ಮೀನುಗಾರರ ಪ್ರಯೋಜನಕ್ಕೆ ಬಾರದ ಕಚೇರಿ
ಕುಣಿಗಲ್ ತಾಲೂಕು ಕಚೇರಿ ಅವರಣದಲ್ಲಿರುವ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮೀನುಗಾರರ ಪಾಲಿಗೆ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಚೇರಿಯಲ್ಲಿ ಯಾವಾಗಲೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿರದೆ ಕುರ್ಚಿ ಖಾಲಿ ಇರುತ್ತದೆ. ಇನ್ನು ಸರ್ಕಾರದಿಂದ ಮೀನುಗಾರರಿಗೆ ಬರಬೇಕಾದ ಸವಲತ್ತುಗಳ ಬಗ್ಗೆಯಾಗಲಿ, ವಿವಿಧ ಕೆರೆಗಳಲ್ಲಿ ಮೀನು ಹಕ್ಕು ಗುತ್ತಿಗೆಗೆ ಕೊನೆಯಾಗುವ ದಿನಾಂಕ ಅಥವಾ ಪಾಶುವಾರು ಹರಾಜು ಮಾಡುವ ದಿನಾಂಕಗಳ ಬಗ್ಗೆ ಸಮರ್ಪಕ ಮಾಹಿತಿಗಳನ್ನು ಪ್ರಚುರ ಪಡಿಸುತ್ತಿಲ್ಲ. ಮೀನುಗಾರರಲ್ಲದ ಕೇವಲ ರಾಜಕಾರಣಿಗಳ ಹಿಂಬಾಲಕರಿಗೆ ಗುತ್ತಿಗೆ ಹರಾಜಿನ ಬಗ್ಗೆ ಮಾಹಿತಿಗಳು ಪಡೆದು ಮೀನುಗಾರರಿಗಿಂತ ಮೊದಲೆ ಅವರೆ ಗುತ್ತಿಗೆ ಪಡೆದು ಮೀನುಗಾರರನ್ನು ಶೋಷಿಸುವಂತ ವಾತಾವರಣಕ್ಕೆ ಸ್ಥಳೀಯ ಕಚೇರಿ ಕಾರಣವಾಗಿದೆ. ಇನ್ನು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ನಿಷೇಧಿತ ತಳಿಯ ಮೀನುಗಳ ಸಾಕಾಣೆ ಮತ್ತು ಮಾರಾಟ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಅಪಾಯಕಾರಿ ಮೀನುಗಳ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು ಇನ್ನಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಮೀನುಗಾರಿಕೆಯನ್ನೆ ಕುಲಕಸುಬನ್ನಾಗಿಸಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂತ್ರಸ್ಥ ಮೀನುಗಾರರ ಮನವಿ.
ಐತಿಹಾಸಿಕ ಪಂಚ ಕಲ್ಯಾಣಿಗಳ ನಿರ್ಲಕ್ಷ್ಯ
ಮಧುಗಿರಿಯಲ್ಲಿ ಐತಿಹಾಸಿಕ ಪಂಚ ಕಲ್ಯಾಣಿಗಳು ಆಳುವವರ ನಿರ್ಲಕ್ಷ್ಯಕ್ಕೊಳಾಗಾಗಿ ಅವಸಾನದ ಅಂಚಿನಲ್ಲಿವೆ. ನಗರದ ಜನರ ಬಳಕೆಗೆ ಪೂರ್ವಿಕರು ಕಟ್ಟಿಸಿದ್ದ ಕಲ್ಯಾಣಿಗಳು ನೇಪಥ್ಯಕ್ಕೆ ಸರಿದು ನಿರ್ವಹಣೆ ಇಲ್ಲದೆ ಗಿಡ, ಗೆಂಟೆ ಬೆಳೆದು ಕಸ, ಕಡ್ಡಿ ತುಂಬುವ ತೊಟ್ಟಿಗಳಾಗಿ ಮುಚ್ಚಿ ಹೋಗುತ್ತಿವೆ.
ಪಟ್ಟಣದ ಜನಾಯ್ಯನ ಭಾವಿ, ಅರಸನ ಕಲ್ಯಾಣಿ ಮತ್ತು ಪ್ರಧಾನರ ಭಾವಿ ಸೇರಿದಂತೆ ಪಟ್ಟಣದಲ್ಲಿ ಅನೇಖ ಕಲ್ಯಾಣಿಗಳು ಪುಷ್ಕರಿಣಿಗಳನ್ನು ಪುರಾತನ ಕಾಲದಲ್ಲಿ ಜನರ ಕಲ್ಯಾಣಕ್ಕಾಗಿ ಪೂರ್ವಿಕರು ಕಟ್ಟಿದ್ದರು. ಅವುಗಳು ಕಾಲ ಕ್ರಮೇಣ ಸಮರ್ಪಕ ನಿರ್ವಹಣೆ ಇಲ್ಲದೆ ಮುಚ್ಚಿ ಹೋಗಿ ಯಾರಿಗೂ ಬೇಡವಾದ ಕಲ್ಯಾಣಿಗಳಾಗಿ ಮಾರ್ಪಟ್ಟು ಅವಸಾನದ ಹಾದಿ ಹಿಡಿದಿವೆ.
ಬಹಳ ಹಿಂದೆ ಉಮಾಮಹದೇವನ್ ಎಂಬ ಉಪಭಾಗಾಧಿಕಾರಿ ಮಧುಗಿರಿಗೆ ಬಂದಿದ್ದರು.ಆಗ ಇಲ್ಲಿನ ಐತಿಹಾಸಿಕ ಕೋಟೆ, ಕೊತ್ತಲು, ಏಕಶಿಲಾ ಬೆಟ್ಟ, ಕಲ್ಯಾಣಿ, ಪುಷ್ಕರಿಣಿಗಳನ್ನು ಕಂಡು ಮುಚ್ಚಿ ಹೋಗಿದ್ದ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಬೆಳಕು ಚಲ್ಲಿದ್ದರು. ಈ ಪೈಕಿ ಸದ್ಯಕ್ಕೆ ಶಿರಾ ಗೇಟಿನ ಅರಸನ ಕಲ್ಯಾಣಿ ಶಾಸಕ ಕೆ.ಎನ್. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಪುರಸಭೆ ಅಧಿಕಾರಿಗಳು ಸ್ವಚ್ಛತೆ ಕಾಪಾಡಿ ತಕ್ಕ ಮಟ್ಟಿಗೆ ನಿರ್ವಹಣೆ ಮಾಡಿದ್ದಾರೆ. ಇದರ ಮೆಟ್ಟಿಲುಗಳ ಮೇಲೆ ಹನುಮಂತ, ಗಣಪತಿ, ಕಾಲ ಭೈರವನ ಮೂರ್ತಿ ಕೆತ್ತಿದ್ದಾರೆ. ಶಾಸನದ ಪ್ರಕಾರ 1621ರಲ್ಲಿ ಈ ಕಲ್ಯಾಣಿ ಕಟ್ಟಲಾಗಿದೆ.
ಇದರ ಪಕ್ಕದಲ್ಲೇ ಇರುವ ಜನಾಯ್ಯನ ಕಲ್ಯಾಣಿ ಅವಾಸನದಲ್ಲಿದ್ದು ಗಿಡ, ಗೆಂಟೆ ಬೆಳೆದು ಹಾಳಾಗಿದೆ. ಇದರಲ್ಲಿ ಗಜಲಕ್ಷ್ಮೀಯಿಂದ ಕೂಡಿದ ಪ್ರಭಾವಳಿಯಿದೆ. ಹೆಬ್ಬಾಗಿಲಿನಂತಿರುವ ಪ್ರವೇಶದ್ವಾರವಿದೆ. ಅದರಲ್ಲಿ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಹಾಗೂ ಒಬ್ಬ ರಾಕ್ಷಸನ ಮೇಲೇರಿ ತುಳಿಯುತ್ತಿರುವಂತೆ ಕಾಣುತ್ತಿದ್ದು ಈ ಕಲ್ಯಾಣಿ ವಾಸ್ತು ಶಿಲ್ಪಕ್ಕೆ ಹೆಸರಾಗಿದೆ.
ಪ್ರಧಾನರ ಕಲ್ಯಾಣಿ ಕೂಡ ಅನೈತಿಕ ಚಟುವಟಿಕೆಗಳ ತಾಣವಾಗಿ ನಿರ್ವಹಣೆ ಇಲ್ಲದೆ ಗಿಡ, ಗೆಂಟೆ ಬೆಳೆದು ನೋಡಲು ಅಸಹ್ಯ ಏನಿಸುತ್ತಿದೆ.ಈ 3 ಕಲ್ಯಾಣಿಗಳ ಪುನಶ್ಚೇತನಕ್ಕಾಗಿ ಈ ಹಿಂದೆ ಸುಮಾರು 10 ಲಕ್ಷ ರು.ವೆಚ್ಚದಲ್ಲಿ ಸ್ವಚ್ಚತೆ ಮಾಡಿದ್ದರು ನಿರ್ವಹಣೆ ಇಲ್ಲದೆ ಮತ್ತೆ ದುಸ್ಥಿತಿ ತಲುಪಿವೆ. ಈ ಪೈಕಿ ಶಿರಾ ಗೇಟಿನ ಅರಸನ ಕಲ್ಯಾಣಿ ಒಂದು ಚನ್ನಾಗಿದೆ. ಇನ್ನುಳಿದ ಕಲ್ಯಾಣಿಗಳನ್ನು ಕಡೆಗಣಿಸಿದ್ದರ ಪರಿಣಾಮ ಮತ್ತೆ ಅವು ಮುಚ್ಚಿ ಹೋಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಅವಸಾನದತ್ತ ಸಾಗಿವೆ. ಇನ್ನು ಅನೇಕ ಕಲ್ಯಾಣಿಗಳನ್ನು ಪತ್ತೆ ಹಚ್ಚಿ ಪುರಾತನ ಕಾಲದ ಕಲ್ಯಾಣಿಗಳನ್ನು ಶಾಶ್ವತವಾಗಿ ಉಳಿಸಲು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಮಧುಗಿರಿ ಜಿಲ್ಲಾ ಕೇಂದ್ರ ಮತ್ತು ಪ್ರವಾಸೋದ್ಯಮ ಕೇಂದ್ರವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಹಾಗಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯಬೇಕಾದರೆ ಇಂತಹ ಐತಿಹಾಸಿಕ ಪವಿತ್ರ ಕಲ್ಯಾಣಿಗಳನ್ನು ಸಂರಕ್ಷಿಸುವ ಜತೆಗೆ ಸುತ್ತಲು ಪಾರ್ಕ ಬೆಳಸಿ ಬರುವ ಪ್ರವಾಸಿಗರಿಗೆ ಮತ್ತು ನಾಗರಿಕರಿಗೆ ಅನುಕೂಲ ಕಲ್ಪಿಸುವ ಅಗತ್ಯವಿದೆ.
ಪಾರ್ಕುಗಳು ನಾಗರಿಕರ ಅನುಕೂಲಕ್ಕೆ ಸಿಗಲಿ
ಕುಣಿಗಲ್ ಪಟ್ಟಣದ ವ್ಯಾಪ್ತಿಯಲ್ಲಿ ಅಧಿಕೃತವಾಗಿ ನಾಲ್ಕು ಪುರಸಭೆ ಪಾರ್ಕುಗಳು ಅಸ್ತಿತ್ವದಲ್ಲಿದ್ದು ನಾಲ್ಕು ಪಾರ್ಕುಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಕಳೆದೊಂದು ದಶಕದಲ್ಲಿ 80 ಲಕ್ಷ ರು.ಗಳಿಗೂ ಹೆಚ್ಚು ವಿನಿಯೋಗಿಸಲಾಗಿದೆ. ಆದರೆ ಪಾರ್ಕುಗಳಲ್ಲಿ ನಾಗರಿಕರು ಬಂದು ಕುಳಿತು ಹೋಗುವಂಥ ವಾತಾವರಣ ನಿರ್ಮಾಣವಾಗದಿರುವುದು ಪುರಸಭೆ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದ್ದು ಇನ್ನಾದರೂ ಆಡಳಿತ ಎಚ್ಚೆತ್ತು ಪಾರ್ಕುಗಳು ನಾಗರಿಕರ ಅನುಕೂಲಕ್ಕೆ ಸಿಗುವ ವಾತಾವರಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಪಾರ್ಕ್ನಲ್ಲಿ ಹತ್ತಿರದಲ್ಲಿ ಪಂಪ್ ಹೌಸ್ ಇದ್ದರೂ ಅದರಿಂದ ಪೋಲಾಗುವ ನೀರನ್ನು ಬಳಸಿಕೊಂಡು ಪಾರ್ಕನ್ನು ಹಸಿರುಗೊಳಿಸಬಹುದಾಗಿದೆ. ಆದರೆ ಈ ಬಗ್ಗೆ ಗಮನ ಹರಿಸದ ಕಾರಣ ಇಂದು ಪಾರ್ಕಿನಲ್ಲಿ ಹಸಿರು ಮಾಯವಾಗುವುದರ ಜೊತೆಯಲ್ಲಿ ಹುಲ್ಲು ಹಾಸಿನ ಜೊತೆಯಲ್ಲಿ ಮುಳ್ಳಿನ ಗಿಡಗಂಟಿಗಳು ಬೆಳೆದಿವೆ. ವೈಕೆಆರ್ ಪಾರ್ಕಿನ ಪಕ್ಕದಲ್ಲೂ ಸಹ ಪಂಪ್ ಹೌಸ್ ಇದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಇತ್ತೀಚೆಗಷ್ಟೆ ಬೆಂಕಿ ಬಿದ್ದು ಅಲಂಕಾರಿಕ ಗಿಡಗಳು ಸುಟ್ಟುಹೋಗಿ ನಷ್ಟವಾಗಿದೆ.
ಇನ್ನು ಅಂಧರಶಾಲೆ ಪಕ್ಕದಲ್ಲಿರುವ ಪಾರ್ಕಿನಲ್ಲಿ ಸ್ವಲ್ಪ ಮಟ್ಟದ ನಿರ್ವಹಣೆ ಇದ್ದರೂ ಕೇವಲ ಮರಗಳಿದ್ದು ಹುಲ್ಲುಹಾಸು ಸೇರಿದಂತೆ ಕೂರಲು ಬೆಂಚುಗಳು ಇಲ್ಲದೆ ನೆಪಮಾತ್ರಕ್ಕೆ ಪಾರ್ಕ್ ಆಗಿದೆ. ಹೌಸಿಂಗ್ ಬೋರ್ಡ್ ಬಡಾವಣೆಯ ಪಾರ್ಕ್ಗೂ ಪಂಪ್ ಹೌಸ್ ಇದ್ದರೂ ಸಹ, ಯಾವುದೇ ನಿರ್ವಹಣೆ ಇಲ್ಲದೆ ನಾಗರಿಕರಿಗೆ ಇದ್ದೂ ಇಲ್ಲದಂತಾಗಿದೆ.
ಉಳ್ಳವರಿಗೆ ಮನೆ ಹಂಚಿಕೆ
ಪುರಸಭೆ ವ್ಯಾಪ್ತಿಯ 23ನೇ ವಾರ್ಡ್ ಕರಡಿಪುರದಲ್ಲಿ ಬಡವ, ಎಸ್ಸಿ, ಎಸ್ಟಿ ಹಾಗೂ ಕೂಲಿ ಕಾರ್ಮಿಕರಿಗಾಗಿ ಸರ್ಕಾರದ ಹಲವು ಯೋಜನೆಗಳಡಿ ನಿವೇಶನ ಹಂಚಿ ಮನೆ ನಿರ್ಮಿಸಿ ಕೊಡುವಲ್ಲಿ ಬಹುತೇಕ ಉಳ್ಳವರಿಗೆ ಹಂಚುವ ಮೂಲಕ ಬಡವರನ್ನು ಮತ್ತು ಅರ್ಹ ಫಲಾನುಭವಿಗಳನ್ನು ನಿರ್ಲಕ್ಷಿಸಿದ್ದಾರೆ ಎಂಬುದು ನಾಗರಿಕರ ದೂರಾಗಿದೆ.
ಪಟ್ಟಣದಲ್ಲಿ ಎಲ್ಲ ವರ್ಗದಲ್ಲೂ ಸೂರಿಲ್ಲದವರು ಇದ್ದರೂ ಕೂಡ ಅರ್ಹ ಬಡ ಫಲಾನುಭವಿಗಳನ್ನು ಆಯ್ಕೆ ಮಾಡದೇ ಅಂದು ಅಧಿಕಾರದಲ್ಲಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಣ ಕೊಟ್ಟವರಿಗೆ ಮತ್ತು ಅವರ ಸಂಬಂಧಿಕರಿಗೆ ಬೇಕಾಬಿಟ್ಟಿ ನಿವೇಶನ ನೀಡಿ ಬಡವರಿಗೆ ದಕ್ಕಬೇಕಾದ ಸೌಲಭ್ಯಗಳು ಉಳ್ಳವರ ಪಾಲಾಗಿವೆ.
ಕರಡಿ ಪುರದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ, ಕೊಳಚೆ ನಿರ್ಮೂಲನಾ ಮಂಡಳಿ, ಸ್ಲಂ ಬೋರ್ಡ್ ಮತ್ತು ಲಿಡ್ಕರ್ ಯೋಜನೆ ಹೀಗೆ ಹಲವು ಯೋಜನೆಯಡಿ 1 ಸಾವಿರಕ್ಕೂ ಅಧಿಕ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೇ ಉಳ್ಳವರಿಗೆ ಹಂಚಿ ಬಡವರ ಪಾಲನ್ನು ನುಂಗಿದ್ದಾರೆ ಎನ್ನಲಾಗಿದೆ. ಅಲ್ಲದೆ ನಿವೇಶನ, ಮನೆ ಪಡೆದ ಫಲಾನುಭವಿಗಳು ಸರ್ಕಾರದ ಪ್ರಕಾರ ಮಂಜೂರಾದ ದಿನದಿಂದ 20 ವರ್ಷಗಳ ಕಾಲ ಯಾರಿಗೂ ಪರಭಾರೆ ಮಾಡಬಾರದು ಹಾಗೂ ಅದರಲ್ಲಿನ ತಮ್ಮ ಹಕ್ಕುಗಳನ್ನು ವರ್ಗಾಯಿಸದೇ ಸ್ವಯಂ ಉಪಯೋಗಿಸಬೇಕು ಎಂಬ ಷರತ್ತು ವಿಧಿಸಿದ್ದರೂ ನಿವೇಶನ, ಮನೆ ಮಾರಾಟ, ಕೈ ಬದಲಾವಣಗಳಾಗಿವೆ. ಕರಡಿಪುರ ಸೇರಿದಂತೆ ಪಟ್ಟಣದಲ್ಲಿ ಎಲ್ಲೆಲ್ಲಿ ಸರ್ಕಾರದ ಯೋಜನೆಗಳಡಿ ಬಡವರಿಗೆ ನಿವೇಶನ, ಮನೆ, ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಅಂತಹ ಕಡೆ ಸರ್ವೆ ಮಾಡಿಸಿ ಅರ್ಹ ಫಲಾನುಭವಿಗಳಿಗೆ ಮನೆ ಕೊಡಿಸಲು ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

