ಇಂದಿಗೂ ವಿಳಾಸ ಇಲ್ಲದವರಿದ್ದಾರೆ
ಕ.ಪ್ರ.ವಾತೆ ತುಮಕೂರು ಮಾ.25
ಭಾರತಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ಇಂದು ವಿಳಾಸವಿಲ್ಲದವರು ಇದ್ದಾರೆ. ಈ ವಿಳಾಸವಿಲ್ಲದವರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ನಾನು ಭಿಕ್ಷುಕರಿಗೆ ರಾಜನಂತಾಗಿದ್ದೇನೆ ಎಂದು ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಾಲಗುರುಮೂರ್ತಿ ವಿಶ್ಲೇಷಿಸಿದ್ದಾರೆ.
ನಗರದ ಎಂಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ದಲಿತ ಸಾಹಿತ್ಯ ಮೂರು ದಶಕಗಳ ಪಯಣ ಮತ್ತು ಪ್ರಸ್ತುತ ಸವಾಲುಗಳು ಎಂಬ ವಿಚಾರಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲೆಮಾರಿ ಸಮುದಾಯಕ್ಕೆ ಸರಕಾರ ಈ ಬಾರಿಯ ಬಜೆಟ್ನಲ್ಲಿ ರು. 50 ಕೋಟಿ ಬಿಡುಗಡೆ ಮಾಡಿದ್ದು, ಇದರ ಸಮರ್ಪಕ ಸದ್ಬಳಕೆಯಾಗಬೇಕು. ಅದಕ್ಕಾಗಿ ಅಲೆಮಾರಿಗಳ ಒಡನಾಟದಲ್ಲಿರುವವರಿಗೆ ಅಧಿಕಾರ ನೀಡಬೇಕು ಎಂದರು.
ಪ್ರತಿ ಜಿಲ್ಲೆಯಲ್ಲಿ ಅಲೆಮಾರಿಗಳಿಗಾಗಿ 20 ಎಕರೆಯಲ್ಲಿ ವಸತಿ ಸಮುಚ್ಚಯ ನಿರ್ಮಿಸುವುದು, ಅಲೆಮಾರಿಗಳಲ್ಲಿ ಇರುವ ಸೃಜನಶೀಲತೆಗಳನ್ನು ಸಕಾರಗೊಳಿಸಲು ಪ್ರೋತ್ಸಾಹಧನ ನೀಡಬೇಕು. ಎಲ್ಲರಿಗೂ ಗುರುತಿನ ಚೀಟಿ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಷ್ಟ್ರಮಟ್ಟದಲ್ಲೂ ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ವಿಚಾರಸಂಕಿರಣದಲ್ಲಿ ಡಾ. ಬಾಲಗುರುಮೂರ್ತಿ ಮತ್ತಿತರರನ್ನು ಅಭಿನಂದಿಸಿ ಮಾತನಾಡಿದ ಪ್ರಗತಿಪರ ಹೋರಾಟಗಾರ, ಲೇಖಕ ಚೇಳೂರು ವೆಂಕಟೇಶ್, ದಲಿತ ಸಾಹಿತ್ಯವೂ ಸಾಮಾಜಿಕ ಸಮಾನತೆಯನ್ನು ತರುವಲ್ಲಿ ಬಹಳಷ್ಟು ಕೊಡುಗೆ ನೀಡಿದೆ. ಒಂದು ಕಾಲದಲ್ಲಿ ದಸಂಸದ ಲಾಂಛನವಾಗಿದ್ದ ಪೊರಕೆಯನ್ನು ಕೀಳು ಮಟ್ಟದಾಗಿತೆಂದು ಜರಿಯುತ್ತಿದ್ದರು.
ಆದರೆ ಇಂದು ಮೇಲ್ಜಾತಿ ಮುಖಂಡತ್ವದ ಎಎಪಿ ಎಂಬ ಪಕ್ಷ ಇದೇ ಲಾಂಛನದಿಂದ ದೆಹಲಿಯ ಗದ್ದುಗೆ ಹಿಡಿಯಿತು.
ಇತ್ತೀಚಗೆ ಆಂಧ್ರದ ಕಿರಣ್ ಕುಮಾರ್ರೆಡ್ಡಿ ಸಮಾಕ್ಯಾಂಧ್ರ ಪಕ್ಷ ಎಕ್ಕಡ(ಚಪ್ಪಲಿ)ಯನ್ನು ಪಕ್ಷದ ಅಧಿಕೃತ ಲಾಂಛನವನ್ನಾಗಿಸಿದೆ. ಜಾತಿ ರೋಗಿಷ್ಟ ಮನಸ್ಸುಗಳು ಇಂತಹ ಕೆಳ ಸಮುದಾಯದ ಗುರುತುಗಳನ್ನು ಲಾಂಛನವಾಗಿಸಿಕೊಳ್ಳುವ ಮಟ್ಟಿಗೆ ಅವರ ಮನಸ್ಥಿತಿ ಬದಲಾಗಿದ್ದು ಇದಕ್ಕೆ ಭಾರತದಲ್ಲಿ ಉದಯವಾದ ದಲಿತ ಸಾಹಿತ್ಯವೇ ಮೂಲ ಎಂದು ಪ್ರತಿಪಾದಿಸಿದರು. ಕಥೆಗಾರರ ಎಸ್. ಗಂಗಾಧರಯ್ಯ, ಪತ್ರಕರ್ತ ಕೆ.ಜಿ. ಮರಿಯಪ್ಪ ಮಾತನಾಡಿದರು.
ದಲಿತರ ಮುಂದಿರುವ ಸವಾಲುಗಳ ಕುರಿತು ಮಾತನಾಡಿದ ಕವಿ ಹಾಗೂ ಉಪನ್ಯಾಸಕ ಡಾ. ವಡ್ಡಗೆರೆ ನಾಗರಾಜಯ್ಯ, ಶರಣ ಸಾಹಿತ್ಯಕ್ಕೂ ದಲಿತ ಸಾಹಿತ್ಯಕ್ಕೆ ಸಾಮ್ಯತೆಯಿದೆ. ಕಲ್ಯಾಣದಿಂದ ಹೊರದೂಡಲ್ಪಟ್ಟ ಶರಣ ಸಾಹಿತ್ಯ ಮತ್ತೆ ಬೆಳಕಿಗೆ ಬಂದಿದ್ದು ದಲಿತ ಸಾಹಿತ್ಯದ ಮೂಲಕವೇ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಾ. ಬಾಲಗುರುಮೂರ್ತಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಉಗಮಶ್ರೀನಿವಾಸ್ ಮತ್ತು ರಾಜ್ಯ ಬಸವಶಾಂತಿ ಪ್ರಶಸ್ತಿ ಪುರಸ್ಕೃತ ಎಂ. ರಾಮಯ್ಯ ಅವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಂದಕುಂಟೆ ನಾಗರಾಜಯ್ಯ ವಹಿಸಿದ್ದರು. ಲೇಖಕ ಚೇಳೂರು ವೆಂಕಟೇಶ್, ದಸಂಸದ ಹೆಣ್ಣೂರು ಶ್ರೀನಿವಾಸ್, ಡಾ. ನಾಗಭೂಷಣ್ ಬಗ್ಗನಡು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

