ತುಮಕೂರು

ಕನ್ನಡ ಉಳಿವಿಗೆ ಅಭಿವೃದ್ಧಿಯೊಂದೇ ಮಾರ್ಗ

Published On :

ಕನ್ನಡಪ್ರಭ ವಾರ್ತೆ ್ಣ ತುಮಕೂರು ್ಣ ಮೇ 25
ಕನ್ನಡ ಉಳಿವಿಗೆ ಕನ್ನಡ ಶಾಲೆಗಳ ಅಭಿವೃದ್ಧಿಯೊಂದೇ ಮಾರ್ಗ ಎಂದು ಕಾಡಶೆಟ್ಟಿಹಳ್ಳಿ ಗ್ರಾಪಂ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾರ್ಮಿಕವಾಗಿ ನುಡಿದರು.
ಅವರು ಸರ್ಕಾರಿ ಹಿರಿಯ ಪಾಥಮಿಕ ಪಾಠಶಾಲೆ, ಕಾಡಶೆಟ್ಟಿಹಳ್ಳಿ, ಗುಬ್ಬಿ ತಾಲೂಕಿನಲ್ಲಿ ನಡೆದ ದಾಖಲಾತಿ ಆಂದೋಲನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರ ಬಿದ್ದ ಮೇಲೆ ಕನ್ನಡ ಭಾಷೆಯ ಉಳಿವು, ಅಳಿವಿನ ಬಗ್ಗೆ ಬಹಳಷ್ಟು ಚರ್ಚೆ, ಬಿರುಸಿನಿಂದ ನಡೆಯುತ್ತಿವೆ. ಆದರೆ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ಕನ್ನಡ ಶಾಲೆಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ರಾಜ್ಯದಲ್ಲೇ ಪ್ರಥಮ ಬಾರಿಗೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯೊಂದು, ಖಾಸಗೀ ಶಾಲೆಗಳಂತೆ, ತನ್ನಲ್ಲಿನ ಸೌಕರ್ಯ, ಶಿಕ್ಷಕರ ವಿದ್ಯಾರ್ಹತೆ, ಅನುಭವಗಳನ್ನೊಳಗೊಂಡ ಮಾಹಿತಿ ಪತ್ರವನ್ನು ಹೊರತಂದು ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಸರ್ಕಾರಿ ಶಾಲೆಗಳು ಇಂದು ಸುಸಜ್ಜಿತ ಸುಂದರ ಶಾಲಾ ಕಟ್ಟಡಗಳು, ಪಾಠೋಪಕರಣಗಳು, ಪೀಠೋಪಕರಣಗಳನ್ನು ಹಾಗೂ ವಿದ್ಯಾರ್ಹತೆ, ಶ್ರೇಷ್ಠ ಪ್ರತಿಭಾವಂತ ಶಿಕ್ಷಕ ವೃಂದವನ್ನು ಹೊಂದಿದ್ದು, ಖಾಸಗೀ ಶಾಲೆಗಳಿಗಿಂತ ಉತ್ತಮವಾಗಿವೆ. ಆದರೆ, ಸರ್ಕಾರದ ಮಂತ್ರಿಗಳಿಂದ, ಕೆಳಗಿನ ಶಿಕ್ಷಕರವರೆಗೆ ಒಂದು ರೀತಿಯ ಕೀಳರಿಮೆ ಅವರನ್ನು ಕಾಡುತ್ತಿದೆ. ಅದನ್ನು ಮೀರುವ ಪ್ರಯತ್ನವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾಡಶೆಟ್ಟಿಹಳ್ಳಿ ಶಾಲೆ ಮೊದಲ ಹೆಜ್ಜೆಯನ್ನು ಇಟ್ಟಿದೆ ಎಂದು ತಿಳಿಸಿದರು.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ನಮ್ಮ ಮಕ್ಕಳಿಗೆ ಉಚಿತ ಪಾಠ, ಆಟ, ಸಮವಸ್ತ್ರ, ಅಲ್ಲದೆ ಮುಖ್ಯವಾಗಿ ಮಕ್ಕಳ ಬೆಳವಣಿಗೆಗೆ ಪೂರಕವಾಗಿ, ಮಧ್ಯಾಹ್ನದ  ಬಿಸಿಯೂಟ ಹಾಗೂ ಹಾಲು ನೀಡುವ ವ್ಯವಸ್ಥೆ ಸರ್ಕಾರಿ ಶಾಲೆಗಳಲ್ಲಿ ಮಾತ್ರವಿದ್ದು, ಮಕ್ಕಳ ಸರ್ವಾಂರ್ಗೀ ಪ್ರಗತಿ ಸಾಧ್ಯ. ಆದ್ದರಿಂದ ಸಮುದಾಯ ಶಾಲೆಗಳೊಂದಿಗೆ  ಕೈ ಜೋಡಿಸಿ, ಸರ್ಕಾರಿ ಕನ್ನಡ ಶಾಲೆಗಳ ಬೆಳವಣಿಗೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಕೆ.ಎಸ್.ರಾಘವೇಂದ್ರ ಮಾತನಾಡಿ, ನಮ್ಮ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವ ಹಾಗೂ ಜವಾಬ್ದಾರಿಯುತವಾದದ್ದಾಗಿದೆ. ಮಾನವ ಸಂಪನ್ಮೂಲದ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಮೂಲವಾಗಿರುತ್ತದೆ. ಆದ್ದರಿಂದ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
 ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕಾಡಶೆಟ್ಟಿಹಳ್ಳಿ ಸತೀಶ್ ಅವರು, ತಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ದತ್ತು ಪಡೆದು, ಒಂದು ಅತ್ಯುತ್ತಮ ಶಾಲೆಯನ್ನಾಗಿ ಅಭಿವೃದ್ಧಿ ಪಡಿಸಿರುವುದು ಇತರೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ.
ಇದೇ ರೀತಿ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರುಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾದರೆ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಮಾಡಬಹುದೆಂದರು.
10 ಸಾವಿರ ಪುಸ್ತಕಗಳು: ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಟಿ.ಶಿವಶಂಕರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಸುಸಜ್ಜಿತ ಶಾಲಾ ಕೊಠಡಿಗಳು, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳ ಕಲಿಕೆಗೆ ಸುಂದರ ವಾತಾವರಣವಿದೆ. ಶಾಲೆಯು ಮಕ್ಕಳ ಮನೆ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಹಕಾರದೊಂದಿಗೆ ಸುಮಾರು ಹತ್ತು ಸಾವಿರ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ,
ತುಮಕೂರು ರೋಟರಿ ಪೂರ್ವದ ಸಹಕಾರದೊಂದಿಗೆ ಕಂಪ್ಯೂಟರ್  ಕೇಂದ್ರ, ಮಕ್ಕಳ ಚಲನಚಿತ್ರ ವೀಕ್ಷಣೆಗಾಗಿ ಶ್ರವಣ ದೃಶ್ಯ ಕೇಂದ್ರ ಮುಂತಾದ ಆಧುನಿಕ ಸೌಕರ್ಯಗಳನ್ನು ಹೊಂದಿರುತ್ತದೆ. ಅಲ್ಲದೆ, ಶಾಲೆಯಲ್ಲಿ ಮಕ್ಕಳಿಗೆ ಅನೇಕ ಸಾಂಸ್ಕೃತಿಕ, ಸಾಹಿತ್ಯಕ, ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಶಾಲೆಯಲ್ಲಿ ಅತ್ಯಂತ ಹೆಚ್ಚಿನ ವಿದ್ಯಾರ್ಹತೆ ಮತ್ತು ಅನುಭವವಿರುವ ಶಿಕ್ಷಕ ವೃಂದವಿದ್ದು, ಖಾಸಗಿ ಶಾಲೆಗಳಿಗಿಂತ ಶ್ರೇಷ್ಠ ಬೋಧನಾ ವ್ಯವಸ್ಥೆಯಿದ್ದು, ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಬೇಕೆಂದು ಆಗ್ರಹಿಸಿದರು.
ಎಸ್.ಡಿ.ಎಂ.ಸಿ. ಸದಸ್ಯರಾದ ಮೃತ್ಯುಂಜಯಪ್ಪ, ಶಿಕ್ಷಕರಾದ ನರಸಿಂಹಯ್ಯ, ಲಿಂಗದೇವರು, ತೇಜ, ಶಿವರತ್ನ, ನೀಲಾವತಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.