ಪುರಸಭೆ ವ್ಯಾಪ್ತಿಯ ಮರಗಳ ರಕ್ಷಣೆ ಮಾಡಿ
ಕುಣಿಗಲ್ ಪುರಸಭೆ ವ್ಯಾಪ್ತಿಯ ಮರಗಳ ಬಗ್ಗೆ ಪರಿಸರ ವಿಭಾಗದ ಸಿಬ್ಬಂದಿ ಸಮರ್ಪಕ ಕ್ರಮ ಕೈಗೊಳ್ಳದ ಕಾರಣ ರಸೆ ್ತಬದಿಯ ಮರಗಳನ್ನು ಕ್ಷುಲಕ ಕಾರಣಕ್ಕೆ ಕಡಿದು ಸಾಗಿಸುತ್ತಿದ್ದು, ಸಂಬಂಧಪಟ್ಟ ಪುರಸಭೆಯ ನಿಷ್ಕ್ರಿಯತನಕ್ಕೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುರಸಭೆಯ ವ್ಯಾಪ್ತಿಯಲ್ಲಿ ಸಾವಿರಾರು ಮರಗಳಿದ್ದು, ಪುರಸಭೆಯ ಪರಿಸರ ವಿಭಾಗದ ಸಿಬ್ಬಂದಿ ಇಲ್ಲಿಯವರೆಗೆ ಸಮರ್ಪಕ ದಾಖಲೆಗಳನ್ನು ನಿರ್ವಹಿಸಿಲ್ಲ, ಈ ಬಗ್ಗೆ ಹಲವು ಬಾರಿ ನಾಗರಿಕರು, ಪರಿಸರ ಕಾಳಜಿ ಇರುವವರು ಮನವಿ ಸಲ್ಲಿಸಿದರೂ ಪುರಸಭೆ ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳದ ಕಾರಣ ಸಾಕಷ್ಟು ಮರಗಳನ್ನು ಮನಸೋ ಇಚ್ಚೆ ಕಡಿದು ಸಾಗಿಸಲಾಗುತ್ತಿದೆ. ಹಳೇ ರಾಷ್ಟ್ರೀಯ ಹೆದ್ದಾರಿ 48ರ ಕೆಆರ್ಎಸ್ ಅಗ್ರಹಾರ ಪ್ರದೇಶದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಸಾಕಷ್ಟು ಕಟ್ಟಡಗಳು ಮೇಲೆಳುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ, ಸೌಂದರ್ಯಕ್ಕೆ ಮರಗಳು ಅಡ್ಡಿಯಾಗುತ್ತಿವೆ ಎಂಬ ಕ್ಷುಲಕ ಕಾರಣಕ್ಕೆ ರಾಜರೋಶವಾಗಿ ಮರಗಳನ್ನು ಕಡಿದು ಧರೆಗುರುಳಿಸಲಾಗುತ್ತಿದೆ,
ಇನ್ನು ಅರಣ್ಯ ಇಲಾಖೆಗೆ ನೆಪಮಾತ್ರಕ್ಕೆ ಪ್ರಕ್ರಿಯ ಪೂರ್ಣಗೊಳಿಸುತ್ತಿದ್ದು, ಕೇವಲ ಒಂದು ಮರ ಹರಾಜು ಮಾಡಿದರೆ, ಇಲಾಖೆಯ ಕೆಳಹಂತದ ಸಿಬ್ಬಂದಿ ಮತ್ತು ಮರ ಸಾಗಾಣೆ ದಂಧೆಕೋರರ ಅಪವಿತ್ರ ಮೈತ್ರಿಯಿಂದ ಮೂರ್ನಾಲ್ಕು ಮರಗಳು ಧರೆಗುರುಳುತ್ತಿವೆ ಎಂದು ನಾಗರಿಕರು ಆರೋಪಿಸಿದ್ದಾರೆ. ಈ ಮದ್ಯೆ ಪುರಸಭೆಯ 18ನೇ ವಾರ್ಡ್ನ ಪಂಪ್ ಹೌಸ್ ಮುಂಭಾಗ ಕೇವಲ ಒಂದು ಮರ ಮಾತ್ರ ಶಿಥಿಲವಾಗಿದ್ದು, ಅರಣ್ಯ ಇಲಾಖಾಧಿಕಾರಿಗಳು ಸಂಬಂಧಪಟ್ಟ ಪುರಸಭೆಯೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ಕ್ರಮ ಕೈಗೊಂಡ ಪರಿಣಾಮ ಉತ್ತಮ ಗುಣಟ್ಟದ ಇನ್ನು ಎರಡು ಮರಗಳನ್ನು ಸುಸ್ಥಿತಿಯಲ್ಲಿದ್ದರೂ ಕಡಿದು ಸಾಗಿಸಿರುವ ಬಗ್ಗೆ ಪುರಸಭೆ ಸದಸ್ಯರು, ಅಧ್ಯಕ್ಷರು ಅರಣ್ಯ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು,ಪುರಸಭೆ ಪರಿಸರ ವಿಭಾಗ ಸಿಬ್ಬಂದಿ ನಿರ್ಲಕ್ಷ್ಯತನವನ್ನು ಖಂಡಿಸಿದ್ದಾರೆ. ಹೊಸದಾಗಿ ಮರಗಳನ್ನು ನೆಟ್ಟು ಪೋಷಿಸುವವರೆಗೂ ಹಿರಿಯರು ನಮಗಾಗಿ ನೆಟ್ಟು ಬೆಳೆಸಿ,ಬಿಟ್ಟಿಹೋಗಿರುವ ಮರಗಳನ್ನು ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
-ಪರಿಸರ ಪ್ರೇಮಿಗಳು, ಕುಣಿಗಲ್
ಶಾಲೆಯ ಮುಂದೆ ಕಸದ ರಾಶಿ
ಶತಮಾನಗಳ ಕಾಲ ಲಕ್ಷಾಂತರ ವಿದ್ಯಾರ್ಥಿಗಳು ಅಕ್ಷರ ಕಲಿತು, ಬದುಕನ್ನು ರೂಪಿಸಿಕೊಂಡಿರುವ ಶಾಲೆಗೆ ಕಸದ ಸಮಸ್ಯೆ ತಲೆನೋವಾಗಿದೆ.
ಇಲ್ಲಿ ಕಲಿತವರೆಲ್ಲಾ ಸೇರಿ ಶಾಲೆಯ ಶತಮಾನೋತ್ಸವ ಸಹ ಆಚರಿಸಿದ್ದಾರೆ. ಕೆಲವು ಮಂದಿ ತಾವು ಕಲಿತ ಶಾಲೆಯ ನೆನಪಿಗೆ ಅಲ್ಲಿನ ಬಡಮಕ್ಕಳಿಗೆ ಉಚಿತವಾಗಿ ಪುಸ್ತಕ ಬಟ್ಟೆ ಲೇಖನ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಇಂತಹ ಕಲಿಯುವ ಶಾಲೆ ಮುಂದೆ ಬುದ್ಧಿವಂತರೆನಿಸಿಕೊಂಡವರೆ ಕಸದ ರಾಶಿ ಹಾಕುತ್ತಿರುವುದು ತಲೆತಗ್ಗಿಸ ಬೇಕಾದ ಸಂಗತಿ. ಈ ಬೀದಿಯ ಎರಡು ಕಡೆಯಿರುವ ಮನೆಗಳ ಜನ ತಮ್ಮ ಮನೆಯ ಕಸ ತಂದು ಶಾಲೆಯ ಮುಂದೆ ಹಾಕುತ್ತಿದ್ದಾರೆ. ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜನ ಶಾಲೆ ಮುಂದೆ ಕಸದ ರಾಶಿ ತಂದು ಸುರಿಯುತ್ತಾರೆ. ಈ ಹಿಂದೆ ಶಾಲೆ ಅಭಿವೃದ್ಧಿ ಸಮಿತಿ ಬೇಡಿಕೆ ಮೇರೆಗೆ ಕಸದ ತೊಟ್ಟಿ ಇರಿಸಲಾಗಿತ್ತು. ಆದರೆ ಅದು ಶಿಥಿಲಗೊಂಡಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ಕಸ ತಂದು ಶಾಲೆ ಮುಂದೆ ಹಾಕುತ್ತಿದ್ದಾರೆ. ಜೊತೆಗೆ ಬಿಸಿಯೂಟ ಇದರ ಪಕ್ಕದಲ್ಲೇ ಮಾಡುತ್ತಿದ್ದು, ಅಲ್ಲಿಯೇ ಕುಳಿತು ಊಟ ಮಾಡುವ ವಿದ್ಯಾರ್ಥಿಗಳು ಇದರ ದುರ್ನಾತದಿಂದ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇನ್ನಾದರು ಪುರಸಭೆಯವರು ಇಲ್ಲಿ ಸುತ್ತಮುತ್ತಲ ಜನ ಕಸಹಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಶಾಲೆಯಲ್ಲಿ ಕಲಿಯುವ ಮಕ್ಕಳ ಆರೋಗ್ಯ ಕಾಪಾಡುವ ಹೊಣೆ ಹೊರಬೇಕಾಗಿದೆ.
ಯಶಸ್ವಿನಿ ಕಾರ್ಡ್ ಫಲಾನುಭವಿಗಳ ಸಮಸ್ಯೆ ಪರಿಹರಿಸಿ
ಕುಣಿಗಲ್ ತಾಲೂಕಿನ ವಿಎಸ್ಎಸ್ಎನ್ ಸೇರಿದಂತೆ ಕೆಲ ಸಹಕಾರ ಸಂಘದ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ಯಶಸ್ವಿನಿ ಕಾರ್ಡ್ ನೀಡುವಾಗ ಫಲಾನುಭವಿಗಳ ಹೆಸರು ಮತ್ತು ಕೆಲ ಅಂಶಗಳು ತಪ್ಪಾಗಿ ದಾಖಲಿಸುವ ಮೂಲಕ ಅಮಾಯಕ ಫಲಾನುಭವಿಗಳು ಸರ್ಕಾರದ ಸವಲತ್ತನ್ನು ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಕೆಳ ಹಂತದ ಸಿಬ್ಬಂದಿ ನಿರ್ಲಕ್ಷ್ಯ ವರ್ತನೆ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳ ಬೇಕಿದೆ. ತಾಲೂನಿನಾದ್ಯಂತ ಇರುವ ಹಲವು ವಿಎಸ್ಎಸ್ಎನ್ ಸಹಕಾರ ಸಂಘಗಳಲ್ಲಿ, ಯಶಸ್ವಿನಿ ಫಲಾನುಭವಿಗಳು ಸರಿಯಾದ ಮಾಹಿತಿ ನೀಡಿದ್ದರೂ, ಅದನ್ನು ದಾಖಲಿಸಿಕೊಳ್ಳುವ ವೇಳೆಯಲ್ಲಿ ಕೆಳಹಂತದ ಸಿಬ್ಬಂದಿ, ಕಾರ್ಯದರ್ಶಿಗಳು ತಪ್ಪಾಗಿ ನಮೂದಿಸುವ ಮೂಲಕ ತುರ್ತು ಚಿಕಿತ್ಸೆ ಸಂಧರ್ಭದಲ್ಲಿ ಯೋಜನೆ ಉಪಯೋಗ ಪಡೆಯಲು ತೊಂದರೆಯಾಗುತ್ತಿದೆ. ಈ ಬಗ್ಗೆ ಕಾರ್ಯದರ್ಶಿಗಳನ್ನು ಕೆಳಿದರೆ ಉದ್ದಟತನದಿಂದ ವರ್ತಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.
-ಯಶಸ್ವಿನಿ ಕಾರ್ಡ್ ಫಲಾನುಭವಿಗಳು, ಕುಣಿಗಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

