ತುಮಕೂರು

ಮೋದಿ ಬಿರುಗಾಳಿ, ಬಿಎಸ್ವೈ ಅಲೆ

Published On :

ತುಮಕೂರು: ದೇಶದಲ್ಲಿ ಉಂಟಾಗಿರುವ ಮೋದಿಯ ಬಿರುಗಾಳಿ ಮತ್ತು ರಾಜ್ಯದಲ್ಲಿರುವ ಯಡಿಯೂರಪ್ಪ ಅಲೆಯಿಂದ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ತುಮಕೂರಿನ ಮೆಳೆಕೋಟೆಯ ಗಾಣಿಗರ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ತಮ್ಮ ಜನಾಂಗದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೋದಿ ಬಿರುಗಾಳಿ ಮತ್ತು ಯಡಿಯೂರಪ್ಪ ಅಲೆ ಸೇರಿ ರಾಜ್ಯದಲ್ಲಿ ಬಿಜೆಪಿ ಪರ ಸುನಾಮಿ ಉಂಟಾಗಿದ್ದು,ಇದಕ್ಕೆ ಸಿಲುಕಿ ಬೇರೆಲ್ಲಾ ಪಕ್ಷಗಳು ನೆಲೆ ಕಳೆದುಕೊಳ್ಳಲಿವೆ ಎಂದರು.
ಬಿಜೆಪಿಯ ನರೇಂದ್ರಮೋದಿಯವರ ನಾಯಕತ್ವವನ್ನು ಇಡೀ ದೇಶ ಬಯಸುತ್ತಿದೆ. ಅಕ್ಕ ಪಕ್ಕದ ದೇಶಗಳ ಅತಿಕ್ರಮಣವನ್ನು ತಡೆಯಲು ಓರ್ವ ಸಮರ್ಥ ನಾಯಕನ ಅಗತ್ಯವನ್ನು ಜನತೆ ಬಯಸುತ್ತಿದ್ದಾರೆ. ಕೇಂದ್ರದ ಯಪಿಎ ಸರಕಾರ 10 ಲಕ್ಷ ಕೋಟಿ ರು.ಗಳಿಗಿಂತ ಹೆಚ್ಚಿನ ಭ್ರಷ್ಟಾಚಾರ ಮಾಡಿದೆ. ಪ್ರಧಾನಮಂತ್ರಿ  ಮನಮೋಹನ್ಸಿಂಗ್ಗೆ ಯಾವುದೇ ಅಧಿಕಾರವಿರಲಿಲ್ಲ. ಎಲ್ಲ ಅಧಿಕಾರ ಸೋನಿಯಾಗಾಂಧಿ ಕೈಯಲ್ಲಿದ್ದು,  ಮನಮೋಹನ್  ಕೈ ಗೊಂಬೆಯಾಗಿದ್ದರು.  ರಾಷ್ಟ್ರದ ಜನತೆ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು, ಇವುಗಳ ವಿರುದ್ಧ ಗಟ್ಟಿ ನಿಲುವು ತೆಗೆದುಕೊಳ್ಳುವ, ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಓರ್ವ ಉಕ್ಕಿನ ಮನುಷ್ಯನ ಅಗತ್ಯವಿದ್ದು, ಅವರು ನರೇಂದ್ರ ಮೋದಿಯೇ ಆಗಿದ್ದಾರೆ ಎಂದರು.
ಸಿದ್ದರಾಮಯ್ಯ ಸರ್ಕಾರ ವಿಫಲ: ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ನೆಲ ಕಚ್ಚಿದೆ. ಒಂದೆಡೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾದರೆ, ಮತ್ತೊಂದೆಡೆ ಸಂಪನ್ಮೂಲ ಕ್ರೋಢೀಕರಣದಲ್ಲಿ ಸಿದ್ದರಾಮಯ್ಯ ಸರಕಾರ ವಿಫಲವಾಗಿದೆ. ಸರಕಾರ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದರೂ ಇದುವರೆಗೂ ಅಭಿವೃದ್ದಿಗೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯನವರಿಗೆ ತಾವು ಓಬಿಸಿ ನಾಯಕ ಎಂದು ಹೇಳಿಕೊಳ್ಳುವ ಯಾವುದೇ ನೈತಿಕ ಹಕ್ಕಿಲ್ಲವೆಂದರು.
ಆರ್ಥಿಕ ಬೆಂಬಲ: ದೇವರಾಜ ಅರಸು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಪ್ರಜ್ಞೆಯನ್ನು ನೀಡಿದರೆ, ಯಡಿಯೂರಪ್ಪ ಆರ್ಥಿಕ ಬೆಂಬಲ ನೀಡಿದರು. ಬಿ.ಎಸ್.ವೈ ನೀಡಿದ ಪ್ರತಿ ಪೈಸೆಯೂ ಬಡವರ ಮನೆ ತಲುಪಿದೆ. ಜನತೆ ಮತ್ತೊಮ್ಮೆ ಯಡಿಯೂರಪ್ಪ ಅವರ ಅಧಿಕಾರವನ್ನು ರಾಜ್ಯದಲ್ಲಿ ಬಯಸುತ್ತಿದ್ದಾರೆ.
   ನಾನು ಈಗಾಗಲೇ 6-7 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ಮುಂದಿದ್ದಾರೆ. ಬೇರೆ ಅಭ್ಯರ್ಥಿಗಳನ್ನು ಜಿ.ಎಸ್.ಬಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಮೋದಿಯಂತಹ ಸಮರ್ಥ ನಾಯಕ ಬೇಕು ಎಂಬ ಕಾರಣಕ್ಕೆ ಎಲ್ಲಾ ವರ್ಗದ ನಾಯಕರು, ಯುವಕರು ಜಾತ್ಯತೀತ, ಪಕ್ಷಾತೀತವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಗಾಣಿಗ ಜನಾಂಗದವರು ಜಿ.ಎಸ್. ಬಸವರಾಜು ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.