ತುಮಕೂರು

ಬಿಸಿಯೂಟದಲ್ಲಿ ಭ್ರಷ್ಟಾಚಾರ, ಶಿಕ್ಷಕರ ಗುಂಪುಗಾರಿಕೆಗೆ ಆಕ್ರೋಶ

Published On :

ಪಾವಗಡ: ಬಿಸಿಯೂಟದ ಅಡಿಗೆ ತಯಾರಿಕೆಯಲ್ಲಿ ಭ್ರಷ್ಟಾಚಾರ ಹಾಗೂ ಶಾಲೆಯಲ್ಲಿ ಶಿಕ್ಷಕರ ಗುಂಪುಗಾರಿಕೆ ವಿರೋಧಿಸಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ತಾ.ದೇವರಬೆಟ್ಟ ಗ್ರಾಮದಲ್ಲಿ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಪಂ ಸದಸ್ಯ ಭೀಮಯ್ಯ ಮಾತನಾಡಿ, ಗ್ರಾಮದ ಎಇಪಿಎಸ್ ಶಾಲೆಯಲ್ಲಿ ಬಹುತೇಕ ಎಸ್‌ಸಿ ವರ್ಗಕ್ಕೆ ಸೇರಿದ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಯಲ್ಲಿ ಶಿಕ್ಷಕರು ಗುಂಪುಗಾರಿಕೆ ಮತ್ತು ನಿತ್ಯ ಜಗಳವಾಡುವುದರಿಂದ ಮಕ್ಕಳಿಗೆ ವಿದ್ಯೆ ಬೋಧನೆ ಸರಿಯಾಗಿ ನಡೆಯುತ್ತಿಲ್ಲ. ಶಾಲೆಯಲ್ಲಿ ಕಾಲಹರಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮಕ್ಕಳಿಗೆ ದ್ರೋಹ ಬಗೆಯುವ ಮೂಲಕ ಬಿಸಿಯೂಟದ ಅಡಿಗೆ ಸಹಾಯಕಿಯರ ಶಾಲೆಯ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರು ಅಕ್ಕಿ ಎಣ್ಣೆ ಸೇರಿದಂತೆ ಬಿಸಿಯೂಟದ ಆಹಾರ ಪದಾರ್ಥಗಳನ್ನು ಕದಿಯುವುದರಲ್ಲಿ ನಿರತರಾಗಿ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗುತ್ತಿದ್ದಾರೆಂದು ದೂರಿದರು.
ಗ್ರಾಮದ ಮೇಲ್ವರ್ಗಕ್ಕೆ ಸೇರಿದ ಮಕ್ಕಳು ಪಟ್ಟಣದ ಶಾಲೆಗಳಿಗೆ ತೆರಳುತ್ತಿದ್ದು ಶಿಕ್ಷಕರ ನಿತ್ಯ ಜಗಳದಿಂದ ಎಸ್‌ಸಿ ವರ್ಗಕ್ಕೆ ಸೇರಿದ ಶೇ.80ರಷ್ಟು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಶಾಲೆಯಲ್ಲಿ ತೊಂದರೆ ಆಗುತ್ತಿದೆ ಎಂದರು. ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರನ್ನು ವರ್ಗಾಯಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿ ಎಂದು ಸಂಬಂಧಪಟ್ಟವರಲ್ಲಿ ಮನವಿ ಮಾಡಿದರು.
ಅನುದಾನ ದುರುಪಯೋಗ: ಎಸ್‌ಡಿಎಂಸಿ ಸದಸ್ಯ ಡಿ.ಎನ್. ಶಿವಲಿಂಗಪ್ಪ ಮಾತನಾಡಿ ಶಾಲಾ ಅಭಿವೃದ್ಧಿಯ ಸರ್ಕಾರದ ಅನುದಾನ ದುರುಪಯೋಗ ಸೇರಿದಂತೆ ಶಾಲಾ ಅವರಣದಲ್ಲಿರುವ ಗಿಡಮರಗಳನ್ನು ಕಡಿದು ಮನೆಗೆ ಸಾಗಿಸುವುದರಲ್ಲಿ ಮುಖ್ಯೋಪಾಧ್ಯಾಯರು ನಿರತರಾಗಿದ್ದಾರೆಂದು ಆರೋಪಿಸಿದರು.
ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಅಡಿಗೆ ಸಹಾಯಕಿಯನ್ನು ಕೂಡಲೇ ವರ್ಗಾವಣೆ ಮಾಡಿ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಒತ್ತಾಯಿಸಿದರು. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟ ಶಿಕ್ಷಣ ಇಲಾಖೆಯ ಬಿಆರ್‌ಸಿ ಮೋಹನ್‌ಕುಮಾರ್ ಸಮಸ್ಯೆ ಪರಿಶೀಲಿಸಿ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಮುಖಂಡರಾದ ರಾಮಕೃಷ್ಣಪ್ಪ, ಡಿ.ಆರ್. ನಾಗರಾಜು, ಶಿವಣ್ಣ, ರಾಮಾಂಜಿನಪ್ಪ, ಬಿ. ಹನುಮಂತರಾಯ,ದಾಸಪ್ಪ, ಯಶೋದಮ್ಮ ಟಿ.ಹನುಮಂತಯ್ಯ, ಟಿ. ಓಬಳೇಶ್, ಡಿ.ಎ.ಶಿವು ಸೇರಿದಂತೆ ಗ್ರಾಮದ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.