ಕೊಳವೆಬಾವಿ ಕುರಿತು ತೀವ್ರ ವಿವಾದ
ಕುಣಿಗಲ್: ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುತ್ತಿರುವ ಸಮಯದಲ್ಲಿ ಗ್ರಾಪಂ ಸದಸ್ಯರೊಬ್ಬರು, ಗ್ರಾಪಂಗೆ ಸೇರಿದ ಜಾಗದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಿಕೊಂಡು ತಮ್ಮ ಮನೆಗೆ ನೀರು ಪಡೆಯಲೆತ್ನಿಸಿದ್ದಾರೆಂದು ಆರೋಪಿಸಿದ್ದು ಹುಲಿಯೂರುದುರ್ಗ ಗ್ರಾಮದಲ್ಲಿ ಈಗ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಗ್ರಾಮಸ್ಥರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ಸರ್ಕಾರದ ನೂತನ ಅಂತರ್ಜಲ ಸಂರಕ್ಷಣೆ ಅಧಿನಿಯಮದಡಿಯಲ್ಲಿ ನೋಟಿಸ್ ಜಾರಿ ಮಾಡಿರುವ ಘಟನೆ ವರದಿಯಾಗಿದೆ. ತಾಲೂಕಿನ ಪ್ರಮುಖ ಗ್ರಾಮವಾದ ಹುಲಿಯೂರುದುರ್ಗದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಐದಕ್ಕೂ ಹೆಚ್ಚು ಟ್ಯಾಂಕರ್ಗಳ ಮೂಲಕ ಬೆಳಗಿನಿಂದ ಸಂಜೆವರೆಗೆ ಗ್ರಾಪಂ ವ್ಯಾಪ್ತಿಯಲ್ಲಿನ ಅಗತ್ಯ ಇರುವೆಡೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಮಧ್ಯೆ ಇದೇ ಗ್ರಾಪಂನ 3ನೇ ಬ್ಲಾಕ್ ಸದಸ್ಯರೊಬ್ಬರು ತಮ್ಮ ಮನೆಯ ಹಿಂಭಾಗದಲ್ಲಿ ಗ್ರಾಮಪಂಚಾಯಿತಿಗೆ ಸೇರಿದ ರಸ್ತೆ ಪ್ರದೇಶಕ್ಕೆ ಹೊಂದುಕೊಂಡಂತೆ ಹೊಸದಾಗಿ ಕೊಳವೆಬಾವಿ ಕೊರೆಸಿಕೊಂಡು, ತಮ್ಮ ಮನೆಗೆ ನೀರು ಪಡೆಯಲು ಮುಂದಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತೆನ್ನಲಾಗಿದೆ.
200 ಅಡಿ ಅಂತರ: ಹೊಸದಾಗಿ ಕೊರೆಸಲಾದ ಕೊಳವೆ ಬಾವಿಗೂ ಗ್ರಾಮ ಪಂಚಾಯಿತಿ ಜನತೆಗೆ ಕುಡಿಯುವ ನೀರು ಪೂರೈಕೆಗೆ ಈಗಾಗಲೆ ಹಲವು ವರ್ಷಗಳ ಹಿಂದೆ ಕೊರೆಸಿರುವ ಕೊಳವೆ ಬಾವಿಗೂ ಕೇವಲ ಇನ್ನೂರು ಅಡಿ ಅಂತರವಿದ್ದು ಗ್ರಾಪಂ ಸದಸ್ಯರೇ ನಿಯಮ ಉಲ್ಲಂಘಿಸಿರುವುದರಿಂದ ಗ್ರಾಮಸ್ಥರು, ಗ್ರಾಪಂ ಅಧ್ಯಕ್ಷರು ಸೇರಿದಂತೆ ಪಿಡಿಒ ಹಾಗೂ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪಿಡಿಒ ವಿನಾಯಕ್, ಗ್ರಾಪಂ ಪ್ರದೇಶದಲ್ಲಿ ಬೋರ್ ಕೊರೆಸಿರುವ ಸದಸ್ಯರ ಮನೆಯವರಿಗೆ ಸರ್ಕಾರದ ಹೊಸ ಆದೇಶದ ಮೇರೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಶೀಘ್ರವಾಗಿ ನೋಟಿಸ್ಗೆ ಉತ್ತರಿಸದಿದ್ದಲ್ಲಿ ಕೊಳವೆಬಾವಿಯನ್ನು ಪಂಚಾಯಿತಿಗೆ ವಶಪಡಿಸಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಪ್ರೇರಿತ: ಆದರೆ, ಗ್ರಾಪಂ ಸದಸ್ಯ ಕೃಷ್ಣಪ್ಪನವರ ಪುತ್ರ ಪ್ರಕಾಶ್, ಗ್ರಾಮಪಂಚಾಯಿತಿ ನೋಟಿಸ್ ಜಾರಿಗೊಳಿಸಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತಾವು ತಮಗೆ ಸೇರಿದ ಪ್ರದೇಶದಲ್ಲೆ ಬೋರ್ ಕೊರೆಸಿ, ನಮ್ಮ ಮನೆಗೆ ಸೇರಿದಂತೆ ಅಕ್ಕಪಕ್ಕದ ಮನೆಯವರಿಗೆ ನೀರು ಪೂರೈಸಲು ಸಿದ್ಧವಿದ್ದು, ಗ್ರಾಮಪಂಚಾಯಿತಿಯಲ್ಲಿನ ಕೆಲ ಜನಪ್ರತಿನಿಧಿಗಳು ರಾಜಕೀಯ ಪ್ರೇರಿತ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ
ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಪಂ ಅಧ್ಯಕ್ಷ ವೆಂಕಟೇಶ್, ಸದರಿ ವಿಷಯದಲ್ಲಿ ಗ್ರಾಮಸ್ಥರು ದೂರು ನೀಡಿದ್ದು, ಗ್ರಾಪಂ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದಿದ್ದಾರೆ. ಗ್ರಾಪಂ ಪಿಡಿಒ ಸರ್ಕಾರದ ನೂತನ ನಿಯಮಾನುಸಾರ ಕ್ರಮ ಕೈಗೊಳ್ಳಲು ಮುಂದಿನ ಮಾರ್ಗದರ್ಶನಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು ಅವರ ಸೂಚನೆ ಮತ್ತು ಗ್ರಾಪಂ ತೀರ್ಮಾನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸರ್ಕಾರ ಅಂತರ್ಜಲ ಸಂರಕ್ಷಣೆ ಮಾಡಲು ಮನ ಬಂದಂತೆ ಕೊಳವೆಬಾವಿ ಕೊರೆಯುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಂದಿರುವ ಹೊಸ ನಿಯಮ ತಾಲೂಕಿನಲ್ಲಿ ಮೊದಲ ಬಾರಿಗೆ ಪ್ರಯೋಗಕ್ಕೆ ಮುಂದಾಗಿರುವುದು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತದೆಯೆ ಎಂದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

