ತುಮಕೂರು

ಗೈರು: ಅಧಿಕಾರಿ ಅಮಾನತಿಗೆ ತಾಕೀತು

Published On :

ಕ.ಪ್ರ.ವಾರ್ತೆ    ತುಮಕೂರು    ಮೇ 12
ತುಮಕೂರು ಆಹಾರ ಗುಣಮಟ್ಟ ಸಂರಕ್ಷಣಾಧಿಕಾರಿ ಅವಿನಾಶ್ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ ಆಹಾರ ಗುಣಮಟ್ಟ ಸಂರಕ್ಷಣಾಧಿಕಾರಿಯನ್ನು ಅಮಾನತುಗೊಳಿಸಿ, ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಆರೋಗ್ಯ ಸಚಿವರು ಸಭೆಯಲ್ಲಿ ಆದೇಶಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಉಪಸ್ಥಿತರಿದ್ದರು.  
ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ವೇಳೆ ಸಭೆಗೆ ಬರುವಂತೆ ಸೂಚನೆ ನೀಡಿದ್ದರೂ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಪುಡ್ ಸೇಪ್ಟಿ ಅಧಿಕಾರಿ (ಆಹಾರ ಗುಣಮಟ್ಟ ಭದ್ರತಾಧಿಕಾರಿ) ಯನ್ನು ಕೂಡಲೇ ಸೇವೆಯಿಂದ ಅಮಾನತು ಪಡಿಸುವಂತೆ ಡಾ.ಚನ್ನಮಲ್ಲಯ್ಯಗೆ ಆದೇಶಿಸಿದರು.
ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗಗಳ ಬಗ್ಗೆ ಇಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುವುದು ಗೊತ್ತಿದ್ದರೂ, ಸಾಂಕ್ರಾಮಿಕ ರೋಗ ಹರಡುವ ಒಂದು ವಿಧಾನವಾದ ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ನೀಡಬೇಕಾದ ಅಧಿಕಾರಿ ಸಭೆಗೆ ಗೈರು ಹಾಜರಾಗಿರುವುದಲ್ಲದೆ, ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಹೋಗಿರುವುದು ಅಕ್ಷಮ್ಯ ಎಂದರು. ಜೆಡಿ ಯವರ ಕಚೇರಿಗೆ ಹೋಗಿ ಬರುವುದಾಗಿ ತಿಳಿಸಿದ್ದಾರೆ ಎಂದು ಸಹೋದ್ಯೋಗಿ ಅಧಿಕಾರಿ ನೀಡಿದ ಉತ್ತರದಿಂದ ಮತ್ತಷ್ಟು ಕೋಪಗೊಂಡ ಸಚಿವರು, ಜೆಡಿ ಕಚೇರಿಗಿಂತ ಇಂದಿನ ಸಭೆ ಮುಖ್ಯ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ ಎಂದು ಖಾರವಾಗಿ ನುಡಿದರು.
ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಿ: ಮಳೆಗಾಲ ಪ್ರಾರಂಭವಾದ ಮೊದಲ ಮೂರು ತಿಂಗಳು ಸಾಂಕ್ರಾಮಿಕ ರೋಗಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದರಿಂದ ಸಾಕಷ್ಟು ಸಾವು, ನೋವುಗಳು ಹೆಚ್ಚಾಗುತ್ತವೆ. ಆದ್ದರಿಂದ ಈ ಮೂರು ತಿಂಗಳು ಆರೋಗ್ಯ ಇಲಾಖೆಯ ಅಧಿಕಾರಿಗಳು ತೀವ್ರ ನಿಗಾವಹಿಸಿ ಕೆಲಸ ಮಾಡಿದರೆ ಒಂದು ವರ್ಷಕಾಲ ಆರಾಮವಾಗಿ ಇರಬಹುದು. ಆದ್ದರಿಂದ ಸ್ಥಳೀಯ ಸಂಸ್ಥೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಮೂಲವಾದ ಕುಡಿಯುವ ನೀರು, ಘನತ್ಯಾಜ್ಯ ವಿಲೇವಾರಿ ಮತ್ತು ಆಹಾರದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಆರೋಗ್ಯ ಸಚಿವರು ಸೂಚಿಸಿದರು. ಕೂಡಲೇ ವಾಟರ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಂತೆ, ಕಸ ವಿಲೇವಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಟಿ.ಎಚ್ಒ ಭೇಟಿ ನೀಡಲು ಸೂಚನೆ: ತುಮಕೂರು ಜಿಲ್ಲೆಯ ಪ್ರತಿ ಪಿಹೆಚ್ಒಗೆ ಅಯಾಯ ತಾಲೂಕಿನ ಆರೋಗ್ಯಾಧಿಕಾರಿಗಳು ತಿಂಗಳಲ್ಲಿ ಒಂದು ಬಾರಿ ಭೇಟಿ ನೀಡಿ ಗ್ರಾಮದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಶಾಸಕರೊಂದಿಗೆ ಮಾತುಕತೆ ನಡೆಸಿ ಪಿ.ಹೆಚ್.ಸಿ.ಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡುವ ಜವಾಬ್ದಾರಿ ಟಿಎಚ್ಒ ಗಳ ಮೇಲಿದೆ. ಅದೇ ರೀತಿ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ಸಚಿವರು,ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಪ್ರತಿ ಜಿಲ್ಲೆಯಲ್ಲಿ  ಮೆಗಾ ಆರೋಗ್ಯ ಅದಾಲತ್ ನಡೆಸುವುದಾಗಿ ಯು.ಟಿ.ಖಾದರ್ ತಿಳಿಸಿದರು.
ಶೌಚಾಲಯದಲ್ಲಿ ಆಹಾರ: ಇದಕ್ಕೂ ಮೊದಲು ಜಿಲ್ಲಾಸ್ಪತ್ರೆ ಪರಿಶೀಲಿಸಿದ ಸಚಿವರು, ರೋಗಿಗಳಿಂದ ಅಭಿಪ್ರಾಯ ಪಡೆದರು. ಹೆರಿಗೆ ವಾರ್ಡ್, ಒಳರೋಗಿಗಳು, ಮಕ್ಕಳ ವಾರ್ಡ್ಗೆ ಭೇಟಿ ನೀಡಿದ ಸಚಿವರು ದೂರುಗಳ ಸುರಿಮಳೆ ಸ್ವೀಕರಿಸಿದರು. ವೈದ್ಯರ ನಿರ್ಲಕ್ಷ್ಯ, ಸೇವೆ ಸರಿಯಾಗಿಲ್ಲದಿರುವ ಕುರಿತು ದೂರುಗಳು ಕೇಳಿ ಬಂದವು.
ಈ ಸಂದರ್ಭದಲ್ಲಿ ರೋಗಿಗಳ ಕಡೆಯವರು ತಂದಿದ್ದ ಆಹಾರವನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುರಕ್ಷತೆಯ ಕೊಠಡಿಯಲ್ಲಿರಿಸದೆ, ಶೌಚಾಲಯದ ಕೊಠಡಿಯೊಂದರಲ್ಲಿರಿಸಿರುವುದು ಸಚಿವರ ಗಮನಕ್ಕೆ ಬಂತು. ಆಹಾರ, ಸ್ವಚ್ಚತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಸಚಿವರು ಮತ್ತಷ್ಟು ಕಿಡಿ-ಕಿಡಿಯಾದರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಪಾವಗಡ ಶಾಸಕ ತಿಮ್ಮರಾಯಪ್ಪ, ಕೊರಟಗೆರೆ ಶಾಸಕ ಪಿ. ಸುಧಾಕರ್ ಲಾಲ್, ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್, ಮೇಯರ್ ಗೀತಾ ರುದ್ರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.



ವಾರ್ತಾಧಿಕಾರಿ ಮೊಬೈಲ್ ನಿಶ್ಯಬ್ಧ!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪತ್ರಕರ್ತರಿಗೆ ಮಾಹಿತಿ ನೀಡದ ವಾರ್ತಾಧಿಕಾರಿ ವಿರುದ್ದ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರರು. ಪತ್ರಕರ್ತರ ಎದುರಲ್ಲೇ ವಾರ್ತಾಧಿಕಾರಿಗೆ ಫೋನಾಯಿಸಿದ ಸಚಿವರು, ಮೊಬೈಲ್ ಸ್ವಿಚ್ ಆಪ್ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸಹ ವಾರ್ತಾಧಿಕಾರಿ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಬೇರೊಬ್ಬ ಅಧಿಕಾರಿಯನ್ನು ಶೀಘ್ರದಲ್ಲೇ ತುಮಕೂರಿಗೆ ವರ್ಗಾವಣೆ ಮಾಡಿಸುವ ಭರವಸೆ ನೀಡಿದರು.
ದೊಡ್ಡವರ ವಿರುದ್ಧ ಕ್ರಮ ಕೈಗೊಳ್ಳಿ
ತಪ್ಪು ಮಾಡುವ ದೊಡ್ಡ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಆಗ ತಂತಾನೇ ಸಣ್ಣ ಅಧಿಕಾರಿಗಳು, ಸಿಬ್ಬಂದಿ ದಾರಿಗೆ ಬರುತ್ತಾರೆ ಎಂದು ಸಚಿವ ಖಾದರ್ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.