ಆದಿಚುಂಚನಗಿರಿ ಜಾತ್ರಾ ಮಹೋತ್ಸವ
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮ್ಮೇಳನದ ನಂತರ ಶ್ರೀಕಾಲಭೈರವೇಶ್ವರ ಪುಷ್ಕರಣಿಯಲ್ಲಿ ಏರ್ಪಡಿಸಿದ್ದ ತೆಪ್ಪೋತ್ಸವವನ್ನು ಅಪಾರ ಸಂಖ್ಯೆಯ ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು. ಇದೇ ವೇಳೆ ಸಂಗೀತ ನೃತ್ಯ ಕಾರಂಜಿ ವ್ಯವಸ್ಥೆ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಆದಿಚುಂಚನಗಿರಿ ಮಠ ಈ ಬಾರಿ ನೆರೆದಿದ್ದ ಭಕ್ತರಿಗೆ ವಿಶೇಷ ಮೆರಗು ನೀಡಿತ್ತು.
ಜಾತ್ರಾ ಮಹೋತ್ಸವ ದೃಶ್ಯಾವಳಿಗಳನ್ನು ಭಕ್ತರು ವೀಕ್ಷಿಸಲು ಎಲ್.ಸಿ.ಡಿ. ಪರದೆಗಳನ್ನು ಅಳವಡಿಸಲಾಗಿತ್ತು. ಇಡೀ ರಾತ್ರಿ ಬಿ.ಜಿ.ಎಸ್. ಸಭಾ ಭವನದಲ್ಲಿ ಜಾನಪದ ನೃತ್ಯ, ಭರತನಾಟ್ಯ ಸೇರಿದಂತೆ ವಿವಿಧ ಜಾನಪದ ಕಲಾ ಪ್ರದರ್ಶನಗಳು ನಡೆದವು.
ಡೊಳ್ಳು ಕುಣಿತ, ಪಟದ ಕುಣಿತ, ಸೋಮನಕುಣಿತ, ಪೂಜಾ ಕುಣಿತ, ತಮಟೆ ಮೇಳ ಸೇರಿದಂತೆ ಹತ್ತಾರು ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ಭಕ್ತರಿಗೆ ಐದಾರು ಸ್ಥಳಗಳಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಆದಿಚುಂಚನಗಿರಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರದಲ್ಲಿ ಪಾಲ್ಗೊಂಡಿದ್ದರು.
ರಥದ ಬೀದಿ, ಕಲ್ಯಾಣಿ ಬೀದಿ ಸೇರಿದಂತೆ ಶ್ರೀಮಠದ ಬೆಟ್ಟದ ತಪ್ಪಲಿನ ಇಕ್ಕೆಲಗಳಲ್ಲಿ ಭಕ್ತರು ನಿಂತಿದ್ದ ದೃಶ್ಯ ಕಂಡುಬಂದಿತು. ಸರ್ವಧರ್ಮ ಸಮ್ಮೇಳನದಲ್ಲಿ ನಾಡಿನ ಅನೇಕ ಮಠಾಧಿಪತಿಗಳು, ಧಾರ್ಮಿಕ ಮುಖಂಡರುಗಳು, ಸಾಹಿತಿಗಳು, ಗಣ್ಯರು ಭಾಗವಹಿಸಿದ್ದರು.
ಹೋಳಿ ಹುಣ್ಣಿಮೆ ದಿನವಾದ ಭಾನುವಾರ ಬೆಳಿಗ್ಗೆ ಶ್ರೀ ಗಂಗಾಧರೇಶ್ವರಸ್ವಾಮಿಯ ಅಲಂಕೃತ ರಥವನ್ನು ಭಕ್ತ್ಯುತ್ಸಾಹಗಳಿಂದ ಬಿಜಯಂಗೈಸಿದರು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಹಣ್ಣು ಜವನದ ಹೂವನ್ನು ರಥದ ಮೇಲೆಸೆದು ತಮ್ಮ ಭಕ್ತಿ ಸಮರ್ಪಿಸಿದರು. ನಂತರ 72ನೇ ಸಿದ್ಧಸಿಂಹಾಸನಾಧೀಶ್ವರ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸರ್ವಾಂಲಕೃತ ಅಡ್ಡಪಾಲಕಿ ಉತ್ಸವ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

