ಕಲ್ಲು ಗಣಿಗಾರಿಕೆಗೆ ಅವಕಾಶಕ್ಕೆ ಆಕ್ರೋಶ
ಕ.ಪ್ರ.ವಾರ್ತೆ ಕುಣಿಗಲ್ ಮೇ 19
ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕಿನ ಹುತ್ರಿದುರ್ಗ ಹೋಬಳಿಯ ಹಾಲುವಾಗಿಲು ಗ್ರಾಮದಲ್ಲಿ ಗುಂಡುತೋಪಿನ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಕಂದಾಯ ಇಲಾಖಾಧಿಕಾರಿಗಳಿಗೆ ಕಲ್ಲುಗಣಿಗಾರಿಕೆಗೆ ಅವಕಾಶ ನೀಡದಂತೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲೂಕಿನ ಹುತ್ರಿದುರ್ಗ ಹೋಬಳಿಯ ಹಾಲುವಾಗಿಲು ಗ್ರಾಮದ ಸರ್ವೆ ನಂ.100ರಲ್ಲಿನ ಗುಂಡುತೋಪು ಪ್ರದೇಶದಲ್ಲಿ 1994ರಲ್ಲಿ ಆಶ್ರಯ ಫಲಾನುಭವಿಗಳಿಗೆ ಸ್ಥಳೀಯ ಗ್ರಾಮಪಂಚಾಯಿತಿ ಹಂಚಿಕೆ ಮಾಡಿದ್ದು, ಎಂಟು ಮನೆಗಳನ್ನು ನಿರ್ಮಿಸಲಾಗಿದೆ. ಗುಂಡುತೋಪಿನಲ್ಲಿ ಮನೆ ನಿರ್ಮಿಸಿರುವುದಕ್ಕೆ ಸಂಬಂಧಿಸಿದಂತೆ ಗ್ರಾಮದ ಗಿರಿಯಪ್ಪಎಂಬುವವರು ರಾಜ್ಯ ಉಚ್ಚನ್ಯಾಯಾಲಯದ ಮೊರೆಹೋಗಿದ್ದು, ನ್ಯಾಯಾಲಯವು ಈ ಬಗ್ಗೆ ಪರಿಶೀಲಿಸಿ ಗುಂಡುತೋಪು ತೆರವುಗೊಳಿಸಿ, ಮನೆನಿರ್ಮಿಸಿಕೊಂಡಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಹಿನ್ನಲೆಯಲ್ಲಿ, ಉಪವಿಭಾಗಾಧಿಕಾರಿ ಆನಂದ್,ತಹಸೀಲ್ದಾರ್ ಶಂಭುಲಿಂಗಯ್ಯ, ಸೇರಿದಂತೆ ವಿವಿಧ ಕಂದಾಯ ಇಲಾಖಾಧಿಕಾರಿಗಳು ಪಿಡಿಓ ಮಂಜುನಾಥ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಆಶ್ರಯ ಫಲಾನುಭವಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.
ಆಕ್ಷೇಪ: ಈ ಸಮಯದಲ್ಲಿ ಕೆಲಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರೂ, ನ್ಯಾಯಾಲಯದ ಆದೇಶ ಮನವರಿಕೆ ಮಾಡಿಕೊಟ್ಟ ನಂತರ ಫಲಾನುಭವಿಗಳು ಸೂಕ್ತ ಪರ್ಯಾಯ ಸ್ಥಳದಲ್ಲಿ ನಿವೇಶನ ಸೇರಿದಂತೆ ಇತರೆ ಸವಲತ್ತುಗಳನ್ನು ಕಲ್ಪಿಸಿದಲ್ಲಿ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಇತ್ತ ಕಂದಾಯ ಇಲಾಖಾಧಿಕಾರಿಗಳು ಹಾಲುವಾಗಿಲು ಗ್ರಾಮದಲ್ಲಿರುವ ವಿಷಯ ತಿಳಿದ, ಹಾಲುವಾಗಿಲು, ಹುತ್ರಿ, ವೈ.ಜಿ.ಪುರ, ಕೆಂಪನಹಳ್ಳಿ, ಹಾಲುವಾಗಿಲು ಸುತ್ತಮುತ್ತಲ ಗ್ರಾಮಸ್ಥರು, ವೈ.ಜಿ.ಪುರ ಗ್ರಾಮದ ಗೋಮಾಳದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡುವುದನ್ನು ತೀವ್ರವಾಗಿ ವಿರೋಧಿಸಿದರು. ಯಾವುದೇ ಕಾರಣಕ್ಕು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮುತ್ತಿಗೆಹಾಕಿ, ಪ್ರತಿಭಟನೆ ನಡೆಸಿದರಲ್ಲದೆ, ಕಲ್ಲುಗಣಿಗಾರಿಕೆಗೆ ಅವಕಾಶ ಕಲ್ಪಿಸಿದಲ್ಲಿ ಅದರಿಂದಾಗುವ ಹಲವು ಸಮಸ್ಯೆಗಳ ಬಗ್ಗೆ ಸ್ಥಳದಲ್ಲೆ ಮನವರಿಕೆ ಮಾಡಿಕೊಟ್ಟು, ಅನುಮತಿ ನೀಡದಂತೆ ಒತ್ತಡ ಹೇರಿದರು.
ಉಗ್ರಪ್ರತಿಭಟನೆ: ಒಂದು ವೇಳೆ ಅನುಮತಿ ನೀಡಿದಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಗ್ರಾಮಸ್ಥರ ಮನವೊಲಿಸಲು ಕಂದಾಯ ಇಲಾಖೆ ಅಧಿಕಾರಿಗಳು ಪರದಾಡುವಂತಾಯಿತು. ಮಧ್ಯ ಪ್ರವೇಶಿಸಿದ ಸಿಪಿಐ ಧರ್ಮೇಂದ್ರ, ಪಿಎಸೈ ಗುರುಪ್ರಸಾದ್ ಸಿಬ್ಬಂದಿ ಗ್ರಾಮಸ್ಥರನ್ನು ಸಮಾಧಾನಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಹಂತದಲ್ಲಿ ಗ್ರಾಮಸ್ಥರು ಪೊಲೀಸರಿಗೆ ತಮ್ಮ ಆಹವಾಲು ಸಲ್ಲಿಸಿ, ಸ್ಥಳ ಪರಿಶೀಲನೆ ಮಾಡುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಪೊಲೀಸರು ಪ್ರಸ್ತಾವಿತ ಕಲ್ಲುಗಣಿಗಾರಿಕೆ ಪ್ರದೇಶವನ್ನು ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

