ತುಮಕೂರಲ್ಲಿ ಕೋಟೆ ಕಟ್ಟೋರ್ಯಾರು?
ತುಮಕೂರು: 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ತುಮಕೂರು ಲೋಕಸಭೆ ಈ ಬಾರಿ ಯಾರಿಗೆ ಒಲಿಯಲಿದೆ?
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗ ನಡೆಯುತ್ತಿರುವ ಚರ್ಚೆ ಇದೊಂದೆ.
1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಏಕೀಕೃತ ಜನತಾದಳದಿಂದ ಸ್ಪರ್ಧಿಸಿದ್ದ ಸಿ.ಎನ್. ಭಾಸ್ಕರಪ್ಪ ಜಯಸಾಧಿಸಿದ್ದರು.
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜೆಡಿಎಸ್ ಸಾಧನೆ ಮಾಡಿಲ್ಲ. ಒಕ್ಕಲಿಗ ಮತ್ತು ಹಿಂದುಳಿದ ವರ್ಗ ಸಮೀಕರಣದ ಆಧಾರದ ಮೇಲೆ ಕುರುಬ ಜನಾಂಗದ ಭಾಸ್ಕರಪ್ಪಗೆ ದೇವೇಗೌಡರು ಈ ಹಿಂದೆ ಟಿಕೆಟ್ ನೀಡಿದ್ದರು. ಈ ಸಮೀಕರಣ ಯಶಸ್ವಿಯಾಗಿತ್ತು. ಈಗ ಅಂತದ್ದೇ ಸಮೀಕರಣಕ್ಕೆ ದೇವೇಗೌಡರು ಮುಂದಾಗಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಗೊಲ್ಲ ಸಮುದಾಯದ ಎ. ಕೃಷ್ಣಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ.
ಹಾಗೆ ನೋಡಿದರೆ ಮೊದಲು ತುಮಕೂರು ಲೋಕಸಭೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕ್ರಮೇಣ ಬಿಜೆಪಿ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿತು. ಕಳೆದೆರೆಡು ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ
ಗೆದ್ದುಕೊಂಡಿತ್ತು.
1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ಜನತಾದಳ ಅಭ್ಯರ್ಥಿ ಸಿ.ಎನ್. ಭಾಸ್ಕರಪ್ಪ ಅವರು ಬಿಜೆಪಿಯ ಎಸ್. ಮಲ್ಲಿಕಾರ್ಜುನಯ್ಯ ವಿರುದ್ಧ 13 ಸಾವಿರ ಮತಗಳ ಅಂತರದಿಂದ ಜಯಸಾಧಿಸಿ ಲೋಕಸಭೆ ಪ್ರವೇಶಿಸಿದ್ದರು.
1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರವನ್ನು ಗೆದ್ದುಕೊಂಡಿತು. ಆಗ ನಡೆದ ಚುನಾವಣೆಯಲ್ಲಿ ಎಸ್. ಮಲ್ಲಿಕಾರ್ಜುನಯ್ಯ ಅವರು ಕಾಂಗ್ರೆಸ್ನ ಆರ್. ನಾರಾಯಣ ವಿರುದ್ಧ ಜಯಭೇರಿ ಬಾರಿಸಿದ್ದರು.
ಮತ್ತೆ 1999 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆಗ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು ಅವರು ಎಸ್.ಮಲ್ಲಿಕಾರ್ಜುನಯ್ಯ ವಿರುದ್ಧ ಜಯಗಳಿಸಿದ್ದರು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಎಸ್. ಮಲ್ಲಿಕಾರ್ಜುನಯ್ಯ ಅವರು ಜೆಡಿಎಸ್ನ ಡಿ.ಎಲ್. ಜಗದೀಶ್ ವಿರುದ್ಧ ಜಯಗಳಿಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಗಣನೀಯ ಸಾಧನೆ: ಈ ಚುನಾವಣೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಜೆಡಿಎಸ್ ಗಣನೀಯ ಸಾಧನೆ ಮಾಡಿತ್ತು. ಜೆಡಿಎಸ್ ಆ ಚುನಾವಣೆಯಲ್ಲಿ ಕೇವಲ 2 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿತ್ತು.
ಆದರೆ 2009 ರಲ್ಲಿ ನಡೆದ ಚುನಾವಣೆಯಲ್ಲಿ ಅನಾರೋಗ್ಯದ ನೆಪವೊಡ್ಡಿ ಬಿಜೆಪಿ ಎಸ್. ಮಲ್ಲಿಕಾರ್ಜುನಯ್ಯ ಅವರಿಗೆ ಟಿಕೆಟ್ ನಿರಾಕರಿಸಿತು. ಆಗ ಕಾಂಗ್ರೆಸ್ನಿಂದ ವಲಸೆ ಬಂದು ಬಿಜೆಪಿಗೆ ಸೇರ್ಪಡೆಯಾಗಿದ್ದ ಜಿ.ಎಸ್. ಬಸವರಾಜು ಅವರಿಗೆ ಪಕ್ಷ ಟಿಕೆಟ್ ನೀಡಿತು. 2009 ರ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು 20 ಸಾವಿರ ಮತಗಳ ಅಂತರದಿಂದ ಜೆಡಿಎಸ್ನ ಮುದ್ದಹನುಮೇಗೌಡರನ್ನು ಸೋಲಿಸಿದ್ದರು.
ಈಗ 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮತ್ತೆ ಬಸವರಾಜ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುದ್ದಹನುಮೇಗೌಡ ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ನಿಂದ ಎ. ಕೃಷ್ಣಪ್ಪ ಜಯಗಳಿಸಿದ್ದಾರೆ. ಒಟ್ಟಾರೆ ಬೆಂಗಳೂರಿನ ಭವಿಷ್ಯದ ಉಪನಗರಿ ಈ ಬಾರಿ ಜಿದ್ದಾಜಿದ್ದಿನ ಅಖಾಡಕ್ಕೆ ಸಜ್ಜಾಗಿದೆ.
ಮೂರೂ ಪಕ್ಷಕ್ಕೂ ಪ್ರತಿಷ್ಠೆಯ ಕಣ
ಎಲ್ಲರಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಜೆಡಿಎಸ್ ತನ್ನ ಪಕ್ಷದ ರಾಜ್ಯಾಧ್ಯಕ್ಷರನ್ನೇ ಕಣಕ್ಕಿಳಿಸಿರುವುದರಿಂದ ಆ ಪಕ್ಷಕ್ಕೆ ಇದು ತೀರಾ ಪ್ರತಿಷ್ಠೆಯ ವಿಷಯ. ಇನ್ನು ಯಡಿಯೂರಪ್ಪನವರೇ ಖುದ್ದು ಬಸವರಾಜು ಅವರಿಗೆ ಟಿಕೆಟ್ ನೀಡಿರುವುದರಿಂದ ಅವರಿಗೂ ಇದು ಪ್ರತಿಷ್ಠೆ. ಇನ್ನು ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಅವರೇ ಟಿಕೆಟ್ ಕೊಡಿಸಿರುವುದರಿಂದ ಅವರಿಗೂ ಇದು ಪ್ರತಿಷ್ಠೆಯ ಕ್ಷೇತ್ರವಾಗಿದೆ.
ಉಗಮ ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

