ಮರ, ಮರಳು ಮಾಫಿಯಾ ವಿರುದ್ಧ ಕಿಡಿ
ಕ.ಪ್ರ.ವಾರ್ತೆ ತುಮಕೂರು ಮೇ 8
ಜಿಲ್ಲೆಯಲ್ಲಿ ನಡೆದಿರುವ ಮರ, ಮರಳು, ಶಿಕ್ಷಣ ಮಾಫಿಯಾ ವಿರುದ್ದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ.
ಜಿಲ್ಲೆಯಲ್ಲಿ ಅರಣ್ಯ ನಾಶ ತೀವ್ರಗತಿಯಲ್ಲಿ ಸಾಗಿದ್ದು, ಅರಣ್ಯಾಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣು, ಕಿವಿ ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು, ಹಾಸನ ಪ್ರಾದೇಶಿಕ ಅರಣ್ಯ ವಿಭಾಗಗಳಿಗೆ ಸಂಬಂಧಿಸಿದ ನೆಡುತೋಪುಗಳಲ್ಲಿ ತಯಾರಿಸಲಾಗಿರುವ ಅಂದಾಜು 2300 ಮೆಟ್ರಿಕ್ ಟನ್ ಪ್ರಮಾಣದ ಅಕೇಶಿಯಾ, ಫಲ್ಪ್ವುಡ್ನ್ನು ದಾಂಡೇಲಿಯ ವೆಸ್ಟ್ಕೋಸ್ಟ್ ಪೇಪರ್ ಮಿಲ್ಗೆ ಹಾಗೂ ಅಂದಾಜು 220 ಮೆಟ್ರಿಕ್ ಟನ್ ನೀಲಗಿರಿ ಫಲ್ಪ್ವುಡ್ನ್ನು ಹರಿಹರ ಫಾಲಿ ಫೈಬರ್ಸ್ ಇವರ ಡಾಬಸ್ಪೇಟೆ ಟೆಂಕಿ ಡಿಪೋ ಮತ್ತು 820 ಘನ ಮೀಟರ್ ಸೌದೆಯನ್ನು (ಕುಣಿಗಲ್) ಸಾಗಾಣಿಕೆ ಮಾಡಲು ಟೆಂಡರ್ ಕರೆದಿರುತ್ತಾರೆ.
ಆದರೆ ಟೆಂಡರ್ ನಿಯಮ ಪಾಲಿಸದೆ ಮೆಟ್ರಿಕ್ ಟನ್ 1 ಕ್ಕೆ 270 ರಿಂದ 300 ರು. ಗಳಿಗೆ ನಿಗಧಿಪಡಿಸಿ ( ಸಾಗಾಣಿಕಾ ವೆಚ್ಚ, ಲೋಡಿಂಗ್ ಮತ್ತು ಅನ್ಲೋಡಿಂಗ್ ಸೇರಿ) ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿದ್ದು, ಇದು ಅಪರಾಧವಾಗಿರುತ್ತದೆ ಎಂದು ದೂರಿದ್ದಾರೆ. ಸಾಮಾನ್ಯವಾಗಿ ಇಂದಿನ ಕನಿಷ್ಟ ಮಾರುಕಟ್ಟೆಯ ದರದ ರೀತ್ಯ 400 ರು. ಸಾಗಾಣಿಕಾ ವೆಚ್ಚ ಹಾಗೂ 200 ರು. ಲೋಡಿಂಗ್ ವೆಚ್ಚ, 70 ರು. ಅನ್ ಲೋಡಿಂಗ್ ವೆಚ್ಚ ಸೇರಿ 670 ರು. ಆಗಬಹುದಾಗಿದ್ದು, 1 ಲಾರಿಗೆ ಸುಮಾರು 6700 ರು. ಗಳಾಗಬಹುದಾಗಿದೆ. ಆದರೆ 2700 ರು. ಸಾಗಾಣಿಕಾ ವೆಚ್ಚ ನಿಗಧಿಪಡಿಸಿರುವುದನ್ನು ನೋಡಿದಲ್ಲಿ ಮರ ಸಾಗಾಣಿಕೆಗಿಂತ ಬೇರೆ ಉದ್ದೇಶವಿರುವುದು ಕಂಡು ಬರುತ್ತದೆ ಎಂದು ಸೊಗಡು ಆರೋಪಿಸಿದ್ದಾರೆ.
ಮರ ಸಾಗಾಣಿಕೆಗೆ ಮುನ್ನ ಮರಗಳನ್ನು ಕಡಿದಿದ್ದು, ಟೆಂಡರ್ ಪ್ರಕಟಣೆಯಲ್ಲಿ ಇಲ್ಲದೇ ಇರುವ ಸ್ಥಳದಲ್ಲಿ ಮರಗಳನ್ನು ಕಡಿದಿರಿವುದು ಅನುಮಾನಕ್ಕೆ ಕಾರಣವಾಗಿದೆ. ಅದರೊಂದಿಗೆ ಈ ಕೆಳಕಂಡ ತಪ್ಪುಗಳನ್ನು ಗಮನಿಸಲಾಗಿ, ತುಮಕೂರು ಜಿಲ್ಲೆಯಲ್ಲಿ ಮರಗಳ್ಳತನ, ಕಳ್ಳ ಸಾಗಾಣಿಕೆ ನಡೆಯುತ್ತಿರುವುದು ಕಂಡು ಬರುತ್ತದೆ ಎಂದು ಸೊಗಡು ಮಾಹಿತಿ ನೀಡಿದರು.
ಮರ ಕಡಿಯುವಾಗ ಅರಣ್ಯ ಇಲಾಖೆಯವರು ಸ್ಥಳದಲ್ಲಿರುವುದಿಲ್ಲ. ಕಡಿಯುತ್ತಿರುವ ಅಕೇಶಿಯಾ ಮರಗಳು 15 ರಿಂದ 20 ವರ್ಷಗಳೊಳಗಿನವು, ಹೀಗಾಗಿ ಇವು ಅನುಪಯುಕ್ತ. ಈ ಪ್ಲಾಂಟೇಷನ್ಗಳಲ್ಲಿ ನಮ್ಮ ಮೂಲ ಕಾಡು ಮರಗಳಿದ್ದು, ಅವುಗಳನ್ನು ಕಡಿದು, ಕಳ್ಳ ಸಾಗಾಣಿಕೆ ಮಾಡಲಾಗಿದೆ. ಇದೊಂದು ಕಾಡು ಕಡಿಯುವ ಕಾರ್ಯಕ್ರಮವಾಗಿದ್ದು, ಪ್ರಾಣಿ, ಪಕ್ಷಿಗಳ ಜೀವನ ಹಾಳು ಮಾಡುವ ಯೋಜನೆಯಾಗಿದೆ.
ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ಘಟಕದ ಅಧ್ಯಕ್ಷ ಕೆ.ಪಿ. ಮಹೇಶ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ಸನತ್ ಜಯಸಿಂಹ ಇದ್ದರು.
ಗೋಮಾಳ, ಪತ್ರಕರ್ತರ ವಿರುದ್ಧ ಹೇಳಿಕೆ ಸರಿಯಲ್ಲ
ಗೋಮಾಳ ವಶಪಡಿಸಿಕೊಂಡು, ಕೈಗಾರಿಕೆಗೆ ನೀಡುವುದಾಗಿ ಹೇಳಿ, ಹಾಗೆ ಹೇಳಿಲ್ಲ. ಪತ್ರಕರ್ತರು ಸುದ್ದಿ ತಿರುಚಿ ಬರೆದಿದ್ದಾರೆಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರ ಹೇಳಿಕೆ ಸರಿಯಲ್ಲ ಎಂದು ಸೊಗಡು ಶಿವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
12 ಕಡೆ ಟೆಂಡರ್, 34 ಕಡೆ ಕಡಿಯಲಾಗುತ್ತಿದೆ
ರಾಜ್ಯದಲ್ಲಿ ಈ ರೀತಿಯ ಕಾಡು ಕಡಿಯುವ ಚಟುವಟಿಕೆ ನಡೆಯುತ್ತಿರುವುದರಿಂದ ಕಾಡು ಪ್ರಾಣಿಗಳು ಊರಿಗೆ ಪದೇ-ಪದೇ ಬರುತ್ತಿವೆ. ತುಮಕೂರು ತಾಲೂಕಿನ ಹೊನ್ನೇನಹಳ್ಳಿ, ಬಿದನಗೆರೆ, ಬಿದರಕಟ್ಟೆ, ಮೇಣ ಸಂದ್ರ, ಕಟ್ಟೆ ಗೊಲ್ಲಹಳ್ಳಿ, ಈ ಪ್ರದೇಶಗಳಿಗೆ ಮಾತ್ರ ಟೆಂಡರ್ ಕರೆಯಲಾಗಿದೆ. ಆದರೆ ಬೆಳಗುಂಬದ ಹತ್ತಿರವಿರುವ ಪಂಡಿತನಹಳ್ಳಿ, ದೇವರಾಯನದುರ್ಗ, ಪ್ರಾಂಟೇಷನ್ ಪ್ರದೇಶ, ಸೀತಕಲ್ಲು ಪ್ಲಾಂಟೇಶನ್ ಗಳಲ್ಲಿ ಮರಗಳನ್ನು ಕಡಿದು ಲಾಟ್ ಹಾಕಲಾಗಿದೆ, ಸಾಗಣೆ ಮಾಡಲಾಗುತ್ತಿದೆ. ಇದೇ ರೀತಿ ಜಿಲ್ಲೆಯ ಇತರೆಡೆ ಮರಗಳನ್ನು ಕಡಿದು, ಕದ್ದು ಸಾಗಿಸಲಾಗುತ್ತಿದೆ ಎಂದು ದೂರಿದರು. ತುಮಕೂರು ಜಿಲ್ಲೆಯಲ್ಲಿ 12 ಕಡೆ ಟೆಂಡರ್ ಆಗಿದ್ದು, 34 ಪ್ಲಾಂಟೇಷನ್ ಗಳಲ್ಲಿ ಮರಗಳನ್ನು ಕಡಿಯುತ್ತಿದ್ದಾರೆಂದು ಸೊಗಡು ದೂರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

