'ವಾಲ್ಮೀಕಿ ಯಾರು' ಮುಟ್ಟುಗೋಲು ಹಾಕಿ
ತುಮಕೂರು: ವಾಲ್ಮೀಕಿ ಯಾರು? ಕೃತಿಯಲ್ಲಿ ಮಹರ್ಷಿ ವಾಲ್ಮೀಕಿ ಅವರನ್ನು ಲೇಖಕ ನಾರಾಯಣಚಾರ್ಯ ಅಸಂಬದ್ಧವಾಗಿ ಚಿತ್ರಿಸಿದ್ದು, ಈ ಕೂಡಲೇ ಕೃತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಅಲ್ಲದೇ ಲೇಖಕ ನಾರಾಯಣಚಾರ್ಯ ಅವರನ್ನು ಬಂಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ವಿಜ್ಞಾನದ ಸ್ಪರ್ಶವಿಲ್ಲ: ವಾಲ್ಮೀಕಿ ಯಾರು? ಪುಸ್ತಕವು ತಪ್ಪು ಗ್ರಹಿಕೆ ಹಾಗೂ ಕಲ್ಪನೆಗಳಿಂದ ಕೂಡಿದ ಕೃತಿಯಾಗಿದೆ. ಈ ಪುಸ್ತಕಕ್ಕೆ ಯಾವುದೇ ಆಕರ ಗ್ರಂಥಗಳ ಆಧಾರವಿಲ್ಲ. ವಿಜ್ಞಾನದ ಸ್ಪರ್ಶವಿಲ್ಲ. ಕಾಗಕ್ಕ- ಗುಬ್ಬಕ್ಕನ ಕಥೆಯಂತೆ ಇರುವ ಈ ಪುಸ್ತಕದಲ್ಲಿ ವಾಲ್ಮೀಕಿ ಮಹರ್ಷಿಯು ವಾಲ್ಮೀಕಿ ಸಮುದಾಯದ ಸಾಂಸ್ಕೃತಿಕ ನಾಯಕನಲ್ಲ. ಈತ ಬ್ರಾಹ್ಮಣನೆಂದು ತಿರುಚುವ ಪ್ರಯತ್ನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸಂವಿಧಾನಾತ್ಮಕವಾಗಿ ಎಲ್ಲರೂ ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಮಾನವಾಗಿ ಬದುಕುವ ಹಕ್ಕು ಸ್ವಾತಂತ್ರ್ಯವನ್ನು ಪಡೆದಿದ್ದಾರೆ. ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಹೋದರರಂತೆ ಅನ್ಯೋನ್ಯವಾಗಿ ಬದುಕುತ್ತಿರುವ ಈ ಸಂದರ್ಭದಲ್ಲಿ ಸಮುದಾಯಗಳ ನಡುವೆ ಒಡಕು ಉಂಟು ಮಾಡುತ್ತಿದ್ದಾರೆ. ಇದು ಖಂಡನೀಯ ಎಂದಿದ್ದಾರೆ.
ವಾಲ್ಮೀಕಿ ಸೇರಿದಂತೆ ಎಲ್ಲಾ ಅಲಕ್ಷಿತ ಸಮುದಾಯಗಳ ಭಾವನೆ, ಬದುಕು, ನಂಬಿಕೆಗೆ ಅವಮಾನ ಮಾಡುವ, ಮಾನವ ಹಕ್ಕುಗಳನ್ನು ನಿರಾಕರಿಸುವ ಕೆ.ಎಸ್. ನಾರಾಯಣಚಾರ್ಯ ಅವರನ್ನು ಈ ಕೂಡಲೇ ಬಂಧಿಸಬೇಕು. ಎಸ್.ಸಿ., ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಇವರು ಬರೆದ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷ ಪ್ರತಾಪ್ ಮದಕರಿ, ಮದಕರಿ ನಾಯಕ ಸೇನೆ ಜಿಲ್ಲಾಧ್ಯಕ್ಷ ಎಸ್.ಕೆ. ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ತು.ಬಿ. ಮಲ್ಲೇಶ್, ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ದಯಾನಂದ, ಜೆಡಿಎಸ್ ಜಿಲ್ಲಾ ಘಟಕದ ಕೃಷ್ಣಮೂರ್ತಿ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

