ತುಮಕೂರು

ಜಾತಿ ಪತ್ರ ಗೊಂದಲ: ಸ್ಪಷ್ಟನೆ ವಿಫಲ

Published On :

ಕೋಲಾರ: ಜಾತಿ ಪ್ರಮಾಣ ಪತ್ರದ ಗೊಂದಲದಲ್ಲಿ ಸಿಲುಕಿರುವ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡುವುದಕ್ಕೆ ವಿಫಲ ಯತ್ನ ನಡೆಸಿದ್ದಾರೆ.
ಸೋಮವಾರ ಬೆಳಿಗ್ಗೆ ಜೆಡಿಎಸ್ ಹಿರಿಯ ಮುಖಂಡರೂ ಆದ ಮಾಜಿ ಸಚಿವ ಕೆ. ಶ್ರೀನಿವಾಸಗೌಡರ ಜೊತೆ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಜಿಲ್ಲಾಧಿಕಾರಿಗಳ ಬಳಿ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಪ್ರಯತ್ನಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆಗಾಗಿ ಬಂದಿದ್ದರಿಂದ ಜಿಲ್ಲಾಧಿಕಾರಿಗಳ ಭೇಟಿಗೆ ಅವಕಾಶ ಸಿಗದೆ ಕೇಶವ ವಾಪಸ್ ಹೋಗಿದ್ದರು.
ಮತ್ತೆ ಮಧ್ಯಾಹ್ನ ಜಿಲ್ಲಾಧಿಕಾರಿಗಳನ್ನು ಭೇಟಿಯಾದಾಗ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಗೊಂದಲಗಳ ಬಗ್ಗೆ ಏನೇ ಮಾಹಿತಿ ಮತ್ತು ಆಧಾರಗಳು ಇದ್ದರೂ ಲಿಖತ ಮೂಲಕ ಸ್ಪಷ್ಟನೆ ನೀಡುವಂತೆ ಹೇಳಿ ಕಳುಹಿಸಿದ್ದಾರೆ. ಕೇಶವ ಅವರು 1994ರಲ್ಲಿ ಮಾಲೂರು ತಾಲೂಕು ತಹಸೀಲ್ದಾರ್ ಅವರಿಂದ ಭೋವಿ ಜನಾಂಗಕ್ಕೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಕೇಶವ ಅವರ ಪರ ವಕೀಲ ಶಂಕರಪ್ಪ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಈ ಸಂಬಂಧ ದೃಢೀಕರಣ ಪತ್ರ ನೀಡಿರುವುದಾಗಿಯೂ ಹೇಳಿದ್ದಾರೆ. ಆದರೆ, ಕೇಶವ ಜೆಡಿಎಸ್ ಅಭ್ಯರ್ಥಿಯಾಗಿರುವುದನ್ನು ವಿರೋಧಿಸುತ್ತಿರುವ ಇದೇ ಪಕ್ಷದ ಕೆಲ ಮುಖಂಡರು 1994ರಲ್ಲಿ ಕೇಶವ ಅವರು ನಾಗನಾಯಕನಹಳ್ಳಿ ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿದ್ದಾರಲ್ಲದೆ ಬೆಂಗಳೂರಿನ ಉತ್ತರ ತಾಲೂಕಿನ ತಹಸೀಲ್ದಾರ್ ಅವರಿಂದ 2014ರ ಮಾರ್ಚ್ 6ರಂದು ಪಡೆದಿರುವ ಡಿಜಿಟಲ್ ಕಂಪ್ಯೂಟರೀಕೃತ ಜಾತಿ ಪತ್ರವನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಆದೇಶದಂತೆ ಮಾ.19 ರಂದು ರದ್ದು ಮಾಡಿರುವುದರಿಂದ ಕೇಶವ ಅವರು ತಾನು ಭೋವಿ ಎಂದು ಹೇಳಿ ನೀಡಿರುವ ಪ್ರಮಾಣ ಪತ್ರವನ್ನು ಅಂಗೀಕರಿಸಬಾರದೆಂದು ಮನವಿ ನೀಡಿರುವ ಹಿನ್ನೆಲೆಯಲ್ಲಿ ಕೇಶವ ಅವರು ಗೊಂದಲ ಮತ್ತು ಮುಂದೆ ಆಗಬಹುದಾದ ಪ್ರತಿಕೂಲ ಪರಿಣಾಮದಿಂದ ಪಾರು ಆಗಲು ಪ್ರಯತ್ನ ಮುಂದುವರೆಸಿದ್ದಾರೆ.
ಕೇಶವ ಅವರ ನಾಮಪತ್ರ ಸಲ್ಲಿಕೆಯ ದಿನ ಖುದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಜರಿ ಆಗಿದ್ದು ಜಾತಿ ಪ್ರಮಾಣ ಪತ್ರದ ಬಗ್ಗೆ ಹಬ್ಬಿರುವ ವಿವಾದ ಹಾಗೂ ಗೊಂದಲಗಳೇ ಕಾರಣವೆಂದು ಮೂಲಗಳು ತಿಳಿಸಿವೆ. ಜಿಲ್ಲಾಧಿಕಾರಿಗಳು ಲಿಖಿತ ಮೂಲಕ ಸ್ಪಷ್ಟನೆ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಕೇಶವ ಅವರು ಸೋಮವಾರ ಸಂಜೆ ತಮ್ಮ ವಕೀಲ ಶಂಕರಪ್ಪ ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದು ಮಂಗಳವಾರ ಇಲ್ಲವೇ ನಾಮಪತ್ರ ಪರಿಶೀಲನೆಯ ದಿನವಾದ ಮಾ. 28ರಂದು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.