18 ತಿಂಗಳ ನಂತರ ಇಂದು ಪುರಸಭೆ ಸಾಮಾನ್ಯ ಸಭೆ
ಕುಣಿಗಲ್: ಸುಮಾರು 18 ತಿಂಗಳ ದೀರ್ಘ ಅವಧಿಯ ನಂತರ ಪುರಸಭೆಯಲ್ಲಿ ಜನಪ್ರತಿನಿಧಿಗಳ ಸಾಮಾನ್ಯ ಸಭೆ ಗುರುವಾರದಂದು ನಡೆಯಲಿದ್ದು, ಪಟ್ಟಣದಲ್ಲಿ ಶೀಘ್ರವಾಗಿ ಅಗಬೇಕಾಗಿರುವ ಕಾರ್ಯಗಳ ಬಗ್ಗೆ ಈ ಅವಧಿಯ ಜನಪ್ರತಿನಿಧಿಗಳಾದರೂ ಸ್ಪಂದಿಸುವರೆ ಎಂದು ಪಟ್ಟಣದ ನಾಗರಿಕರು ಕುತೂಹಲದಿಂದ ಎದುರು ನೋಡುವಂತಾಗಿದೆ.
ಕಳೆದ ಎರಡು ಅವಧಿಯಲ್ಲೂ ಜೆಡಿಎಸ್ ನೇತೃತ್ವದ ಜನಪ್ರತಿನಿಧಿಗಳ ಆಡಳಿತ ಪುರಸಭೆಯಲ್ಲಿ ನಡೆದಿದ್ದರೂ, ದಶಕಗಳ ಕಾಲ ನಡೆದ ಆಡಳಿತಾವಧಿಯಲ್ಲಿ ಯಾವುದೇ ಶಾಶ್ವತ ಕಾಮಗಾರಿಗೆ ಕ್ರಮ ಕೈಗೊಳ್ಳದೆ ಕೇವಲ ಅಶ್ವಾಸನೆಗಳಲ್ಲಿ ಕಾಲಕಳೆದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಪುರಸಭೆಯಲ್ಲಿ ಕೊಟ್ಯಂತರ ರು.ಗಳ ಅನುದಾನ ನೀರಿನಂತೆ ಖರ್ಚಾದರೂ ಪಟ್ಟಣದಲ್ಲಿ ಹೇಳಿಕೊಳ್ಳುವಂಥ ಶಾಶ್ವತ ಕಾಮಗಾರಿಗಳು ನಡೆಯದೆ ಬಹುತೇಕ ಎಲ್ಲಾ ವಾರ್ಡ್ಗಳಲ್ಲಿ ಬಾಕ್ಸ್ಚರಂಡಿ, ಅವಶ್ಯಕತೆಗಿಂತಲೂ ಹೆಚ್ಚಿನದಾಗಿ ಬೀದಿದೀಪಗಳು ಅಳವಡಿಕೆಯಾಗಿದೆ.
ಇನ್ನು ಶಾಶ್ವತ ಕಾಮಗಾರಿಯಾದ ಪುರಸಭೆ ಬಸ್ ನಿಲ್ದಾಣ ಮತ್ತು ಮಳಿಗೆ ನಿರ್ಮಾಣ ಕಾಮಗಾರಿ, ಪಟ್ಟಣದಲ್ಲಿ ಹಾದುಹೋಗಿರುವ ಹಳೇ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆ ಅಭಿವೃದ್ಧಿ ಕಾಮಗಾರಿ, ಪುರಸಭೆ ವ್ಯಾಪ್ತಿಯಲ್ಲಿನ ದೊಡ್ಡಕೆರೆಯಲ್ಲಿ ಸಾಕಷ್ಟು ನೀರಿದ್ದರೂ ಇದರ ಜೊತೆಯಲ್ಲಿ 80 ಕೊಳವೆ ಬಾವಿಗಳಿಂದಲೂ ಅಪಾರ ಪ್ರಮಾಣದ ಜಲಸಂಗ್ರಹಗಾರವಿದ್ದರೂ ನಾಗರಿಕರಿಗೆ ಸಮರ್ಪಕ ನೀರು ಪೂರೈಸದ ವಿಷಯ ಚರ್ಚೆಯ ಅಂಶವಾಗುವುದರಲ್ಲಿ ಸಂಶಯವಿಲ್ಲ.
ಬದ್ಧತೆ ಇಲ್ಲ: ಸುಸಜ್ಜಿತ ಪಾರ್ಕ್ ಸೇವೆ, ಕಳೆದ 15 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ (ವಿವಿಧ ಹಣಕಾಸುಯೋಜನೆಗಳಲ್ಲಿ)ಸಂತೇ ಮೈದಾನದಲ್ಲಿ ನಿರ್ಮಾಣಗೊಂಡ 84 ಮಳಿಗೆಗಳು ಪರಿಣಾಮಕಾರಿ ವಿಲೆಯಾಗಿ ಪುರಸಭೆಗೆ ಶಾಶ್ವತ ಆದಾಯ ಬರುವಂತೆ ಮಾಡುವಂತ ಕೆಲಸ ಬಗ್ಗೆ ನಿರ್ಲಕ್ಷ್ಯ ಕಾಣುತ್ತಿದೆ. ತಾಲೂಕು ಆಡಳಿತ ನಿರ್ಲಕ್ಷ್ಯವಹಿಸಿರುವ ಕಾರಣ ಈ ಮಳಿಗೆಗಳ ಬಾಡಿಗೆ ಕೆಲವೇ ಕೆಲ ವ್ಯಕ್ತಿಗಳ ಪಾಲಾಗಿ, ಪುರಸಭೆಗೆ ಆದಾಯ ಕೈತಪ್ಪುವಂತಾಗಿರುವುದು ನಿಜಕ್ಕೂ ಜನಪ್ರತಿನಿಧಿಗಳ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ.
ಅಪಾರ ಅನುಭವ: ಪ್ರಸ್ತುತ ಪುರಸಭೆಯ ಜನಪ್ರತಿನಿಧಿಗಳ ಸಭೆಯಲ್ಲಿ ಎಂಟಕ್ಕೂ ಮಂದಿ ಸದಸ್ಯರು ಪುನರಾಯ್ಕೆಯಾಗಿ ಅಪಾರ ಅನುಭವ ಹೊಂದಿದ್ದಾರೆ. ಈ ಬಾರಿ ಪಟ್ಟಣದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಯಾವ ರೀತಿ ಕೊಡುಗೆ ಕೊಡುತ್ತಾರೆ ಎಂಬ ಕುತೂಹಲ ನಾಗರಿಕರಿಗೆ ತೀವ್ರವಾಗಿದೆ. ಈಗಾಗಲೆ ಪುರಸಭೆ ಅಧ್ಯಕ್ಷಗಾದಿಗೇರಿರುವ ಕೆ.ಎಲ್. ಹರೀಶ್ ಮೂರನೇ ಬಾರಿ ಅಧ್ಯಕ್ಷಗಾದಿವಹಿಸಿಕೊಂಡಿದ್ದು, ಅಪಾರ ಅನುಭವ ಹೊಂದಿದ್ದಾರೆ.
ಆದರೆ, ಅವರ ಕಾಲವಧಿಯಲ್ಲೆ ಪಟ್ಟಣದ ಜನತೆಗೆ ಅತ್ಯಗತ್ಯವಾಗಿ ಬೇಕಾಗಿರುವ ಪ್ರಮುಖ ಶಾಶ್ವತ ಕಾಮಗಾರಿಗಳು ಈಡೇರುತ್ತದೆಯೆ ಎಂದು ಪಟ್ಟಣದ ಜನತೆ ಕುತೂಹಲದಿಂದ ಕಾಯುವಂತಾಗಿದೆ. ಪಟ್ಟಣದ ಜನತೆ ನಿರೀಕ್ಷೆಗೆ ಪುರಸಭೆ ಜನಪ್ರತಿನಿಧಿಗಳು ಪೂರಕವಾಗಿ ಸ್ಪಂದಿಸುತ್ತಾರೋ ನೋಡಬೇಕು.
ಆನಂದ್ಸಿಂಗ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

