ಸಿದ್ಧಗಂಗಾ ಶ್ರೀಗೆ ಗುರುವಂದನೆ
ಕ.ಪ್ರ. ವಾರ್ತೆ, ತುಮಕೂರು, ಮೇ 18
ಮುಂಬರುವ ಜುಲೈನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧಗಂಗಾ ಮಠಾಧೀಶ, ಶತಾಯುಷಿ ಡಾ. ಶಿವಕುಮಾರಸ್ವಾಮಿಗಳಿಗೆ 107 ನೇ ಗುರುವಂದನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಸಿದ್ಧಗಂಗಾ ಮಠಕ್ಕೆ ಭಾನುವಾರ ಆಗಮಿಸಿದ್ದ ಸೋಮಣ್ಣ, ಡಾ.ಶಿವಕುಮಾರಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದ ಭಾವಿ ಪ್ರಧಾನಿ ನರೇಂದ್ರಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಕರೆಸಿ ಪಕ್ಷಾತೀತವಾಗಿ ಡಾ.ಶಿವಕುಮಾರಸ್ವಾಮಿಗಳ 107 ನೇ ಗುರುವಂದನೆ ಆಚರಿಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಶೆಟ್ಟರ್ ಸೇರಿದಂತೆ ಹಲವು ಮುಖಂಡರು ದೆಹಲಿಗೆ ತೆರಳಿ ಮೋದಿಯವರನ್ನು ಆಹ್ವಾನಿಸಲಿದೆ.
ನರೇಂದ್ರ ಮೋದಿಯವರ ಆಳ್ವಿಕೆಯಲ್ಲೇ ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ದೊರೆಯುವ ವಿಶ್ವಾಸವಿದೆ ಎಂದ ಸೋಮಣ್ಣ, ತ್ರಿವಿದ ದಾಸೋಹಿ ಶತಾಯುಷಿ ಡಾ.ಶಿವಕುಮಾರಸ್ವಾಮಿಗಳಿಗೆ ಎಂದೋ ಭಾರತರತ್ನ ಲಭಿಸಬೇಕಿತ್ತು ಎಂದರು.
ಒಳ ಒಪ್ಪಂದದಿಂದ ಸೋಲು: ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದದಿಂದ ತುಮಕೂರು ಸೇರಿದಂತೆ ಚಿಕ್ಕಬಳ್ಳಾಪುರ, ರಾಯಚೂರು, ಚಾಮರಾಜನಗರ ಇತರೆಡೆ ಬಿಜೆಪಿ ಸೋಲಬೇಕಾಯಿತು ಎಂದು ಸೋಮಣ್ಣ ಆರೋಪ ಮಾಡಿದರು.
ಕಾಂಗ್ರೆಸ್ ಮಾಜಿ ಸಂಸದ, ಮೈಸೂರಿನ ಎಚ್.ವಿಶ್ವನಾಥ್ ತಮ್ಮ ಸೋಲಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣ ಎಂದು ದೂಷಿಸಿದ್ದಾರೆ. ಬಿಜೆಪಿ ಬಗ್ಗೆ ಆರೋಪಿಸಿರುವ ವಿಶ್ವನಾಥ್ ಅವರು ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ರಾಯಚೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದನ್ನು ಮರೆ ಮಾಚುತ್ತಿದ್ದಾರೆ. ವಾಸ್ತವತೆ ಅರಿತು ಹೇಳಿಕೆ ನೀಡಲಿ ಎಂದು ಸೋಮಣ್ಣ ತಿರುಗೇಟು ನೀಡಿದರು.
ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಕೇವಲ ಸಾವಿರದ ಐನೂರು ಮತಗಳ ಅಂತರದಲ್ಲಿ ಸೋತಿದ್ದು, ಅಲ್ಲಿ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಇನ್ನು ಚಾಮರಾಜನಗರದಲ್ಲಿ ಜೆಡಿಎಸ್ ಕಳೆದ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಅತೀ ಕಡಿಮೆ ಪಡೆದಿದ್ದು, ಪ್ರತೀ ಬಾರಿ ಸುಮಾರು ಲಕ್ಷ ಮತ ಪಡೆಯುತ್ತಿದ್ದ ಬಿಎಸ್ಪಿ ಈ ಬಾರಿ ಕೇವಲ 20 ಸಾವಿರ ಪಡೆದಿದೆಯೆಂದರೆ ಯಾವ್ಯಾವ ಒಳ ಒಪ್ಪಂದಗಳು ಆಗಿವೆಯೆಂದು ಜನರೇ ಊಹಿಸಬಹುದು ಎಂದು ಮಾರ್ಮಿಕವಾಗಿ ನುಡಿದರು.
ಇನ್ನು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಅನುಕೂಲವಾಗುವಂತೆ ಒಕ್ಕಲಿಗ ಮತ ವಿಭಜಿಸಲು ಕಣಕ್ಕಿಳಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರನ್ನು ಸೋಲಿಸಲು ಹೋಗಿ ಮೂರನೇ ಸ್ಥಾನಕ್ಕಿಳಿದರು ಎಂದು ವ್ಯಂಗ್ಯವಾಡಿದರು.
ಸಿದ್ದು ನೈತಿಕತೆ ಪ್ರದರ್ಶಿಸಲಿ: ರಾಮಕೃಷ್ಣ ಹೆಗಡೆ ಅವರ ತತ್ವ ಸಿದ್ಧಾಂತ ತಮ್ಮ ರಾಜಕೀಯ ಜೀವನಕ್ಕೆ ಮಾರ್ಗದರ್ಶನ ಎನ್ನುತ್ತಿದ್ದ ಸಿಎಂ ಸಿದ್ಧರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ವಿಷಯದಲ್ಲಿ ನೈತಿಕತೆ ಪ್ರದರ್ಶಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದಾಗಿರುವುದರಿಂದ ಸಿಎಂ ರಾಜಿನಾಮೆ ಕೇಳಲ್ಲ. ಆದರೆ ಸದನದ ಒಳಗೆ-ಹೊರಗೆ ಹೆಗಡೆ ಅವರ ತತ್ವ ಸಿದ್ಧಾಂತ ಮಾತಾಡುತ್ತಿದ್ದ ಸಿದ್ಧರಾಮಯ್ಯ ರಾಜ್ಯದ ಕಾಂಗ್ರೆಸ್ ವೈಫಲ್ಯದ ವಿಷಯದಲ್ಲೂ ಅವರ ನಡೆ ಅನುಸರಿಸಲಿ. ನೈತಿಕತೆಯ ರಾಜಕಾರಣ ಮಾಡಲಿ ಎಂದು ಸೋಮಣ್ಣ ಸವಾಲೆಸಿದರು.
ಸಿದ್ದು ಜತೆ ಕೆಲಸ ಮಾಡಿದ್ದೆ: ಜನತಾದಳ ಸರಕಾರದಲ್ಲಿ ನಾನು ಸಹ ಸಿದ್ಧರಾಮಯ್ಯ ಅವರೊಡನೆ ಸಚಿವನಾಗಿ ಕೆಲಸ ಮಾಡಿದ್ದೆ. ಸಿದ್ದರಾಮಯ್ಯ ಮೊದಲಿನಿಂತಿಲ್ಲ. ಪಟೇಲರ ಕಾಲದಲ್ಲಿ ಡಿಸಿಎಂ ಆಗಿ ಜನಪ್ರಿಯತೆಗಳಿಸಿದ್ದ ಸಿದ್ಧರಾಮಯ್ಯ ಸಿಎಂ ಆದ ಮೇಲೆ ಕಳೆದು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಸಚಿವರಾಗುವ ಅರ್ಹತೆ: ಬಿಜೆಪಿಯಿಂದ ರಾಜ್ಯದಲ್ಲಿ ಗೆದ್ದಿರುವ 17 ಸಂಸದರು ಕೇಂದ್ರದಲ್ಲಿ ಸಚಿವರಾಗಲು ಅರ್ಹತೆ ಹೊಂದಿದ್ದಾರೆ. ಪ್ರಮುಖವಾಗಿ ಅನಂತಕುಮಾರ್, ಯಡಿಯೂರಪ್ಪ, ಸದಾನಂದಗೌಡರು ಮೋದಿ ಸಂಪುಟದಲ್ಲಿ ಮಂತ್ರಿಯಾಗುವ ಸಾಧ್ಯತೆಯಿದೆ ಎಂದು ಸೋಮಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ತುರುವೇಕೆರೆ ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಬಿಜೆಪಿ ಮುಖಂಡರಾದ ಹೆಬ್ಬಾಕರವಿ, ಕೊಪ್ಪಲ್ನಾಗರಾಜ್, ನಗರಸಭೆ ಮಾಜಿ ಸದಸ್ಯ ಬಸವರಾಜ್, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಅನೈತಿಕ ಒಪ್ಪಂದದಿಂದಾಗಿಜಿ.ಎಸ್.ಬಸವರಾಜುಗೆ ಸೋಲು
ಕಾಂಗ್ರೆಸ್-ಜೆಡಿಎಸ್ನ ಅನೈತಿಕ ಒಳ ಒಪ್ಪಂದದಿಂದ ತುಮಕೂರಿನ ಹಿರಿಯ ಸಂಸದರಾಗಿದ್ದ ಜಿ.ಎಸ್.ಬಸವರಾಜು ಸೋಲುವಂತಾಯಿತು. ಕ್ಷೇತ್ರಕ್ಕೆ ಲಕ್ಷಾಂತರ ಕೋಟಿ ವೆಚ್ಚದ ನಿಮ್ಜ್, ಎಚ್ಎಎಲ್ ಉತ್ಪಾದನ ಘಟಕ ತಂದರೂ ಸೋಲನುಭವಿಸಬೇಕಾಯಿತು. ಜಿಲ್ಲೆಯ ನೀರಾವರಿ ಯೋಜನೆ ಜಾರಿಗೆ ಸೋತ ಬಳಿಕವೂ ಶ್ರಮಿಸುತ್ತಿರುವ ಜಿಎಸ್ಬಿ ಸೋಲು ನಮಗೆ ತೀವ್ರ ನಿರಾಸೆ ತಂದಿದೆ. ದೇಶದಾದ್ಯಂತ ಬಿಜೆಪಿ ಗೆದ್ದಾಗ ತುಮಕೂರು ಕ್ಷೇತ್ರದಲ್ಲಿನ ಸೋಲು ದುರಂತವೆನಿಸಿದೆ ಎಂದು ಸೋಮಣ್ಣ ನೋವಿನಿಂದ ನುಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷರ ಸೋಲಿಗೆ ದೇವೇಗೌಡರೇ ಕಾರಣ
ಚುನಾವಣೆಗೂ ಮುನ್ನ ಜೆಡಿಎಸ್ ವರಿಷ್ಠರ ಮನೆಗೆ ತೆರಳಿ ದೇವೇಗೌಡರ ಆಶೀರ್ವಾದ ಪಡೆದಿದ್ದರಿಂದ ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಜೆಡಿಎಸ್ ಮತಗಳನ್ನು ಪಡೆದು ಗೆಲ್ಲಲು ಸಾಧ್ಯವಾಯಿತು. ಕ್ಷೇತ್ರದ ನಾಲ್ವರು ಜೆಡಿಎಸ್ ಶಾಸಕರಿಗೆ ತಟಸ್ಥರಾಗಿರಲು ಜೆಡಿಎಸ್ ವರಿಷ್ಠರು ಸೂಚಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಮಾಡಿಕೊಟ್ಟು, ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪನವರ ಸೋಲಿಗೆ ಕಾರಣರಾದರು ಎಂದು ಸೋಮಣ್ಣ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

