ಮೈಕ್ರೋ ಫೈನಾನ್ಸ್ ವಂಚನೆ: ವಿಮಾ ಕಚೇರಿ ಮುತ್ತಿಗೆ
ತುರುವೇಕೆರೆ: ಪಟ್ಟಣದ ಹೊರಪೇಟೆ ಬೀದಿಯಲ್ಲಿ ಭಾರತೀಯ ಜೀವವಿಮಾ ನಿಗಮದ ಅಡಿಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿದ್ದ ಮೈಕ್ರೋ ಇನ್ಸೂರೆನ್ಸ್ ಯೋಜನೆಯಡಿ ಹಣ ಜಮಾವಣೆ ಮಾಡಿದ್ದ ಸಾವಿರಾರು ಗ್ರಾಹಕರ ಹಣವನ್ನು ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಐಸಿಯ ಅಧಿಕಾರಿಗಳು ಯಾವುದೇ
ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ನೂರಾರು ಗ್ರಾಹಕರು ಹಾಗೂ ಪ್ರತಿನಿಧಿಗಳು ಭಾರತೀಯ ಜೀವ ವಿಮಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಸಮನ್ವಯ ಮೈಕ್ರೋ ಇನ್ಸೂರೆನ್ಸ್ಗೆ ಸುಮಾರು 1700 ಕ್ಕೂ ಹೆಚ್ಚು ಮಂದಿ ಮಾಸಿಕ ಕಂತು ಕಟ್ಟಿದ್ದಾರೆ. ಈಗಾಗಲೇ ಹಲವಾರು ಮಂದಿಯ ಅವಧಿ ಮುಗಿದಿದೆ. ಆದರೂ ಸಂಸ್ಥೆ ಹಣ ನೀಡಿಲ್ಲ. ಗ್ರಾಹಕರು ಹಣ ಸಂದಾಯ ಮಾಡಿದ್ದರೂ ಸಹ ಸಂಸ್ಥೆಯಲ್ಲಿದ್ದ ಸಿಬ್ಬಂದಿ ಇಲಾಖೆಗೆ ಜಮಾ ಮಾಡಿಲ್ಲದಿರುವುದು ಬೆಳಕಿಗೆ ಬಂದಿತ್ತು. ಕಳೆದ ಏಳೆಂಟು ತಿಂಗಳಿನಿಂದಲೂ ಸಹ ಗ್ರಾಹಕರು ಹಾಗೂ ಪ್ರತಿನಿಧಿಗಳಿಗೆ ಅನ್ಯಾಯವಾಗಿದ್ದರೂ ಸಹ ಭಾರತೀಯ ಜೀವವಿಮಾ ಯೋಜನೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಂಚನೆ ಮಾಡಿರುವವರ ವಿರುಧ್ಧ ಕ್ರಮ ಜರುಗಿಸಲಾಗಿದೆ. ಪೊಲೀಸರು ಪ್ರಕರಣವನ್ನು ಸಿಒಡಿಗೆ ವಹಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ನ್ಯಾಯಾಲಯಕ್ಕೂ ಸಹ ವಿನಂತಿಸಿಕೊಳ್ಳಲಾಗಿದೆ ಎಂದು ಎಲ್ಐಸಿಯ ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು. ಗ್ರಾಮಗಳಲ್ಲಿ ಹಣ ವಸೂಲು ಮಾಡಿರುವುದರಿಂದ ಗ್ರಾಮಸ್ಥರ ಬೈಗುಳವನ್ನು ತಾವುಗಳು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಮಗೆ ಆಗಿರುವ ಅನ್ಯಾಯವನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು. ಸದ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು ಸರ್ಕಾರಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಚುನಾವಣೆಯ ನಂತರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲಾಯಿತು.
ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೌಡ, ಸಿಐಟಿಯು ಮುಖಂಡ ಸತೀಶ್ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.
ಪ್ರತಿಭಟನಾಕಾರರು ಕಚೇರಿ ಒಳಗೇ ಧರಣಿ ಕುಳಿತು ಪ್ರತಿಭಟನೆ ಮಾಡಿದ್ದರಿಂದ ಮಧ್ಯಾಹ್ನ 4 ಗಂಟೆಯ ತನಕವೂ ಎಲ್ಐಸಿಯ ಯಾವುದೇ ಕಾರ್ಯಕಲಾಪ ನಡೆಯಲು ಸಾಧ್ಯವಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

