ಅರ್ಥವಿಲ್ಲದ ಸಂಪ್ರದಾಯ ಪ್ರಶ್ನಿಸಿದ ಕೊಡಗಿನ ಗೌರಮ್ಮ
ತುಮಕೂರು: ಅರ್ಥವಿಲ್ಲದ ಸಂಪ್ರದಾಯವನ್ನು ಕಥೆಗಾರ್ತಿ ಗೌರಮ್ಮ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಶ್ನಿಸುವುದರ ಮೂಲಕ, ವೈಚಾರಿಕತೆಯನ್ನು ಎತ್ತಿಹಿಡಿದಿದ್ದರು ಎಂದು ಹಂಪಿ ಕನ್ನಡ ವಿವಿಯ ಗ್ರಂಥಪಾಲಕಿ ಹಾಗೂ ಸಾಹಿತಿ ಎಚ್. ನಾಗವೇಣಿ ಅಭಿಪ್ರಾಯಪಟ್ಟರು.
ಅವರು ತುಮಕೂರು ವಿವಿಯಲ್ಲಿ ನಡೆದ ಸಾಹಿತ್ಯ ಅಕಾಡಮಿ, ತುಮಕೂರು ವಿವಿ ವಿಜ್ಞಾನ ಕಾಲೇಜು ಕನ್ನಡ ವಿಭಾಗ ಹಾಗೂ ಆವಿಷ್ಕಾರ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ ಕೊಡಗಿನ ಗೌರಮ್ಮನವರ ಜೀವನ ಹಾಗೂ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಆಧುನಿಕ ಶಿಕ್ಷಣವನ್ನು ಪಡೆದ ಕೊಡಗಿನ ಗೌರಮ್ಮ ಇಂಗ್ಲಿಷ್ ಭಾಷೆಯ ಆಧುನಿಕ ಸಾಹಿತ್ಯ ಹಾಗೂ ಆಧುನಿಕ ವಿಚಾರಧಾರೆಗೆ ತೆರೆದುಕೊಂಡರು. ಹಾಗಾಗಿ ಅವರಲ್ಲಿ ಕಥೆಗಳಲ್ಲಿ ಪ್ರಗತಿಶೀಲ ಧೋರಣೆ ಕಾಣಬಹುದು. ಅವರು ತಮ್ಮ ಕಥೆಗಳ ಮೂಲಕ ವಿಧವಾ ವಿವಾಹದ ಪರವಾಗಿ ಭಾವನೆ ಹುಟ್ಟುವಂತೆ ಮಾಡಿದರು. ಅಂದಿಗೆ ದೊಡ್ಡ ಪ್ರಶ್ನೆಯಾಗಿದ್ದ ಮತಾಂತರದಂತಹ ಸೂಕ್ಷ್ಮ ಸಮಸ್ಯೆಯನ್ನೂ ತೆಗೆದುಕೊಂಡು ಮತಾಂಧತೆಯ ಭಾವನೆಯನ್ನು ಮೀರಿದರು. ಹಿಂದೂ ಸಂಪ್ರದಾಯ ಮನೋಭಾವವನ್ನೇ ಪ್ರಶ್ನಿಸಿದರು ಎಂದು ತಿಳಿಸಿದರು.
ಕೊಡಗಿನ ಗೌರಮ್ಮನವರು ಸ್ತ್ರೀಪರ ವಿಚಾರ ಹೊಂದಿದ್ದರು. ಆದರೆ ಸ್ತ್ರೀವಾದಿಯಾಗಿರಲಿಲ್ಲ. ಏಕೆಂದರೆ
ಪ್ರತ್ಯೇಕವಾಗಿ ಸ್ತ್ರೀವಾದದ ಮೇಲೆ ನಂಬಿಕೆಯಿಲ್ಲ ಎಂದಿದ್ದರು. ಆದರೆ ಗೌರಮ್ಮನವರ ಕಾಲದ ಸಮಸ್ಯೆಗಳು ಇಂದೂ ಮುಂದುವರೆಯುತ್ತಿರುವುದರಿಂದ ಅವರು ಇಂದಿಗೂ ಹೆಚ್ಚು ಪ್ರಸ್ತುತವಾಗುತ್ತಾರೆ ಎಂದರು.
ಇತಿಹಾಸದಲ್ಲಿ ಮರೆಮಾಚಿ ಹೋಗಿದ್ದ ಕೊಡಗಿನ ಗೌರಮ್ಮ ನವರ ಸಂಶೋಧನೆ ಮಾಡಿ ಹೊರಜಗತ್ತಿಗೆ ತಿಳಿಸುವ ಪ್ರಯತ್ನವನ್ನು ತಾವು ಸಂಶೋಧನೆ ಮೂಲಕ ಮಾಡಿದ್ದಾಗಿಯೂ ತಿಳಿಸಿದರು.
ದೇಶಸೇವೆಗೆ ಒಡವೆ ದಾನ: ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ಕೊಡಗಿಗೆ ಬಂದ ವೇಳೆ ಮೇಲ್ವರ್ಗದವರ ಮನೆಯಲ್ಲಿ ಉಳಿದುಕೊಂಡ ಸಂದರ್ಭದಲ್ಲಿ ತಮ್ಮ ಮನೆಗೂ ಬರಬೇಕೆಂದು ಕೊಡಗಿನ ಗೌರಮ್ಮ ಉಪವಾಸ ಕುಳಿತು ಕೊಳ್ಳುತ್ತಾರೆ. ಆಗ ಗಾಂಧೀಜಿಯವರು ಅವರ ಮನೆಗೆ ಬರುತ್ತಾರೆ. ಆಗ ಚಿನ್ನದ ಒಡವೆಗಳನ್ನು ಗಂಡನ ಒಪ್ಪಿಗೆ ಪಡೆದುಕೊಡಗಿನ ಗೌರಮ್ಮನವರು ರಾಷ್ಟ್ರಸೇವೆಗೆಂದು ತಿಳಿಸಿ ಗಾಂಧೀಜಿಯವರಿಗೆ ನೀಡುತ್ತಾರೆ. ಇದನ್ನು ಗಾಂಧಿಯವರು ಹರಿಜನ ಪತ್ರಿಕೆಯಲ್ಲಿ ದಾಖಲಿಸುತ್ತಾರೆ. ಇಂತಹ ಉದಾತ್ತ ಗುಣಗಳಿದ್ದ ಕೊಡಗಿನ ಗೌರಮ್ಮ ಆದರ್ಶ ಮಹಿಳೆ ಎಂದು ನಾಗವೇಣಿ ತಿಳಿಸಿದರು.
ಅಧ್ಯಯನ ಅಗತ್ಯ: ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಮಾತನಾಡಿ, ಇಂದಿನ ಬಹುರಾಷ್ಟ್ರೀಯ ಕಂಪೆನಿಗಳ ದಾಳಿಯಲ್ಲಿ ಸಂಸ್ಕೃತಿ ನಲುಗುತ್ತಿರುವ ಸಮಯದಲ್ಲಿ ಕೊಡಗಿನ ಗೌರಮ್ಮನವರ ಕಥೆಗಳ ಅಧ್ಯಯನ ಅತ್ಯಗತ್ಯ. ಅವರ ಕಥೆಗಳಿಂದ ಒಳ್ಳೆಯ ಸಂಸ್ಕೃತಿಯೆಡೆ ಆಕರ್ಷಣೆ ಬೆಳೆಯುತ್ತದೆ. ಇಂತಹ ವಿಚಾರ ಸಂಕಿರಣಗಳು ಕೊಡಗಿನ ಗೌರಮ್ಮನವರ ಕಥೆಗಳ ಮರು ಓದಿಗೆ ಸ್ಫೂರ್ತಿ ನೀಡಲಿ ಎಂದು ಆಶಿಸಿದರು.
ಮಾನವತಾವಾದಿ: ಆವಿಷ್ಕಾರ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಬಿ. ರವಿ ಮಾತನಾಡಿ, ಯಾವುದೇ ಸಾಹಿತಿಯನ್ನು ಅವರ ಕಾಲಘಟ್ಟದ ಹಿನ್ನೆಲೆಯಲ್ಲಿ ವಿಮರ್ಶಿಸಬೇಕೆ ಹೊರತು ಇಂದಿನ ಕಾಲದ ನೆಲೆಗಟ್ಟಿನಲ್ಲಲ್ಲ ಎಂದರು. ನಮ್ಮ ದೇಶದಲ್ಲಿ ರವೀಂದ್ರನಾಥ್ ಠಾಗೂರ್, ಶರತ್ಚಂದ್ರ ಚಟರ್ಜಿ ತಮ್ಮ ಸಾಹಿತ್ಯದಲ್ಲಿ ಮಾನವತಾವಾದವನ್ನು ಪ್ರತಿಬಿಂಬಿಸಿದರು. ಈ ಹಿನ್ನೆಲೆಯಲ್ಲಿ ನೋಡಿದಾಗ ಕೊಡಗಿನ ಗೌರಮ್ಮ ಮಾನವತಾವಾದಿ ಮೌಲ್ಯಗಳನ್ನು ಪ್ರತಿಬಿಂಬಿಸಿದರು.
ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಈಶ್ವರ್ ಎ.ಎಚ್. ಕೊಡಗಿನ ಗೌರಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಾಗಭೂಷಣ ಬಗ್ಗನಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣಿ, ಆವಿಷ್ಕಾರ ತುಮಕೂರು ಜಿಲ್ಲೆಯ ಅಧ್ಯಕ್ಷರಾದ ಎಸ್.ಎನ್. ಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

