ನು ಕಾನೂನು ಹೋರಾಟದ ಮೂಲಕ ದಲಿತರು ಮತ್ತೆ ಪಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ 1979 ರ ಪಿಟಿಸಿಎಲ್ ಕಾಯ್ದೆಯನ್ನು ದಲಿತರು ಸಮರ್ಪಕವಾಗಿ ಬಳಸಿಕೊಂಡು ಭೂಮಿ ಪಡೆಯುವ ಹೋರಾಟ ರೂಪಿಸಬೇಕು. ಭೂಮಿಗಾಗಿ ಹೋರಾಟ ಮಾಡುವಾಗ ಕಾನೂನಿನ ಅರಿವಿರಬೇಕು ಎಂದು ತಿಳಿಸಿದರು.
ಇಂದಿನ ಹಲವು ಅರಿವುಗೇಡಿ ಮುಖಂಡರು ಅಧಿಕಾರಿಗಳೊಂದಿಗೆ ಶಾಮೀಲಾಗಿ ದಲಿತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿಯೂ ದಲಿತರ ಭೂ ಸಮಸ್ಯೆಗಳಿವೆ. ದರಖಾಸ್ತು ಭೂಮಿ, ಇನಾಂ ಭೂಮಿಗಳಿಗೆ ನಿಸ್ವಾರ್ಥ ಹೋರಾಟಗಾರರ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಭೂ ಹೋರಾಟದ ಹಾದಿಯಲ್ಲಿ ಎದುರಾಗುವ ದಲಿತರ ನಿರಾಸಕ್ತಿ, ಅಧಿಕಾರಿಗಳ ನಿರ್ಲಕ್ಷ್ಯ, ಭೂ ಮಾಲೀಕರ ಬೆದರಿಕೆಗಳು, ಕಾನೂನಿನ ಅಡ್ಡಿ, ಆತಂಕಗಳನ್ನು ಎಳೆಎಳೆಯಾಗಿ ವಿವರಿಸಿದರು. ದಲಿತರಿಗೆ ಇಂದು ಬದುಕಲು ವಿದ್ಯೆ ಮತ್ತು ಭೂಮಿಯ ಅಗತ್ಯತೆಯನ್ನು ಒತ್ತಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

