ಚರಿತ್ರಾರ್ಹ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ
-ಅಣೇಕಟ್ಟೆ ಸಿದ್ದರಾಮಣ್ಣ
ಚಿಕ್ಕನಾಯಕಹಳ್ಳಿ: ತಾಲೂಕಿನಲ್ಲಿ ಇತಿಹಾಸ ಹೊಂದಿರುವ ಊರುಗಳ ಸಾಲಿಗೆ ಸೇರುವ ಶೆಟ್ಟೀಕೆರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೌಲಭ್ಯಗಳ ಕೊರತೆ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
ಅಂದಿನ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರಿಂದ 1961ರ ಡಿ.1 ರಂದು ಉದ್ಘಾಟನೆಯಾಗಿರುವ ಆಸ್ಪತ್ರೆ ಸರ್ಕಾರದ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷಕ್ಕೊಳಗಾಗಿದೆ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಪ್ರದೇಶಗಳ ಸ್ಥಾನಪಡೆದಿರುವ ಚಿ.ನಾ.ಹಳ್ಳಿ ತಾಲೂಕು ಬಡತನಕ್ಕೆ ತವರೂರೆಂಬ ಪಟ್ಟಹೊಂದಿದೆ.
ಇಲ್ಲಿನ ಶಾಸಕರು ಮತ್ತು ಸಂಸದರ ಕಾರ್ಯ ವೈಖರಿಯಿಂದ ಬಡತನ ನಿವಾರಣೆ ಮಾಡುವ ತಾಲೂಕಿಗೆ ಯಾವುದೇ ಬೃಹತ್ ಕೈಗಾರಿಕೆಗಳಾಗಲಿ,ಅಥವಾ ಸಾಮಾಜಿಕವಾಗಿ ಪ್ರಗತಿ ಹೊಂದಲು ಮೆಟ್ಟಿಲಾಗುವ ಉನ್ನತ ಶಿಕ್ಷಣ ಸಂಸ್ಥೆಗಳನ್ನಾಗಲಿ ತೆರೆಯುವ ಅಥವಾ ಸ್ಥಾಪಿಸುವ ಉತ್ತಮ ಕಾರ್ಯ ಮಾಡಲಿಲ್ಲ. ಪರಿಣಾಮ ತಾಲೂಕು ಶತಮಾನಗಳಷ್ಟು ಹಿಂದುಳಿಯಲು ಕಾರಣವಾಗಿದೆ.
ಆರೋಗ್ಯ, ಆಹಾರ, ಶಿಕ್ಷಣ ಇವುಗಳನ್ನು ಮೂಲಭೂತ ಹಾಗೂ ಕಡ್ಡಾಯವಾಗಿ ಒದಗಿಸಬೇಕಾದ್ದು ಸರ್ಕಾರದ ಮತ್ತು ಜನರ ಮಧ್ಯೆ ಸೇತುವೆಯಂತೆ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳ ಕರ್ತವ್ಯ. ಆದರೆ ಶಾಸಕರಾಗಲಿ, ಸಂಸದರಾಗಲಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿಲ್ಲ. ಆದ್ದರಿಂದ ತಾಲೂಕು ಈ ಮೇಲಿನ ಮೂರು ಸವಲತ್ತು ಗಳಿಂದ ವಂಚಿತವಾಗಿದೆ.
ಆಸ್ಪತ್ರೆ ಬಗ್ಗೆ ಹೆದರುವಂತಾಗಿದೆ: ಇದಕ್ಕೆ ಸಾಕ್ಷಿ ಎಂಬಂತೆ ಶೆಟ್ಟಿಕೆರೆ ಸರ್ಕಾರಿ ಪ್ರಾಥಮಿಕಆರೋಗ್ಯ ಕೇಂದ್ರ ಸುತ್ತಮುತ್ತಲ 25 ಹಳ್ಳಿಗಳ ಜನರಿಗೆ ಆರೋಗ್ಯ ಕಾಪಾಡುವ ಕೇಂದ್ರಆಗಬೇಕಿತ್ತು.
ಆದರೆ, ಇಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ, ವೈದ್ಯರ ಬೇಜವಾಬ್ದಾರಿಯಿಂದ ರೋಗಿಗಳು ಆಸ್ಪತ್ರೆಗೆ ಬರುವುದಕ್ಕೆ ಹೆದರುವಂತಾಗಿದೆ.
ಇತ್ತೀಚೆಗೆ ಶೆಟ್ಟಿಕೆರೆ ಗ್ರಾಮದ ಶಂಕರ್ ಎಂಬ ವ್ಯಕ್ತಿಗೆ ಹೃದಯಾಘಾತವಾಯಿತು. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿ ವೈದ್ಯರು ಮತ್ತು ಸಿಬ್ಬಂದಿ ಹಾಜರಿರದ ಕಾರಣಕ್ಕೆ ಚಿಕಿತ್ಸೆ ದೊರೆಯದೆ ಆತ ಮೃತಪಟ್ಟಿದ್ದಾನೆ.
ಇದೊಂದು ಉದಾಹರಣೆ ಮಾತ್ರ. ಆದರೆ, ಇಲ್ಲಿನ ಸಿಬ್ಬಂದಿಗೆ ಕರ್ತವ್ಯ ಪರಿವೆಯೇ ಇಲ್ಲವಾಗಿದೆ. ಮಾತ್ರವಲ್ಲ, ಇಲ್ಲಿ ಬೇಕಾಬಿಟ್ಟಿಯಾಗಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ಯಾರು ಕೇಳುವವರಿಲ್ಲವಾಗಿದೆ. ಈ ನಿಟ್ಟಿನಲ್ಲಿ ಇನ್ನು ಮುಂದಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಆಸ್ಪತ್ರೆ ಸಿಬ್ಬಂದಿಗೆ ಹಿಡಿದಿರುವ ನಿರ್ಲಕ್ಷ್ಯ-ಬೇಜವಾಬ್ದಾರಿ ಎಂಬ ಕಾಯಿಲೆಯನ್ನು ವಾಸಿಮಾಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

