ತುಮಕೂರು

ತಣ್ಣಗಾದ ಬಂಡಾಯ; ಪಕ್ಷ ಗೆಲ್ಲಿಸಲು ಪಣ

Published On :

ತುಮಕೂರು: ಪಕ್ಷದ ಅಭ್ಯರ್ಥಿ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿದ್ದ ಬಂಡಾಯದ ಬಿಸಿ ತಣ್ಣಗಾಗುತ್ತಿದ್ದು, ಮಹಾಯುದ್ಧದಲ್ಲಿ ಗೆಲ್ಲಲ್ಲು ಈಗ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನ ಮಂತ್ರ ಪಠಿಸಲು ಆರಂಭಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಜಿ.ಎಸ್. ಬಸವರಾಜ್  ಎಲ್.ಕೆ. ಆಡ್ವಾಣಿ ಮತ್ತು ಬಿಜೆಪಿ ಪಕ್ಷದ ವಿರುದ್ಧ ಮಾತನಾಡಿದ್ದಾರೆ ಎಂದು ದೂರಿ ಜಿಲ್ಲಾ ಬಿಜೆಪಿ ಘಟಕ ಹೈಕಮಾಂಡ್‌ಗೆ ಅಲವತ್ತುಕೊಂಡಿತ್ತು. ಅಲ್ಲದೆ,  ಮಾಜಿ ಸಚಿವ ಸೊಗಡು ಶಿವಣ್ಣ ಅಥವಾ ಎಂ.ಬಿ. ನಂದೀಶ್ ಇವರಿಬ್ಬರಲ್ಲಿ ಯಾರನ್ನಾದರೂ ಅಭ್ಯರ್ಥಿ ಮಾಡಿ ಅವರ ಪರವಾಗಿ ಪ್ರಚಾರ ಮಾಡುತ್ತೇವೆಂದು ಮನವಿ ಮಾಡಿದ್ದರು.
ಆದರೆ ಕಡೇ ಗಳಿಗೆಯಲ್ಲಿ ಯಡಿಯೂರಪ್ಪ ಹಠದಿಂದಾಗಿ ಜಿ.ಎಸ್. ಬಸವರಾಜ್ ಟಿಕೆಟ್ ತರುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಬಿಜೆಪಿಯಲ್ಲಿ ದೊಡ್ಡ ಕದನವೇ ನಡೆಯುತ್ತಿತ್ತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‌ಗೌಡ ಅನುಪಸ್ಥಿತಿಯಲ್ಲಿ ಬಿಜೆಪಿ ಒಂದು ಬಣ ಜಿ.ಎಸ್. ಬಸವರಾಜ್ ವಿರುದ್ಧ ಹರಿಹಾಯ್ದಿತ್ತು. ಅಲ್ಲದೇ ಜಿ.ಎಸ್. ಬಸವರಾಜ್ ಕೂಡ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ದಿಲ್ಲಿ ಕಡೆ ಹೋಗಿದ್ದೂ ಉಂಟು. ಆದರೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ತಮ್ಮ ಬೆಂಬಲಿಗ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಯಡಿಯೂರಪ್ಪನವರ ಸೂಚನೆ ಮೇರೆಗೆ ಬಸವರಾಜ್ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ನಡೆಸಿದರು.
ಟಿಕೆಟ್‌ಗಾಗಿ ನಡೆದಿತ್ತು ಸಮರ: ಅಲ್ಲದೇ ಈ ಹಿಂದೆ ಬಸವರಾಜ್ ಅವರನ್ನು ಅಮಾನತುಪಡಿಸಲಾಗಿತ್ತು. ಬಸವರಾಜ್ ಅವರು ಅಮಾನತ್ತಿನಲ್ಲಿದ್ದಾರೆ. ಹಾಗಾಗಿ ಅವರಿಗೆ ಹೇಗೆ ಟಿಕೆಟ್ ನೀಡುತ್ತಾರೆ ಎಂದು ಜಿಲ್ಲಾ ಬಿಜೆಪಿ ಘಟಕ ಪ್ರಶ್ನಿಸುತ್ತಿತ್ತು. ಆದರೆ ಈಗ ಎಲ್ಲಾ ಗೊಂದಲ ಮುಗಿದಿದ್ದು ಜಿ.ಎಸ್. ಬಸವರಾಜ್‌ಗೆ ಟಿಕೆಟ್ ಸಿಕ್ಕಿದೆ. ಈ ಮೊದಲು ಬಿಜೆಪಿ ಮತ್ತು ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಜತೆ ಗುರುತಿಸಿಕೊಂಡಿದ್ದವರ ನಡುವೆ ಸಣ್ಣ ಆಂತರಿಕ ತಿಕ್ಕಾಟ ನಡೆದೇ ಇತ್ತು. ಈಗ ಪರಿಸ್ಥಿತಿ ತಿಳಿಯಾಗಿದ್ದು ಪಕ್ಷಕ್ಕಾಗಿ ಜಿ.ಎಸ್. ಬಸವರಾಜ್ ಪರ ಕೆಲಸ ಮಾಡಲು ಕಾರ್ಯಕರ್ತರು ಹಾಗೂ ಮುಖಂಡರು ನಿರ್ಧರಿಸಿದ್ದಾರೆ.
ಜೆಡಿಎಸ್‌ನಲ್ಲೂ ಇತ್ತು ಬಂಡಾಯ: ಇನ್ನು ಜೆಡಿಎಸ್ ನಲ್ಲೂ ಕೂಡ ಬಂಡಾಯ ಬಿಸಿ ಇತ್ತು. ಕೊನೆ ಗಳಿಗೆಯಲ್ಲಿ ಮಾಜಿ ಸಚಿವ ಸಿ. ಚನ್ನಿಗಪ್ಪ ಅವರು ತಾವು ತುಮಕೂರು ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿಕೊಂಡರು. ಅಲ್ಲದೇ ತುಮಕೂರು ಜಿಲ್ಲೆಯಿಂದ ಆಯ್ಕೆಯಾದ ಕೆಲ ಶಾಸಕರು ಚನ್ನಿಗಪ್ಪ ಪರ ಲಾಬಿ ಕೂಡ ಮಾಡಿದರು. ಈ ಮೊದಲೇ ದೇವೇಗೌಡರು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ಘೋಷಿಸಿದ್ದರು. ಹೀಗಾಗಿ ಅವರೇ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.
ಹಿಂದುಳಿದ ವರ್ಗಕ್ಕೆ ಸೇರಿದ ಎ.ಕೃಷ್ಣಪ್ಪ ಅವರಿಗೆ ಕೆಲ ಮುಖಂಡರು ಆರಂಭದಲ್ಲಿ ಉದಾಸೀನ ಮನೋಭಾವ ಹೊಂದಿದ್ದರು. ಆದರೆ ಈಗ ಪರಿಸ್ಥಿತಿ ತಿಳಿಯಾಗಿದ್ದು ಜೆಡಿಎಸ್‌ನ ಎಲ್ಲಾ ಶಾಸಕರು ಒಗ್ಗಟ್ಟಾಗಿ ಕೃಷ್ಣಪ್ಪ ಗೆಲವಿಗೆ ಶ್ರಮಿಸುವುದಾಗಿ ಘೋಷಿಸಿದ್ದಾರೆ.
ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅಭ್ಯರ್ಥಿ ಪರವಾಗಿ ಇದ್ದ ಅಸಮಾಧಾನ ನಿಧಾನಕ್ಕೆ ಕಡಿಮೆಯಾಗುತ್ತಿದ್ದು, ಇನ್ನು ಒಂದೆರೆಡು ದಿವಸದಲ್ಲಿ ಹೊಸ ಹುರುಪಿನೊಂದಿಗೆ ಅಖಾಡಕ್ಕೆ ಧುಮುಕಲಿದ್ದಾರೆ.
ಎಂಡಿಎಲ್ ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ನೀಡಲು ತುರುವೇಕೆರೆ ಬಿಜೆಪಿ ಆಗ್ರಹ
ತುರುವೇಕೆರೆ: ಯಡಿಯೂರಪ್ಪ ಕೃಪಾಶೀರ್ವಾದದಿಂದ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ತಾಲೂಕು ಬಿಜೆಪಿ ಘಟಕ ಆಗ್ರಹಿಸಿದೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ಅರಳೀಕೆರೆ ರವಿಕುಮಾರ್ ಹಾಗೂ ಮತ್ತಿತರರು, ಬಿಜೆಪಿಯಿಂದ ಸಕಲವನ್ನೂ ಪಡೆದಿರುವ ಎಂ.ಡಿ. ಲಕ್ಷ್ಮೀನಾರಾಯಣ್ ಅವರೊಬ್ಬ ಸ್ವಾರ್ಥಿ. ಯಡಿಯೂರಪ್ಪ ಕೃಪೆಯಿಂದಲೇ ವಿಧಾನಪರಿಷತ್ ಸದಸ್ಯ ಸ್ಥಾನ  ಅಲಂಕರಿಸಿರುವ ಎಂ.ಡಿ.ಲಕ್ಷ್ಮೀನಾರಾಯಣ್ ಈಗ ಯಡಿಯೂರಪ್ಪ ಅವರನ್ನೇ ದೂರ ಮಾಡಿದ್ದಾರೆ. ಅಲ್ಲದೇ ಯಡಿಯೂರಪ್ಪನವರನ್ನೇ ದೂಷಿಸುವ ಹಂತಕ್ಕೆ ತಲುಪಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿ ಸಹವಾಸ ಬೇಡವೆಂದ ಮೇಲೆ ಎಂಎಲ್‌ಸಿ ಸ್ಥಾನದ ಅವಶ್ಯಕತೆಯೂ ಇಲ್ಲ. ಎಂ.ಡಿ.ಎಲ್ ಕೂಡಲೇ  ಎಂಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಮುಖಂಡರಾದ ಡಿ.ಆರ್.ಬಸವರಾಜು, ಅರಳೀಕೆರೆ ಶಿವಯ್ಯ, ಶಿವಯೋಗೀಶ್ವರ ಸ್ವಾಮಿ, ಮುನಿಯೂರು ಗ್ರಾಪಂ ಸದಸ್ಯ ರಂಗಸ್ವಾಮಿ, ಹೇಮಚಂದ್ರು, ಗುಡ್ಡೇನಹಳ್ಳಿ ಬೈರಪ್ಪ, ಕಾರ್ಯದರ್ಶಿ ಹಾಲೇಗೌಡ, ಮೃತ್ಯುಂಜಯ  ಉಪಸ್ಥಿತರಿದ್ದರು.

 ಕೈ ಪಾದಯಾತ್ರೆಯಲ್ಲಿ ಹರಿಹಾಯ್ದ ಷಡಕ್ಷರಿ...
ತಿಪಟೂರು: ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ತಿಪಟೂರು ಪಟ್ಟಣ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಹಾಲ್ಕುರಿಕೆಯಿಂದ ತಿಪಟೂರಿಗೆ ಭೈರಾಪುರ ಹಾಲೇನಹಳ್ಳಿ, ಚೌಲೀಹಳ್ಳಿ, ಮಣಕೀಕೆರೆ, ಹುರುಳಿಹಳ್ಳಿ, ಭೈರನಾಯಕನಹಳ್ಳಿ ಗೇಟ್ ಮತ್ತಿತರೆಡೆ ಪಾದಯಾತ್ರೆ ನಡೆಯಿತು.  ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಶಾಸಕ ಕೆ.ಷಡಕ್ಷರಿ, ಮುಖಂಡರಾದ ಶಿವಪ್ರಕಾಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಪರಮಶಿವಯ್ಯ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ. ಶಶಿಧರ, ಗ್ರಾಪಂ ಸದಸ್ಯ ಎಂ.ಡಿ. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕರ ವಿರುದ್ಧ ಕಿಡಿ
ಪಾದಯಾತ್ರೆ ಸಮಯದಲ್ಲಿ ಚುನಾವಣಾ ವೀಕ್ಷಕ ಸಿದ್ದುನ್ಯಾಮನಗೌಡರು ಕಾನೂನು ಉಲ್ಲಂಘನೆ ಆರೋಪದಡಿಯಲ್ಲಿ ಕೇಸು ದಾಖಲಿಸಿ ಕ್ರಮ ಜರುಗಿಸಿದ್ದು ಮತ್ತು ವೀಕ್ಷಕರು ತಮ್ಮ ಕರ್ತವ್ಯವನ್ನು ಪಾದಯಾತ್ರೆಯುದ್ದಕ್ಕೂ ನಿರ್ವಹಿಸಿದ್ದನ್ನು ಸಹಿಸದ ಪಾದಯಾತ್ರೆಯಲ್ಲಿದ್ದ ಶಾಸಕರು ಅಣ್ಣಾಪುರ ಗೇಟ್‌ಬಳಿ ಕರ್ತವ್ಯದಲ್ಲಿದ್ದ ವೀಕ್ಷಕ ಸಿದ್ದುನ್ಯಾಮಗೌಡರ ವಿರುದ್ದ ಏಕವಚನ ಪ್ರಯೋಗಿಸಿ ಕೂಗಾಡಿ ರಂಪಮಾಡಿದರು. ವೀಕ್ಷಕರಾಗಿರುವ ನ್ಯಾಮಗೌಡರು ಇಲ್ಲಿನ ಎಪಿಎಂಸಿ ಕಾರ್ಯದರ್ಶಿಯಾಗಿದ್ದು, ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಕೊಬ್ಬರಿ ಆನ್‌ಲೈನ್ ಟ್ರೇಡಿಂಗ್ ಅನ್ನು ಕಾರ್ಯದರ್ಶಿಯವರು ಸಮರ್ಥವಾಗಿ ಜಾರಿಗೆ ತಂದಿರುವುದನ್ನು ವರ್ತಕರು ವಿರೋದಿಸಿ ವ್ಯವಹಾರ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ವರ್ತಕರುಗಳು ಶಾಸಕರ ಮೇಲೆ ಸಾಕಷ್ಟು ಒತ್ತಡ ಹಾಕಿ ಕಾರ್ಯದರ್ಶಿ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಶಾಸಕರು ಕಾರ್ಯದರ್ಶಿಯವರಿಗೆ ಆನ್‌ಲೈನ್ ವ್ಯವಹಾರದಲ್ಲಿ  ನನ್ನ ಮಾತು ಕೇಳಲಿಲ್ಲ ಎಂಬ ಸಿಟ್ಟನ್ನು ಸೇರಿಸಿ ಪಾದಯಾತ್ರೆ ಸಮಯದಲ್ಲಿ ವೀಕ್ಷಕರಾಗಿರುವ ನ್ಯಾಮಗೌಡರ ವಿರುದ್ಧ ಶಾಸಕರು ಹಿಂದೂ ಮುಂದೂ ನೋಡದೆ ಸುಖಾ ಸುಮ್ಮನೆ ಬೀದಿರಂಪ ಮಾಡಿದ್ದು, ಸಾರ್ವಜನಿಕರಲ್ಲಿ ಶಾಸಕರ ವಿರುದ್ಧ ಚರ್ಚೆಗೆ ದಾರಿ ಮಾಡಿಕೊಟ್ಟಿತು.

 ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.