ರಂಗಭೂಮಿ ಸಮಾಜ ತಿದ್ದುವ ಪಾಠಶಾಲೆ ಇದ್ದಂತೆ
ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮೇ 27
ರಂಗಭೂಮಿ ಸಮಾಜವನ್ನು ತಿದ್ದುವ ಪಾಠಶಾಲೆಯಿದ್ದಂತೆ. ಬಹುಕಾಲದಿಂದಲೂ ಈ ಕೆಲಸವನ್ನು ಮಾಡುತ್ತಾ ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯವಸ್ಥಾಪಕ ಮಹದೇವಯ್ಯ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಮರೇಶ್ವರ ವಿಜಯ ನಾಟಕಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನಗಳ ಗ್ರಾಮೀಣ ರಂಗೋತ್ಸವ ಕಾರ್ಯಕ್ರಮದಲ್ಲಿ ರಂಗಗೌರವ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ರಂಗಭೂಮಿಯಲ್ಲಿ ತುಮಕೂರು ಜಿಲ್ಲೆಗೆ ವಿಶೇಷವಾದ ಸ್ಥಾನವಿದೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ವ್ಯಕ್ತಿಯ ಸಾಧನೆಗೆ ತಂದೆ, ತಾಯಿ,ಗುರು ಮತ್ತು ದೈವ ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ. ತಂದೆ, ತಾಯಿ, ಗುರುವಿನ ನಂತರ ದೈವಕ್ಕೆ ಸ್ಥಾನ ನೀಡಲಾಗಿದೆ. ಆದರೆ ನಮ್ಮ ಜನರು ಮೊದಲಿನ ಮೂವರನ್ನು ಕಡೆಗಣಿಸಿ ದೈವಕ್ಕೆ ಬೆಲೆಕೊಟ್ಟು ದುಃಸ್ಥಿತಿಗೆ ತಳ್ಪಡುತ್ತಿದ್ದಾರೆ. ಇದು ಸಲ್ಲದು ಎಂಬುದನ್ನೇ ನಮ್ಮ ನಾಟಕಗಳು ಹಲವು ವರ್ಷಗಳಿಂದ ಸಾರುತ್ತಾ ಬಂದಿವೆ. ಸಹಬಾಳ್ವೆಯಿಂದ ಮನುಷ್ಯನಿಗೆ ಒಳಿತಾಗುತ್ತದೆ ಎಂದು ತೋರಿಸಿಕೊಟ್ಟಿರುವ ಅನೇಕ ಕಥೆಗಳು ನಮ್ಮಲಿವೆ ಎಂದು ನುಡಿದರು.
ಕಲಿಯಬೇಕು: ಸರಕಾರ ಕಲಾವಿದರಿಗೆ ನೀಡುವ ಮಾಶಾಸನ,ಸಂಭಾವನೆಯನ್ನು ಹೆಚ್ಚಿಸಿದೆ. ಮಧ್ಯವರ್ತಿಗಳ ಹಾವಳಿಗೆ ಬಲಿಯಾಗದೆ ಕಲಾವಿದರು ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಂಡು ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಕಲಾವಿದರು ಪ್ರಶ್ನಿಸುವುದನ್ನು ಕಲಿಯಬೇಕು ಜೊತೆಗೆ ತಮ್ಮಲ್ಲಿ ನೈತಿಕತೆಯನ್ನು ಉಳಿಸಿಕೊಂಡು ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಗ್ರಾಮೀಣ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರು, ಗ್ರಾಮೀಣ ಮತ್ತು ನಗರ ಸಂಸ್ಕೃತಿ ಮೇಲ್ನೋಟಕ್ಕೆ ಭಿನ್ನವಾಗಿ ಕಂಡರೂ ಅವೆರಡಲ್ಲಿ ಅಂತಹ ವ್ಯತ್ಯಾಸವಿಲ್ಲ. ನಗರ ಸಂಸ್ಕೃತಿಗೆ ಮೂಲಕ ಗ್ರಾಮೀಣ. ಅಲ್ಲಿಂದ ಒಳ್ಳೆಯದು ಎಂದು ಕಂಡುಬರುವುದನ್ನು ತೆಗೆದು ತನ್ನಲ್ಲಿ ಅಳವಡಿಸಿಕೊಂಡು ಬೀಗುತ್ತಿದೆ. ಆದರೆ ಇಂದಿಗೂ ಗ್ರಾಮೀಣ ಸಂಸ್ಕೃತಿಗೆ ದೇಶದ ನಿಜವಾದ ಸಂಸ್ಕೃತಿ.ಇದರ ಒಂದು ಭಾಗವೇ ರಂಗಭೂಮಿ ಎಂದರು.
ವ್ಯತ್ಯಾಸವಿಲ್ಲ: ಶಿಷ್ಟ ಸಂಸ್ಕೃತಿಗೆ ಒಳಪಟ್ಟ ನೃತ್ಯ ಮತ್ತು ಗ್ರಾಮೀಣ ಸಂಸ್ಕೃತಿಯ ಮಾರಿ ಕುಣಿತ ಇವರೆಡಕ್ಕೂ ಅಂತಹ ವ್ಯತ್ಯಾಸವಿಲ್ಲ. ನಾಗರಿಕತೆಗೆ ಮಾರು ಹೋಗಿರುವ ಜನ ನೃತ್ಯವನ್ನೇ ಶ್ರೇಷ್ಠವೆಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಜಾನಪದ ಕುಣಿತಗಳು ಇಂದಿಗೂ ನಮ್ಮ ಜನರ ಜೀವನದಲ್ಲಿ ಹಾಸು ಹೊಕ್ಕಾಗಿವೆ ಎಂದರು. ತಮ್ಮ 82ರ ಇಳಿವಯಸ್ಸಿನಲ್ಲಿಯೂ ಚನ್ನಬಸಯ್ಯಗುಬ್ಬಿ ಅವರು ಉತ್ಸಾಹದಿಂದ ಇಂತಹ ನಾಟಕೋತ್ಸವ ಆಯೋಜಿಸಿರುವುದು ತುಂಬ ಸಂತಸದ ವಿಷಯ ಎಂದು ಹೊರೆಯಾಲ ದೊರೆಸ್ವಾಮಿ ನುಡಿದರು.
ತುಮಕೂರು ವಿವಿಯ ಲಲಿತಕಲಾ ವಿಭಾಗದ ಮುಖ್ಯಸ್ಥ ಡಾ. ಸಿದ್ದಲಿಂಗಯ್ಯ ಹಿರೇಮಠ್ ಮಾತನಾಡಿ,ನಾಟಕೋತ್ಸವಗಳನ್ನು ಸಂಘಟಿಸುವುದು ತೀರ ತ್ರಾಸದಾಯಕ ಕೆಲಸ. ಅದನ್ನು ಚನ್ನಬಸಯ್ಯ ಅವರು ಆ ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಪ್ರಾಂತ ರೈತ ಸಂಘದ ಬಿ.ಉಮೇಶ್ ಮಾತನಾಡಿ, ಜಾಗತೀಕರಣದ ಫಲವಾಗಿ ಶ್ರಮ ಸಂಸ್ಕೃತಿಯ ಮನರಂಜನಾ ಮಾಧ್ಯಮವಾಗಿದ್ದ ನಾಟಕಗಳು ಗ್ರಾಮೀಣ ಭಾಗದಿಂದ ನಗರಕ್ಕೆ ಸ್ಥಳಾಂತರಗೊಂಡಿವೆ. ಸೇವೆಯಾಗಿದ್ದ ಕಲೆ ಹಣದ ರೂಪ ಪಡೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

